ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸನಾತನ ಧರ್ಮದಲ್ಲಿ ಜನಿಸಿದ ಅನೇಕ ಸಾಧು, ಸಂತರ ಇತಿಹಾಸ ನೋಡಿದಾಗ ತ್ಯಾಗಕ್ಕೆ ಪ್ರಾಧಾನ್ಯತೆ ಲಭಿಸಿದೆ. ಸ್ವಾಮಿತ್ವಕ್ಕೆ ಸಾರ್ಥಕ ಬದುಕು ನಿಶ್ಚಿತ. ಜೊತೆಗೆ ಪ್ರಸ್ತುತ ದೇಶ ಮತ್ತು ರಾಜ್ಯದಲ್ಲಿ ಪ್ರಾಮಾಣಿಕ ರಾಜಕಾರಣಿಗಳನ್ನು ದುರ್ಬೀನು ಹಚ್ಚಿ ನೋಡುವ ಕಾಲ ಬಂದಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ರಾಜ್ಯ ಸಮಗ್ರ ಅಭಿವೃದ್ಧಿಗೆ ಹಾಗೂ ಪಂಚಮಸಾಲಿ ಸಮಾಜದ ಜೊತೆಗೆ ಅನ್ಯ ಸಮಾಜದ ಉದ್ಧಾರಕ್ಕಾಗಿ ಶ್ರಮಿಸಲು ಸಂಕಲ್ಪಿಸಿದ್ದೇನೆ ಎಂದು ವಿಜಯಪುರದ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಹೇಳಿದರು.ಸಮೀಪದ ಮದಭಾವಿ ಗ್ರಾಮದಲ್ಲಿ ಶನಿವಾರ ಕಿತ್ತೂರು ಚನ್ನಮ್ಮನ ಬೃಹತ್ ಪುತ್ಥಳಿ ಅನಾವರಣ ಹಾಗೂ 247ನೇ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಾಣಿ ಚನ್ನಮ್ಮ ನಮಗೆಲ್ಲ ಸ್ವಾತಂತ್ರ್ಯ ಬರಲು ಮುಖ್ಯ ಕಾರಣ. ಗಂಗಾಮಾತೆಯ ಭೂಮಿಗೆ ಬರಲು ಮಹರ್ಷಿ ಭಗೀರಥರ ಪ್ರಯತ್ನ ಕಾರಣ. ಸಂಗೊಳ್ಳಿ ರಾಯಣ್ಣ ನಿಸ್ವಾರ್ಥ ಸೇವೆಗೆ ಸಾಕ್ಷಿ. ರಾಜ್ಯದಲ್ಲಿ ಅನೇಕ ಇಲಾಖೆಯಲ್ಲಿ ನೇಮಖಾತಿ ಇಲ್ಲದೆ ಯುವಕರು ನೌಕರಿಯಿಂದ ವಂಚಿತರಾಗಿದ್ದಾರೆ. ದುಡಿಯುವ ಕೈಗಳಿಗೆ ಕೆಲಸ ಕೊಡಿ ಎಂದು ಒತ್ತಾಯಿಸಿದ ಅವರು, ಪಂಚಮಸಾಲಿ ಸಮಾಜ ಮೂಲತಃ ಇನ್ನೊಬ್ಬರಿಗೆ ಅನ್ನ ನೀಡುವ ಕಾಯಕ ಮಾಡುತ್ತ ಬಂದಿದೆ. ನಮಗೆ ನ್ಯಾಯಯುತವಾಗಿ ಮೀಸಲಾತಿ ನೀಡಬೇಕು. ಇನ್ನೊಂದು ಸಮಾಜದ ಮೀಸಲಾತಿ ಕಸಿದು ನಮಗೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.ಕಿತ್ತೂರು ಚನ್ನಮ್ಮಳ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಿದ ಮದಭಾವಿಯ ಯುವಕರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಯತ್ನಾಳ, ಪುತ್ಥಳಿಗೆ ವೈಯಕ್ತಿಕವಾಗಿ ₹1 ಲಕ್ಷ ದೇಣಿಗೆ ನೀಡಿದರು.
