ತಲೆಬುರುಡೆ ತನಿಖೆ ವಿಚಾರ ಇಂದು ಸದನದಲ್ಲಿ ಗೃಹ ಸಚಿವರ ಉತ್ತರ: ದಿನೇಶ್‌ ಗುಂಡೂರಾವ್‌

| Published : Aug 16 2025, 12:00 AM IST

ತಲೆಬುರುಡೆ ತನಿಖೆ ವಿಚಾರ ಇಂದು ಸದನದಲ್ಲಿ ಗೃಹ ಸಚಿವರ ಉತ್ತರ: ದಿನೇಶ್‌ ಗುಂಡೂರಾವ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ವಿಚಾರದಲ್ಲಿ ಗೃಹ ಸಚಿವರು ಮಾತ್ರವಲ್ಲ ಮುಖ್ಯಮಂತ್ರಿಗಳೂ ಉತ್ತರ ನೀಡಬಹುದು. ಇದರಲ್ಲಿ ಮುಚ್ಚಿ ಹಾಕುವಂತದ್ದು ಏನೂ ಇಲ್ಲ. ದರ್ಶನ್‌, ಪ್ರಜ್ವಲ್‌ ರೇವಣ್ಣ ಪ್ರಕರಣಗಳೇ ಇರಲಿ, ನಿಜಾಂಶ ಹೊರಬೇಕು. ತಪ್ಪಾಗಿದ್ದರೆ ಶಿಕ್ಷೆಯಾಗಬೇಕು. ಅಮಾಯಕರಿಗೆ ತೊಂದರೆ ಆಗಬಾರದು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಧರ್ಮಸ್ಥಳ ಗ್ರಾಮದಲ್ಲಿ ಹಲವಾರು ಮೃತದೇಹಗಳನ್ನು ಹೂತುಹಾಕಲಾಗಿದೆ ಎಂಬ ಅನಾಮಿಕ ದೂರುದಾರನ ಆರೋಪಕ್ಕೆ ಸಂಬಂಧಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ಪಾರದರ್ಶಕವಾಗಿ, ನಿಷ್ಪಕ್ಷಪಾತವಾಗಿ ಯಾವುದೇ ಒತ್ತಡಕ್ಕೆ ಮಣಿಯದೆ ನಿಜಾಂಶವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಈ ತನಿಖೆಯ ಕುರಿತಂತೆ ಸೋಮವಾರ ಗೃಹ ಸಚಿವರು ವಿಧಾನಸಭಾ ಅಧಿವೇಶನದಲ್ಲಿ ಸದನದಲ್ಲಿ ಉತ್ತರ ನೀಡಲಿದ್ದಾರೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.ಮಂಗಳೂರು ನೆಹರೂ ಮೈದಾನದಲ್ಲಿ ಶುಕ್ರವಾರ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ಬಳಿಕ ಅವರು ಸುದ್ದಿಗಾರರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

