ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪ್ರಾಮಾಣಿಕ ಪರಿಶ್ರಮ ಅಗತ್ಯ: ಎಸ್.ಆರ್.ಪಾಟೀಲ

| Published : Sep 16 2025, 01:00 AM IST

ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಪ್ರಾಮಾಣಿಕ ಪರಿಶ್ರಮ ಅಗತ್ಯ: ಎಸ್.ಆರ್.ಪಾಟೀಲ
Share this Article
  • FB
  • TW
  • Linkdin
  • Email

ಸಾರಾಂಶ

ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂಬ ತತ್ವದಡಿ ನಡೆಯುವ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಪರಿಶ್ರಮ ಅಗತ್ಯವಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂಬ ತತ್ವದಡಿ ನಡೆಯುವ ಸಹಕಾರಿ ಕ್ಷೇತ್ರದ ಬೆಳವಣಿಗೆಗೆ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಪ್ರಾಮಾಣಿಕ ಪರಿಶ್ರಮ ಅಗತ್ಯವಾಗಿದೆ ಎಂದು ಮಾಜಿ ಸಚಿವ ಎಸ್.ಆರ್. ಪಾಟೀಲ ಹೇಳಿದರು.

ನವನಗರದ ಡಾ.ಅಂಬೇಡ್ಕರ ಭವನದಲ್ಲಿ ನಡೆದ ಜಿಲ್ಲಾ ರಡ್ಡಿ ನೌಕರರ ಪತ್ತಿನ ಸಹಕಾರ ಸಂಘದ 10ನೇ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಗ್ರಾಹಕ ನೌಕರರು ಸಂಘದಿಂದ ಪಡೆದ ಸಾಲವನ್ನು ಸದ್ವಿನಿಯೋಗ ಮಾಡಿಕೊಂಡು ಅಭಿವೃದ್ಧಿ ಸಾಧಿಸಿ ನಿಗದಿತ ಸಮಯಕ್ಕೆ ಸಾಲ ಮರುಪಾವತಿಸಿ ಸಂಘದ ಬೆಳವಣಿಗೆಗೆ ಸಹಕರಿಸಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಪಿ.ಎಚ್. ಪೂಜಾರ ಮಾತನಾಡಿ, ಸಂಘ ಸಮಾಜ, ನೌಕರರ ಅಭಿವೃದ್ಧಿಗೆ ಸಹಕಾರಿಯಾಗಲಿ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಪ್ರೋತ್ಸಾಹಿಸುವ ಸಾಮಾಜಿಕ ಕಳಕಳಿಯ ಕಾರ್ಯ ನಿರಂತರವಾಗಿರಲಿ ಎಂದು ಹೇಳಿದರು.

ಬಾಗಲಕೋಟೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಸಂಘ ಹೆಚ್ಚು ಠೇವಣಿ ಸಂಗ್ರಹಿಸಿ ಸಾಲದ ಅವಶ್ಯಕತೆಯುಳ್ಳ ನೌಕರರಿಗೆ ಅನುಕೂಲ ಕಲ್ಪಿಸಬೇಕು ಎಂದರು.

ಬಾಲಾಜಿ ಶುಗರ್ಸ್ ಅಧ್ಯಕ್ಷ ಎಚ್.ಎಲ್. ಪಾಟೀಲ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ವೈ. ಮೇಟಿ, ಸಹಕಾರಿ ರಂಗದ ಬೆಳವಣಿಗೆಗೆ ಎಲ್ಲರ ಸಹಕಾರ, ಪ್ರಾಮಾಣಿಕತೆ, ವಿಶ್ವಾಸ ಅಗತ್ಯವಾಗಿದೆ ಎಂದು ಹೇಳಿದರು.

ಸಂಘದ ವಾರ್ಷಿಕ ವರದಿ ಮಂಡಿಸಿದ ಅಧ್ಯಕ್ಷ ಆರ್.ಎಸ್. ಪಾಟೀಲ, ಸಂಘ ಕಳೆದ ಮಾರ್ಚ್‌ ಅಂತ್ಯಕ್ಕೆ ₹17.22 ಲಕ್ಷ ನಿವ್ಹಳ ಲಾಭ ಗಳಿಸಿದ್ದು, ಸದಸ್ಯರಿಗೆ ಪ್ರತಿಷತ 12ರಷ್ಟು ಲಾಭಾಂಶ ಹಂಚಿಕೆ ಮಾಡಲು ತೀರ್ಮಾನಿಸಿದೆ. ₹5 ಲಕ್ಷವರೆಗೆ ಸಾಲದ ಮಿತಿ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.

ಸಾನ್ನಿಧ್ಯ ವಹಿಸಿದ್ದ ಅಧ್ಯಾತ್ಮ ಚಿಂತಕ ಪ್ರದೀಪ ಗುರೂಜಿ, ಪರಸ್ಪರ ಸಹಕಾರ, ಸಹಬಾಳ್ವೆಯ ತತ್ವವೇ ಸಹಕಾರಿ ಕ್ಷೇತ್ರದ ಧ್ಯೇಯವಾಗಿದ್ದು, ಆಡಳಿತ ಮಂಡಳಿ, ಗ್ರಾಹಕರು, ಸಿಬ್ಬಂದಿ ಎಲ್ಲರೂ ಸಹಕಾರದೊಂದಿಗೆ ಸಂಘಗಳನ್ನು ಬೆಳೆಸಬೇಕು ಎಂದು ಸಲಹೆ ನೀಡಿದರು.ವೇದಿಕೆಯಲ್ಲಿ ಸಂಘದ ಸದಸ್ಯರು ಉಪಸ್ಥಿತರಿದ್ದರು.ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.90ಕ್ಕೂ ಅಧಿಕ ಅಂಕ ಗಳಿಸಿದ ರಡ್ಡಿ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತಲ್ಲದೆ, ಸಮಾಜದ ನಿವೃತ್ತ ನೌಕರರು, ದಾನಿಗಳನ್ನು ಸನ್ಮಾನಿಸಲಾಯಿತು.

ಬೆನಕಟ್ಟಿಯ ಹೇಮರಡ್ಡಿ ಮಲ್ಲಮ್ಮ ಭಜನಾ ಸಂಘದವರು ಪ್ರಾರ್ಥಿಸಿದರು. ಸಂಘದ ನಿರ್ದೇಶಕ ಅಶೋಕ ಎಮ್ಮಿ ಸ್ವಾಗತಿಸಿದರು. ನಿರ್ದೇಶಕ ಎಸ್.ಬಿ.ಮಾಚಾ ಪ್ರಾಸ್ತಾವಿಕವಾಗಿ ಮಾತನಾಡಿ ಸಂಘದ ಪ್ರಗತಿ ತಿಳಿಸಿದರು. ಸಂಜಯ ನಡುವಿನಮನಿ, ಪಾಂಡುರಂಗ ಸನ್ನಪ್ಪನವರ ನಿರೂಪಿಸಿದರು. ಉಮಾ ಕೆಳಗಿನಗೌಡರ ವಂದಿಸಿದರು.