ವಿಶ್ವ ಚಾಂಪಿಯನ್ ಖೋ-ಖೋ ಆಟಗಾರ ಎಂ.ಕೆ.ಗೌತಮ್‌ಗೆ ತವರಿನ ಸನ್ಮಾನ

| Published : Apr 19 2025, 12:47 AM IST

ಸಾರಾಂಶ

2025ರ ಪುರುಷರ ಖೋ-ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಡಿ.ಮಲ್ಲಿಗೆರೆಯ ಎಂ.ಕೆ.ಗೌತಮ್ ಅವರಿಗೆ ಗ್ರಾಮಸ್ಥರು ತವರಿನ ಸನ್ಮಾನ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಡ್ಯ

2025ರ ಪುರುಷರ ಖೋ-ಖೋ ವಿಶ್ವಕಪ್‌ನಲ್ಲಿ ಅತ್ಯುತ್ತಮ ಆಟವಾಡಿ ಭಾರತ ತಂಡ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮುವಲ್ಲಿ ಪ್ರಮುಖ ಪಾತ್ರ ವಹಿಸಿದ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೊಪ್ಪ ಹೋಬಳಿ ಡಿ.ಮಲ್ಲಿಗೆರೆಯ ಎಂ.ಕೆ.ಗೌತಮ್ ಅವರಿಗೆ ಗ್ರಾಮಸ್ಥರು ತವರಿನ ಸನ್ಮಾನ ಮಾಡಿದರು.

ದೇಶೀಯ ಕ್ರೀಡೆ ಖೋ-ಖೋದಲ್ಲಿ ಭಾರತ ವಿಶ್ವ ಚಾಂಪಿಯನ್ ಆಗಿರುವುದಕ್ಕೆ ಗೌತಮ್ ಅವರನ್ನು ಡಿ.ಮಲ್ಲಿಗೆರೆ ಗ್ರಾಮಸ್ಥರು ಮೆರವಣಿಗೆ ಮೂಲಕ ವೇದಿಕೆಗೆ ಕರೆತಂದು ಅಭಿನಂದಿಸಿದರು.ಗ್ರಾಮದ ಮುಖಂಡರಾದ ಟಿ. ಹುಚ್ಚಪ್ಪ ಮಾತನಾಡಿ, ಭವಿಷ್ಯದಲ್ಲಿ ಇಂತಹ ಅನೇಕ ಉನ್ನತ ಸಾಧನೆಗಳನ್ನು ಗೌತಮ್ ಮಾಡಲಿ ಹಾಗೂ ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವ ಮಕ್ಕಳಿಗೆ ಇವರ ಸಾಧನೆ ಸದಾ ಪ್ರೇರಣೆಯಾಗಲಿ ಎಂದು ಶುಭ ಹಾರೈಸಿದರು.

ಎಂ.ಕೆ.ಗೌತಮ್, ಒಬ್ಬ ಆಟೋ ಚಾಲಕನ ಮಗನಾಗಿದ್ದು ಈ ವಿಜಯದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಸೆಮಿ ಫೈನಲ್‌ನಲ್ಲಿ ಅತ್ಯುತ್ತಮ ಆಟಗಾರ ಪ್ರಶಸ್ತಿ ಪಡೆದ ಇವರು ತಮ್ಮ ಕಠಿಣ ಪರಿಶ್ರಮದಿಂದ ಈ ಸ್ಥಾನಕ್ಕೇರಿದ್ದಾರೆ ಎಂದರು.

ಡಿ.ಮಲ್ಲಿಗೆರೆ ಗ್ರಾಮದ ಎಂ.ಬಿ. ರಮೇಶ್, ಎಂ.ಟಿ.ಶ್ರೀನಿವಾಸ್, ಎಂ ಆರ್ ಸುನೀಲ್, ಎಂ.ಎನ್. ಕಪನೀಗೌಡ , ಎಂಎಚ್ ಪುಟ್ಟಸ್ವಾಮಿ, ಎಂ.ಶ್ರೀಕಂಠೇಗೌಡ, ಎಂ.ಎನ್.ಸ್ವಾಮಿಗೌಡ, ಎಂ.ಬಿ. ಶ್ರೀನಿವಾಸ್, ಎಂ.ಎಚ್. ಮಹೇಶ್,ಎಂ.ಟಿ.ರಾಮಚಂದ್ರ, ಎಂ.ನಂಜಪ್ಪ, ಸಂತೋಷ, ಅಭಿ, ಗ್ರಾಮದ ಯಜಮಾನರು, ಮುಖಂಡರು ಹಾಜರಿದ್ದರು.