ಈ ವಿಚಾರದಲ್ಲಿ ಗೃಹ ಸಚಿವರು ಮಾತ್ರವಲ್ಲ ಮುಖ್ಯಮಂತ್ರಿಗಳೂ ಉತ್ತರ ನೀಡಬಹುದು. ಇದರಲ್ಲಿ ಮುಚ್ಚಿ ಹಾಕುವಂತದ್ದು ಏನೂ ಇಲ್ಲ. ದರ್ಶನ್‌, ಪ್ರಜ್ವಲ್‌ ರೇವಣ್ಣ ಪ್ರಕರಣಗಳೇ ಇರಲಿ, ನಿಜಾಂಶ ಹೊರಬೇಕು. ತಪ್ಪಾಗಿದ್ದರೆ ಶಿಕ್ಷೆಯಾಗಬೇಕು. ಅಮಾಯಕರಿಗೆ ತೊಂದರೆ ಆಗಬಾರದು ಎಂದವರು ಹೇಳಿದರು.ರಾಷ್ಟ್ರೀಯ ವಾಹಿನಿಗೆ ಸಂದರ್ಶನ ನೀಡುವ ಮೂಲಕ ದೂರುದಾರ ತನ್ನ ಗುರುತು ಪತ್ತೆಗೆ ಕಾರಣವಾಗುತ್ತಿದ್ದಾನೆ ಎಂಬ ಸುದ್ದಿಗಾರರ ಪ್ರಶ್ನೆಗೆ, ದೂರುದಾರ ಏನು ಹೇಳಿಕೆ ನೀಡಿದ್ದಾರೆ ಎಂಬುದು ನನಗೆ ತಿಳಿದಿಲ್ಲ. ಆದರೆ ಕಾನೂನು ಪ್ರಕಾರ ಯಾವ ಕ್ರಮ ಆಗಬೇಕು ಎಂಬ ಬಗ್ಗೆ ಪೊಲೀಸ್‌ ಇಲಾಖೆ ತೀರ್ಮಾನಿಸಲಿದೆ. ಈ ವಿಚಾರ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿದೆ. ಆರೋಪ, ಪ್ರತ್ಯೋರೋಪಗಳಿಗೆ ಮಾಧ್ಯಮದಲ್ಲೂ ವ್ಯಾಪಕ ಪ್ರಚಾರ ದೊರಕಿದೆ. ಆರೋಪಗಳೆಲ್ಲವೂ ಗಂಭೀರವಾದ ಸಂಗತಿಗಳು. ಹಾಗಾಗಿ ಇದೀಗ ಉತ್ತಮ ಅಧಿಕಾರಿಗಳ ತನಿಖೆಯಿಂದ ಯಾರಿಗೂ ಅನುಮಾನ ಇರದು ಎಂದು ಸಚಿವರು ಹೇಳಿದರು.

ಯಾರ್‍ಯಾರು ಏನೇನೋ ಹೇಳಿಕೆ ನೀಡುವುದಕ್ಕೆ ನಾವು ಪ್ರತಿಕ್ರಿಯೆ ನೀಡಲು ಆಗದು. ನಿಜಾಂಶ ಏನಿದೆ, ಸಾಕ್ಷ್ಯ ಏನಿದೆ ಅದರ ಪ್ರಕಾರ ಸರ್ಕಾರ ಹಾಗೂ ಪೊಲೀಸ್‌ ಇಲಾಖೆ ನಡೆದುಕೊಳ್ಳಲಿದೆ ಎಂದರು.

