ಮನೆಯೇ ಸಣ್ಣ ಮ್ಯೂಸಿಯಂ: ಮೂಡಬಾಗಿಲು ಅಭಿಲಾಶ್‌ ಥೋಮಸ್ ಹವ್ಯಾಸ

| Published : Jan 11 2024, 01:31 AM IST

ಸಾರಾಂಶ

ನರಸಿಂಹರಾಜಪುರ ತಾಲೂಕಿನ ಅರಳಿಕೊಪ್ಪ ಗ್ರಾಮದ ಮೂಡಬಾಗಿಲು ಅಭಿಲಾಶ್ ಥೋಮಸ್‌ ಅವರು ತಮ್ಮ ಕೃಷಿ ಜೀವನದ ನಡುವೆ ಹವ್ಯಾಸವಾಗಿ ಅಪರೂಪದ ದೇಶ, ವಿದೇಶಿ ನೋಟುಗಳು, ನಾಣ್ಯಗಳು, ಸ್ಟಾಂಪ್‌ ಹಾಗೂ ದೇಶದ ವಿಶೇಷ ಘಟನೆ ವರದಿ ಬಂದಿದ್ದ ಪೇಪರ್‌ ಕಟಿಂಗ್ಸ್ ಸಂಗ್ರಹ ಮಾಡಿದ್ದಾರೆ.

- ಅಪರೂಪದ ದೇಶ, ವಿದೇಶಿ ನೋಟು,ನಾಣ್ಯ, ಸ್ಟಾಂಪ್‌, ವಿಶೇಷ ಸುದ್ದಿಯ ನ್ಯೂಸ್ ಪೇಪರ್ ಕಟಿಂಗ್ಸ್ ಸಂಗ್ರಹ

ಯಡಗೆರೆ ಮಂಜುನಾಥ್,

ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರ

ಹಲವರು ತಮ್ಮ ವೃತ್ತಿಯ ಜೊತೆಗೆ ತಮಗೆ ಇಷ್ಟವಾದ ಹವ್ಯಾಸವನ್ನು ಬೆಳೆಸಿಕೊಂಡು ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಾರೆ. ಈ ನಿಟ್ಟಿನಲ್ಲಿ ತಾಲೂಕಿನ ಅರಳಿಕೊಪ್ಪ ಗ್ರಾಮದ ಮೂಡಬಾಗಿಲು ಅಭಿಲಾಶ್ ಥೋಮಸ್‌ ಅವರು ತಮ್ಮ ಕೃಷಿ ಜೀವನದ ನಡುವೆ ಹವ್ಯಾಸವಾಗಿ ಅಪರೂಪದ ದೇಶ, ವಿದೇಶಿ ನೋಟುಗಳು, ನಾಣ್ಯಗಳು, ಸ್ಟಾಂಪ್‌ ಹಾಗೂ ದೇಶದ ವಿಶೇಷ ಘಟನೆ ವರದಿ ಬಂದಿದ್ದ ಪೇಪರ್‌ ಕಟಿಂಗ್ಸ್ ಸಂಗ್ರಹ ಮಾಡಿದ್ದಾರೆ.

