ಸಾರಾಂಶ
ಕರ್ನಾಟಕ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಶ್ರೀಮಂತವಾಗಿದೆ. ಅನೇಕ ರಾಜವಂಶಗಳು ಕರ್ನಾಟಕವನ್ನು ಆಳಿವೆ. ಸಂಸ್ಕೃತಿ, ಭಾಷೆ, ಕಲೆ, ವಾಸ್ತುಶಿಲ್ಪ, ನೃತ್ಯ, ಸಂಗೀತ ಮತ್ತು ಪ್ರವಾಸೋದ್ಯಮ ಪ್ರಭಾವಗಳ ಸಮ್ಮಿಳನವಾಗಿದೆ. ಕರ್ನಾಟಕ ಒಂದು ರಾಜ್ಯ ಹಲವು ಜಗತ್ತುಗಳನ್ನು ಒಳಗೊಂಡಿದೆ.
ಧಾರವಾಡ:
ಜಾಗತಿಕ ಮಟ್ಟದಲ್ಲಿ ಕರ್ನಾಟಕ ಹಲವು ವೈವಿಧ್ಯತೆಗಳ ತವರೂರಾಗಿದ್ದು ವಿದ್ಯಾರ್ಥಿಗಳು ನಮ್ಮ ನಾಡಿನ ಬಗ್ಗೆ ಅಭಿಮಾನ ಹೊಂದಬೇಕೆಂದು ಗ್ರಾಮ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರವೀಂದ್ರ ಹೊಂಬಳ ಅಭಿಪ್ರಾಯಪಟ್ಟರು.ಡಿಎಸ್‌ಇಆರ್‌ಟಿ ಸಹಯೋಗದಲ್ಲಿ ಇಂಡಿಯಾ ಫೌಂಡೇಶನ್ ಫಾರ್ ಆರ್ಟ್ಸ, ಕಲಿ-ಕಲಿಸು ಕಲಾ ಅಂತರ್ಗತ ಕಲಿಕಾ ಯೋಜನೆಯ ಅಂಗವಾಗಿ ಹುಬ್ಬಳ್ಳಿ ತಾಲೂಕಿನ ಕಿರೇಸೂರ ಸರ್ಕಾರಿ ಪ್ರೌಢಶಾಲಾ ಆವರಣದ ಕಲಿಕಾ ಕೇಂದ್ರವಾಗಿ ಅರಳೀಕಟ್ಟೆ ತೆರೆದ ವಾಚನಾಲಯದಲ್ಲಿ ಕರ್ನಾಟಕ ವೈಭವ ಚಟುವಟಿಕೆ ಕುರಿತು ಮಾತನಾಡಿದ ಅವರು, ಯುವ ವಿದ್ಯಾರ್ಥಿಗಳು ಚೆನ್ನಾಗಿ ಅಧ್ಯಯನ ಮಾಡಿ, ತಮ್ಮ ಕೊಡುಗೆ ನೀಡುತ್ತಾ ಕರ್ನಾಟಕದ ಸಾಂಸ್ಕೃತಿಕ ರಾಯಭಾರಿಗಳಾಗಬೇಕು ಎಂದು ಕರೆ ನೀಡಿದರು.
ಅರಳೀಕಟ್ಟೆಯ ಪುಸ್ತಕ ಜೋಳಿಗೆಗೆ ಗ್ರಂಥದಾನ ಮಾಡಿದ ನಿವೃತ್ತ ಗ್ರಂಥಪಾಲಕ ಡಾ. ಬಿ.ಎಸ್. ಮಾಳವಾಡ, ಕರ್ನಾಟಕ ಸಂಸ್ಕೃತಿ ಮತ್ತು ಇತಿಹಾಸದಲ್ಲಿ ಶ್ರೀಮಂತವಾಗಿದೆ. ಅನೇಕ ರಾಜವಂಶಗಳು ಕರ್ನಾಟಕವನ್ನು ಆಳಿವೆ. ಸಂಸ್ಕೃತಿ, ಭಾಷೆ, ಕಲೆ, ವಾಸ್ತುಶಿಲ್ಪ, ನೃತ್ಯ, ಸಂಗೀತ ಮತ್ತು ಪ್ರವಾಸೋದ್ಯಮ ಪ್ರಭಾವಗಳ ಸಮ್ಮಿಳನವಾಗಿದೆ. ಕರ್ನಾಟಕ ಒಂದು ರಾಜ್ಯ ಹಲವು ಜಗತ್ತುಗಳನ್ನು ಒಳಗೊಂಡಿದೆ ಎಂದು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ಮುಖ್ಯೋಪಾಧ್ಯಾಯಿನಿ ಸುಮನ ತೇಲಂಗ, ಕನ್ನಡಿಗರು ಸಾಹಿತ್ಯ, ಕಲೆ, ಕ್ರೀಡೆ, ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ, ಆಡಳಿತ, ಪತ್ರಿಕೋದ್ಯಮ ಹೀಗೆ ಎಲ್ಲ ಕ್ಷೇತ್ರದಲ್ಲಿಯೂ ಅಮೋಘ ಸಾಧನೆ ಮಾಡಿದ್ದಾರೆ. ವಿದ್ಯಾರ್ಥಿಗಳು ಕನ್ನಡ, ಕರ್ನಾಟಕ, ಕನ್ನಡಿಗರ ಸಾಧನೆಗಳ ಪುಸ್ತಕಗಳನ್ನು ಓದಬೇಕು ಎಂದರು.
ಅರಳೀಕಟ್ಟೆ ಸಂಚಾಲಕ ಡಾ. ಲಿಂಗರಾಜ ರಾಮಾಪುರ ಪ್ರಾಸ್ತಾವಿಕ ಮಾತನಾಡಿದರು. ಈ ವೇಳೆ ಶಿಕ್ಷಕರು, ವಿದ್ಯಾರ್ಥಿಗಳು, ಶಾಲಾ ಸಿಬ್ಬಂದಿ ಉಪಸ್ಥಿತರಿದ್ದರು.