ಎಸ್‌ಐಟಿಗೆ ಬೇರೆ ಬೇರೆ ದೂರುಗಳು ದಾಖಲಾಗುತ್ತಿದ್ದು, ಅದರ ತನಿಖೆಯನ್ನು ನಡೆಸಲಿದೆಯೇ ಎಂಬ ಪ್ರಶ್ನೆಗೆ, ದೂರು ಯಾರೂ ಕೊಡಬಹುದು. ತನಿಖೆ ನಡೆಸುವ ಬಗ್ಗೆ ಎಸ್‌ಐಟಿ ನಿರ್ಧರಿಸಲಿದೆ. ದೇಶದಲ್ಲಿ ಇಷ್ಟುದೊಡ್ಡ ಸುದ್ದಿ ಆದಾಗ ಒಳ್ಳೆಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಅಪಪ್ರಚಾರ ಮಾಡುವವರಿಗೆ ಸಣ್ಣ ವಿಷಯ ಸಾಕು. ಸತ್ಯವೇ ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.ಒತ್ತಡ ರಹಿತ ತನಿಖೆ ನಡೆಯುತ್ತಿದೆ: ನಾನು ಅನೇಕ ಸಂಘಟನೆಗಳು, ಅದರಲ್ಲಿ ಎಡಪಂಥೀಯ ಸಂಘಟನೆಗಳು ಸೇರಿ ಒತ್ತಡ ಹಾಕಿದ್ದರು ಎಂದಿರುವುದು. ಹಾಗಾಗಿ ಎಸ್‌ಐಟಿ ತನಿಖೆಗೆ ಆದೇಶಿಸಲಾಯಿತು. ಧರ್ಮಸ್ಥಳದ ವೀರೇಂದ್ರ ಹೆಗ್ಗಡೆಯವರೂ ಎಸ್‌ಐಟಿ ತನಿಖೆಯಾದರೆ ಒಳ್ಳೆಯದು ಎಂದಿದ್ದರು. ನ್ಯಾಯಾಧೀಶ ಗೋಪಾಲ ಗೌಡರೂ ಹೇಳಿಕೆ ನೀಡಿದ್ದರು. ನಾನು ದ.ಕ. ಜಿಲ್ಲಾ ಪೊಲೀಸರೇ ತನಿಖೆ ಮಾಡುತ್ತಾರೆ, ಎಸ್‌ಐಟಿ ಅಗತ್ಯ ಇಲ್ಲ ಎಂದು ಹೇಳಿದ್ದೆ. ಆದರೆ ಎಸ್‌ಐಟಿ ಮಾಡಿದ್ದೇ ಒಳ್ಳೆಯದಾಯಿತು. ಇಲ್ಲವಾದರೆ ಸ್ಥಳೀಯ ಪೊಲೀಸರು ಸರಿಯಾಗಿ ಮಾಡಿಲ್ಲ ಎಂಬ ಗೂಬೆ ಕೂರಿಸುವ ಕೆಲಸ ಆಗುತ್ತಿತ್ತು. ಉತ್ತಮ ಅಧಿಕಾರಿಗಳ ಮೂಲಕ ಒತ್ತಡವಿಲ್ಲದೆ ತನಿಖೆ ನಡೆಯುತ್ತಿದೆ ಎಂದರು.

ರಾಜಕೀಯ ಲಾಭ ನೋಡುವ ಬಿಜೆಪಿ: ಬಿಜೆಪಿಯವರಿಗೆ ರಾಜಕೀಯ ಲಾಭ ನೋಡುವವರು. ಅವರಿಗೆ ಇಂತಹದ್ದೇ ವಿಷಯಗಳು ಬೇಕು. ಮೊದಲು 10 ದಿನ ಏನೂ ಮಾತನಾಡಿಲ್ಲ. ಈಗ ವಿಷಯಗಳು ಹೊರ ಬರುತ್ತಿರುವಾಗ ಅದನ್ನು ತಮ್ಮ ರಾಜಕೀಯ ಲಾಭಕ್ಕೆ ಹೇಗೆ ಉಪಯೋಗಿಸಿಕೊಳ್ಳಬಹುದು ಎಂಬುದು ಅವರ ಲೆಕ್ಕಾಚಾರ. ನಮಗೆ ಅದು ಬೇಕಾಗಿಲ್ಲ. ನಮಗೆ ಸತ್ಯಾಂಶ ಹೊರಬರಬೇಕು. ಬಿಜೆಪಿಯವರದ್ದು ಇದು ಹಳೆಯ ಚಾಳಿ. ಧಾರ್ಮಿಕ ವಿಚಾರವನ್ನು ಉಪಯೋಗಿಸಿಕೊಳ್ಳುವುವುದೇ ಅವರ ಚಾಳಿ. ಬಿಜೆಪಿ ಮತ್ತು ಸಂಘ ಪರಿವಾರ ಅಪಪ್ರಚಾರದಲ್ಲೇ ನಂಬಿಕೆ ಇರಿಸಿದವರು ಎಂದರು.------------

