ಸಾರಾಂಶ
ಕನ್ನಡಪ್ರಭ ವಾರ್ತೆ ವಿಜಯಪುರ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ. ಭಯೋತ್ಪಾದನೆ ಚಟುವಟಿಕೆಯಲ್ಲಿರುವ ಆರೋಪಿಗಳು ರಾಜಾರೋಷವಾಗಿ ಮೋಜುಮಸ್ತಿ ಮಾಡುತ್ತಾರೆ. ನಿಯಮ ಬಾಹಿರವಾಗಿ ಜೈಲಿನೊಳಗೆ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಇದನ್ನು ನೋಡಿದರೆ ಗೃಹ ಇಲಾಖೆ ವಿಫಲವಾಗಿದ್ದು, ಗೃಹಮಂತ್ರಿಗಳು ರಾಜೀನಾಮೆ ಕೊಡಬೇಕು ಎಂದು ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಒತ್ತಾಯಿಸಿದರು.ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರದಲ್ಲಿ ಜನರನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ರೈತರ ಬಗ್ಗೆ, ಬಡವರ ಬಗ್ಗೆ, ಜನಸಾಮಾನ್ಯರ ಬಗ್ಗೆ ಇವರಿಗೆ ಕಾಳಜಿಯೇ ಇಲ್ಲ. ರಾಜ್ಯ ಸರ್ಕಾರದ ಕುರ್ಚಿ ಜಗ್ಗಾಟದಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ ಹಾಳಾಗಿದೆ. ಯಾರು ಸಿಎಂ, ಯಾರು ಡಿಸಿಎಂ ಆಗಬೇಕು ಎಂದು ಅವರವರೇ ಕಚ್ಚಾಡುತ್ತಿದ್ದಾರೆ. ದೇಶದಲ್ಲಿ ಆಂತರಿಕ ಭಯೋತ್ಪಾದಕರು ಹೆಚ್ಚಾಗಿದ್ದಾರೆ, ಮೊದಲು ಅದನ್ನು ಮಟ್ಟ ಹಾಕಬೇಕು. ಜೈಲುಗಳಲ್ಲಿ ಕೈದಿಗಳಿಗೆ ಐಶಾರಾಮಿ ಜೀವನ ನಡೆಸಲು ಅನುಕೂಲ ಮಾಡಿರುವುದನ್ನು ಖಂಡಿಸುತ್ತೇವೆ ಎಂದರು. ಜೈಲಿನೊಳಗೆ ಇರುವವರಿಗೆ ಇಂತಹ ಐಶಾರಾಮಿ ಸೌಲಭ್ಯ ಕೊಟ್ಟರೆ ಬೇರೆ ಕೈದಿಗಳಿಗೂ ಪ್ರಚೋದನೆ ನೀಡಿದಂತಾಗುತ್ತದೆ. ಉಗ್ರರಿಗೆ ಅಡಗಿಕೊಳ್ಳಲು ಕರ್ನಾಟಕ ಸುರಕ್ಷಿತ ಸ್ಥಳವಾದಂತಾಗಿದೆ. ಸರ್ಕಾರಗಳು ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಹಿಂದೆ ಬೆಂಗಳೂರಿನಲ್ಲಿ ಆಟೋ ಬ್ಲಾಸ್ಟ್, ಕುಕ್ಕರ ಬ್ಲಾಸ್ಟ್, ರಾಮೇಶ್ವರ ಕೆಫೆ ಬ್ಲಾಸ್ಟ್ ಸೇರಿದಂತೆ ಅನೇಕ ಅವಘಡಗಳು ನಡೆಯುತ್ತಿವೆ. ಇದೆಲ್ಲವನ್ನೂ ರಾಜ್ಯ ಸರ್ಕಾರ ಕಠಿಣ ಕ್ರಮ ಕೈಗೊಂಡು ಹತ್ತಿಕ್ಕಬೇಕು ಎಂದು ಆಗ್ರಹಿಸಿದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಪ್ರಧಾನ ಕಾರ್ಯದರ್ಶಿ ಮಳುಗೌಡ ಪಾಟೀಲ, ಕಾಸುಗೌಡ ಬಿರಾದಾರ, ಸಾಬು ಮಾಶ್ಯಾಳ, ಈರಣ್ಣ ರಾವೂರ, ವಿಜಯ ಜೋಶಿ ಉಪಸ್ಥಿತರಿದ್ದರು.
;Resize=(128,128))
;Resize=(128,128))
;Resize=(128,128))