ಅಭಿಲಾಶ್‌ ಥೋಮಸ್‌ ಮೂಲತಃ ಕೇರಳ ರಾಜ್ಯದ ಕೋಟ್ಯಾಯಂ ಜಿಲ್ಲೆಯವರು. ಅಲ್ಲಿ ಕೃಷಿ ಕುಟುಂಬದಲ್ಲಿ ಜನಿಸಿದ ಅವರು ತಮ್ಮ 12ನೇ ವಯಸ್ಸಿನಲ್ಲೇ ಶಾಲೆಗೆ ಹೋಗುವಾಗ ಬೆಂಕಿ ಪೊಟ್ಟಣದ ಮೇಲೆ ಬರುತ್ತಿದ್ದ ಮೊಸಳೆ, ಬೀಗದ ಚಿತ್ರವನ್ನು ತೆಗೆದು ನೋಟು ಬುಕ್ಕಿನ ಮೇಲೆ ಅಂಟಿಸುವ ಹವ್ಯಾಸ ಪ್ರಾರಂಭಿಸಿದರು. ನಂತರ ಸ್ಟಾಂಪ್‌ ಗಳನ್ನು ಸಂಗ್ರಹಿ ಸುವ ಹವ್ಯಾಸ ಪ್ರಾರಂಭಿಸಿದರು. ನರಸಿಂಹರಾಜಪುರಕ್ಕೆ ಬಂದು ಕೃಷಿ ಪ್ರಾರಂಭಿಸಿದ ಅಭಿಲಾಶ್‌ ಥೋಮಸ್‌ ಅವರು ಸ್ಟಾಂಪ್‌ ಸಂಗ್ರಹಿಸುವ ಹವ್ಯಾಸ ಮುಂದುವರಿಸಿದರು. ಕಳೆದ 30 ವರ್ಷಗಳಲ್ಲಿ ಭಾರತ, ಕೀನ್ಯ, ಇಂಗ್ಲೆಂಡ್‌, ನೈಜೀರಿಯಾ, ಸೌದಿ ಅರೇಬಿಯಾ, ಆಸ್ಟ್ರೇಲಿಯಾ ಸೇರಿ ಪ್ರಪಂಚದ 125 ದೇಶಗಳ ಸ್ಟಾಂಪ್‌ಗಳನ್ನು ಸಂಗ್ರಹಿಸಿಟ್ಟಿದ್ದಾರೆ.

ನೋಟುಗಳು ಸಂಗ್ರಹ: ಸ್ಟಾಂಪಿನ ಜೊತೆಗೆ ದೇಶ, ವಿದೇಶಿ ನೋಟುಗಳು, ನಾಣ್ಯಗಳು ಇವರ ಸಂಗ್ರಹದಲ್ಲಿದೆ.75 ದೇಶದ ನಾಣ್ಯಗಳು, 85 ರಾಷ್ಟ್ರದ ನೋಟುಗಳು ಸಂಗ್ರಹಿಸಿದ್ದಾರೆ. ಇದಕ್ಕಾಗಿ ಹಲವಾರು ಕಡೆ ಸುತ್ತಾಡಿ ಮಿತ್ರರಿಂದ ನಾಣ್ಯ, ನೋಟು ಸಂಗ್ರಹಿಸಿದ್ದಾರೆ. ಭಾರತ ದೇಶದ ಹಳೆಯ ನಾಣ್ಯ, ನೋಟು ಸಹ ಇದೆ.

ನ್ಯೂಸ್ ಪೇಪರ್‌ ಕಟಿಂಗ್ಸ್: ಅವರು ಕೇರಳ ರಾಜ್ಯದಲ್ಲಿದ್ದಾಗ ಹಲವು ದಿನ ಪತ್ರಿಕೆಗಳಲ್ಲಿ ಬಂದ ವಿಶೇಷ ಸುದ್ದಿಗಳ ಕಟಿಂಗ್ಸ್‌ ಮಾಡಿ ತೆಗೆದು ಇಡುವ ಹವ್ಯಾಸ ಪ್ರಾರಂಭಿಸಿದ್ದರು. ಕೇರಳದ ಮನೋರಮ, ದೀಪಿಕ ಸೇರಿದಂತೆ ಹಲವಾರು ದಿನ ಪತ್ರಿಕೆ ಗಳಲ್ಲಿ ಬಂದ ವಿಶೇಷ ಸುದ್ದಿಗಳು ಇವರ ಸಂಗ್ರಹದಲ್ಲಿದೆ. ಇಂದಿರಾ ಗಾಂಧಿ ತೀರಿಹೋದ ದಿನದ ನ್ಯೂಸ್‌, 4 ಸಾವಿರ ಕಾರು ಸುಟ್ಟು ಹೋದ ದೃಶ್ಯದ ವರದಿ, 1 ನೇ ಕ್ಲಾಸಿನ ಮಗು ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳಿದ ಪೋಟೋ ಹಾಗೂ ವರದಿ, ಕೆಸರಿನಲ್ಲಿ ಮುಳುಗಿದ್ದ ಆನೆಯನ್ನು ಮತ್ತೊಂದು ಆನೆ ಎತ್ತುವ ವರದಿ ಸೇರಿದಂತೆ ವಿಶೇಷವಾದ ವರದಿ ಪೇಪರ್‌ ಕಟಿಂಗ್ಸ್‌ ಇವರ ಸಂಗ್ರಹದಲ್ಲಿದೆ.