ಷಡ್ಯಂತರ ಅಲ್ಲಗಳೆಯಲಾರೆ: ಸಚಿವ ದಿನೇಶ್‌ ಗುಂಡೂರಾವ್‌

ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂಳಿದ ಆರೋಪದ ಹಿಂದೆ ಯಾವುದೇ ಷಡ್ಯಂತರ ಇರಬಹುದು ಎಂಬ ಆರೋಪವನ್ನೂ ಅಲ್ಲಗಳೆಯಲಾಗದು. ಅದು ಸಾಬೀತುಗೊಳ್ಳಬೇಕಾದರೆ ತನಿಖೆ ಮೂಲಕವೇ ಗೊತ್ತಾಗುವುದು. ಹಾಗಾಗಿ ಎಲ್ಲ ವಿಚಾರದಲ್ಲೂ ತನಿಖೆ ಆಗಲಿದೆ ಎಂದು ಸಚಿವ ದಿನೇಶ್‌ ಗುಂಡೂರಾವ್‌ ಹೇಳಿದರು.ಉತ್ಖನನ ಇನ್ನು ಎಲ್ಲಿಯವರೆಗೆ ನಡೆಯಲಿದೆ ಎಂಬ ಸುದ್ದಿಗಾರರ ಪ್ರಶ್ನೆಗೆ, ಅದು ಎಸ್‌ಐಟಿ ನಿರ್ಧರಿಸಲಿದೆ. ಉತ್ಖನನ ಮುಂದುವರಿಯಲಿದೇ, ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಗೃಹ ಸಚಿವರು ಸೋಮವಾರ ಸದನದಲ್ಲಿ ತಿಳಿಸಲಿದ್ದಾರೆ ಎಂದರು.

ಕ್ಷೇತ್ರಕ್ಕೂ ತನಿಖೆಗೂ ಸಂಬಂಧ ಇಲ್ಲ

ಧರ್ಮಸ್ಥಳ ಪುಣ್ಯಕ್ಷೇತ್ರದ ಹೆಸರು ಕೆಡುತ್ತಿದೆ ಎಂಬ ವಿಚಾರಕ್ಕೂ ತನಿಖೆಗೂ ಸಂಬಂಧವೇ ಇಲ್ಲ. ಮಂಜುನಾಥ ಸ್ವಾಮಿ ಕ್ಷೇತ್ರದ ಪಾವಿತ್ರ್ಯತೆ ಹಾಳಾಗಿಲ್ಲ. ಕ್ಷೇತ್ರದಲ್ಲಿ ಅಗೆದಿಲ್ಲ. ಕಾಡಿನಲ್ಲಿ ಅಗೆದಿರುವುದು. ಬಿಜೆಪಿಯವರು ಅನಗತ್ಯವಾಗಿ ತಿರುಚಿ ಉದ್ದೇಶಪೂರ್ವಕವಾಗಿ ಹೆಸರು ಹಾಳು ಮಾಡುತ್ತಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಸಚಿವ ದಿನೇಶ್‌ ಗುಂಡೂರಾವ್‌ ಈ ಪ್ರತಿಕ್ರಿಯೆ ನೀಡಿದರು.------------

ಧರ್ಮಸ್ಥಳ ಗ್ರಾಮದಲ್ಲಿ ಅನಾಥ ಶವಗಳನ್ನು ಹೂಳಿದ ಆರೋಪದ ಹಿಂದೆ ಯಾವುದೇ ಷಡ್ಯಂತ್ರ ಇರಬಹುದು ಎಂಬ ಆರೋಪವನ್ನೂ ಅಲ್ಲಗಳೆಯಲಾಗದು. ತನಿಖೆ ಮೂಲಕವೇ ಅದು ಹೊರಬರಬೇಕಿದೆ. ಆದರೆ ಅದು ಸಾಬೀತುಗೊಳ್ಳಬೇಕಾದರೆ ತನಿಖೆ ಮೂಲಕವೇ ಗೊತ್ತಾಗುವುದು.

-ದಿನೇಶ್‌ ಗುಂಡೂರಾವ್‌, ಉಸ್ತುವಾರಿ ಸಚಿವರು, ದ.ಕ. ಜಿಲ್ಲೆ

---------------