ಕನ್ನಡ ಅಕ್ಷರ ಜಾತ್ರೆ: ಕವಿಗಳು, ಸಾಧಕರಿಂದ ಅರ್ಜಿ ಆಹ್ವಾನ

ಕನ್ನಡಪ್ರಭ ವಾರ್ತೆ ಮಂಡ್ಯ

ಡಾ.ಜೀಶಂಪ ಸಾಹಿತ್ಯ ವೇದಿಕೆ ವತಿಯಿಂದ ನಾಲ್ವಡಿ ಕೃಷ್ಣ ರಾಜ ಒಡೆಯರ್ ಜಯಂತಿ ಅಂಗವಾಗಿ ಜೂ.೧ ರಂದು ನಗರದ ಶ್ರೀನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾ ಮಂದಿರದಲ್ಲಿ ಕನ್ನಡ ಅಕ್ಷರ ಜಾತ್ರೆ ಆಯೋಜಿಸಿದ್ದು, ಆಸಕ್ತ ಕವಿಗಳಿಂದ ಕವನ ಹಾಗೂ ವಿವಿಧ ಪ್ರಶಸ್ತಿಗೆ ಸಾಧಕರಿಂದ ಹೆಸರನ್ನು ಆಹ್ವಾನಿಸಲಾಗಿದೆ.

ಆಸಕ್ತರು ೨೫ ಸಾಲಿನ ಎರಡು ಕವನಗಳು, ಕಿರು ಪರಿಚಯ, ಫೋಟೋ, ಮೊಬೈಲ್ ಸಂಖ್ಯೆ, ವಿಳಾಸವನ್ನು ಮತ್ತು ಸಾಧಕರು ಸಾಧನೆಯ ವಿವರಗಳನ್ನು ಮೇ ೫ರೊಳಗೆ ಕಳುಹಿಸಬೇಕು. ವ್ಯಾಟ್ಸಪ್‌ನಲ್ಲಿ ಮೊದಲು ನೋಂದಣಿ ಮಾಡಿಕೊಂಡು, ನಂತರ ಅಂಚೆ ಮೂಲಕ ಕಳುಹಿಸಬೇಕು ಎಂದು ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ ತಿಳಿಸಿದ್ದಾರೆ.

ಕವನ ಯಾವುದಾದರೂ ವಿಷಯವನ್ನು ಒಳಗೊಂಡಿರಬಹುದು. ಆಯ್ಕೆಯಾದ ಕವಿತೆಗಳನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು. ಐವತ್ತು ಮಂದಿ ಕವಿಗಳಿಗೆ ಕವಿಗೋಷ್ಠಿಯಲ್ಲಿ ಅವಕಾಶ ಕಲ್ಪಿಸಲಾಗುವುದು. ಉತ್ತಮ ಸಾಧಕರನ್ನು ಅಖಿಲ ಕರ್ನಾಟಕ ಕನ್ನಡ ಅಕ್ಷರ ಜಾತ್ರೆ ಸಮ್ಮೇಳನಾಧ್ಯಕ್ಷರನ್ನಾಗಿ ಆಯ್ಕೆ ಮಾಡಿ ಗೌರವಿಸಲಾಗುವುದು. ಕವಿಗೋಷ್ಠಿಯಲ್ಲಿ ಭಾಗವಹಿಸುವವರಿಗೆ ಕವನ ವಾಚನಕ್ಕೆ ಅವಕಾಶ, ಪ್ರಮಾಣ ಪತ್ರ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಗುವುದು ಎಂದಿದ್ದಾರೆ.

ಕವಿಗಳು, ಕವನಗಳು, ಸಾಧಕರು ಪರಿಚಯವನ್ನು ವಿಳಾಸ: ಎಸ್. ಕೃಷ್ಣಸ್ವರ್ಣಸಂದ್ರ, ಕವಿಮಿತ್ರ, ನಂ-೭೬೭, ಸ್ವರ್ಣಸಂದ್ರ, ಮಂಡ್ಯ-೨ ಕಳುಹಿಸಬೇಕು.ಸಂಪರ್ಕ ಮತ್ತು ವ್ಯಾಟ್ಸಾಪ್ ನಂ-೯೪೪೮೪೨೪೩೮೦ಗೆ ಕಳುಹಿಸಬೇಕಾಗಿ ಪ್ರಕಟಣೆಯಲ್ಲಿ ಕೋರಿದ್ದಾರೆ.