ಕೃಷಿಯಲ್ಲೂ ಸಾಧನೆ: ಅಭಿಲಾಶ್‌ ಥೋಮಸ್‌ ಅ‍ವರು ಮೂಡಬಾಗಿಲಿನ ಬಸವನಗದ್ದೆಯಲ್ಲಿ 5 ಎಕ್ರೆ ತೋಟ ಮಾಡಿ ಕೊಂಡಿದ್ದು ಇದರಲ್ಲೂ ವಿಶೇಷ ಸಾಧನೆ ಮಾಡಿದ್ದಾರೆ. ಅಡಿಕೆ ಜೊತೆಗೆ ನಾಟೀ ಕೋಳಿ, ಹಸು ಸಾಕಾಣಿಕೆ, ಹೂವಿನ ಗಿಡ, ನರ್ಸರಿ, ಹಕ್ಕಿಗಳ ಸಾಕಾಣಿಕೆ, ಮೀನು ಸಾಕಾಣಿಕೆ ಮಾಡಿ ಸಾಧನೆ ಮಾಡಿದ್ದಾರೆ. ಇವರ ಸಾಧನೆಗೆ ಪತ್ನಿ ಮೌಳಿ ಅಭಿಲಾಶ್‌, ಪುತ್ರಿ ಏಂಜೆಲ್ ಮರಿಯಾ ಹಾಗೂ ಪುತ್ರ ಅಶ್ವಿನ್ ಅಭಿಲಾಶ್ ಸಹಕಾರ ನೀಡಿದ್ದಾರೆ. ---- ಕೋಟ್ ----

ನಾನು ಸಂಗ್ರಹ ಮಾಡಿರುವ ಅಪರೂಪದ ನೋಟು, ನಾಣ್ಯ, ಸ್ಟಾಂಪ್‌ ಗಳನ್ನು ಶಾಲೆಗಳಲ್ಲಿ ಪ್ರದರ್ಶನ ಮಾಡಿದ್ದೇನೆ. ಮಕ್ಕಳಿಗೆ ದೇಶ , ವಿದೇಶಿ ನೋಟು, ನಾಣ್ಯಗಳನ್ನು ನೋಟುವ ಅವಕಾಶ ಸಿಗುತ್ತದೆ. ಮುಂದಿನ ಪೀಳಿಗೆಯ ಮಕ್ಕಳಿಗೆ ದೇಶ ವಿದೇಶದಲ್ಲೂ ಇಂತಹ ನಾಣ್ಯ, ನೋಟುಗಳು ಇದೆ ಎಂಬುದು ಗೊತ್ತಾಗಲಿದೆ. ಕೇವಲ ಹವ್ಯಾಸಕ್ಕಾಗಿ ಅಪರೂಪದ ವಸ್ತುಗಳನ್ನು ಸಂಗ್ರಹಿಸಿದ್ದೇನೆ.

ಅಭಿಲಾಶ್‌ ಥೋಮಸ್,

ಮೂಡಬಾಗಿಲು, ನರಸಿಂಹರಾಜಪುರ ತಾಲೂಕು