ತೇರದಾಳ ಶಾಸಕ ಸಿದ್ದು ಸವದಿ, ವಿಧಾನ ಪರಿಷತ್ ಸದಸ್ಯ ಹಣಮಂತ ನಿರಾಣಿ, ಪವನ್ ಕತ್ತಿ ಮಾತನಾಡಿ, ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲು ನೀಡಲು ಸರ್ಕಾರಕ್ಕೆ ಒತ್ತಾಯಿಸಿದರು.ಸಮಾಜದ ಜಿಲ್ಲಾಧ್ಯಕ್ಷ ಧರೆಪ್ಪ ಸಾಂಗ್ಲಿಕರ ಮಾತನಾಡಿ, ಮೊದಲು ನಾವು ಕೂಡಲಸಂಗಮ ಪೀಠ ಸ್ಥಾಪಿಸಿದ್ದು, ತದನಂತರ ಸ್ವಯಂ ಘೋಷಿತವಾದ ಟ್ರಸ್ಟ್. ಆದ್ದರಿಂದ ಸ್ವಾಮೀಜಿಗಳನ್ನು ಟ್ರಸ್ಟ್ ನಿಂದ ಉಚ್ಚಾಟಿಸುವ ಅಧಿಕಾರ ಯಾರಿಗೂ ಇಲ್ಲ. ಕಾರಣ ನಾವು ಪ್ರಥಮ ಪೀಠಾಧ್ಯಕ್ಷರನ್ನು ನಿಮ್ಮೆಲ್ಲರ, ಸಮಾಜದ ಒಳಿತಿಗಾಗಿ ಮುಂದುವರಿಸುವ ಕಾರ್ಯ ಮಾಡೋಣ ಎಂದು ತಿಳಿಸಿದರು.
ಭಾವೈಕ್ಯತೆಯ ದಸರಾ ಸಮಾರಂಭದಂತೆ ಕಂಗೊಳಿಸಿದ ಮದಭಾವಿ ಚನ್ನಮ್ಮ ಜಯಂತ್ಯೋತ್ಸವ ಬಗ್ಗೆ ಹರ್ಷ ವ್ಯಕ್ತಪಡಿಸಿದ ಹೊಸದುರ್ಗ ಭಗೀರಥ ಪೀಠದ ಡಾ.ಪುರುಷೋತ್ತಮಾನಂದ ಪುರಿ ಸ್ವಾಮೀಜಿ, ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಮಾಜದ ಒಳಿತಿಗಾಗಿ ಹಗಲಿರಳು ಶ್ರಮಿಸುತ್ತಿದ್ದಾರೆ ಎಂದರು.ಸಿದ್ಧಸಿರಿ ಸಿದ್ಧಾಶ್ರಮದ ಸಿದ್ಧಯೋಗಿ ಅಮರೇಶ್ವರ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಶೈಲ ಒಂಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ₹1 ಕೋಟಿ ದೇಣಿಗೆ ನೀಡುವ ವಾಗ್ದಾನ: ಚನ್ನಮ್ಮನ ಹೆಸರಿನಲ್ಲಿ ವಿದ್ಯಾಸಂಸ್ಥೆ ಮತ್ತು ವಸತಿಗೃಹ ನಿರ್ಮಾಣಕ್ಕೆ ನಿಧಿ ಸಂಗ್ರಹ ಮಾಡುವ ನಿರ್ಧಾರ ಮಾಡಿ, ತಲಾ ₹1ಕೋಟಿಯನ್ನು ಸಮಾಜದ ಶಾಸಕರು, ವಿವಿಧ ನಾಯಕರು ನೀಡುವ ವಾಗ್ದಾನ ಮಾಡಿದರು. ಕಾಂಗ್ರೆಸ್ ಮುಖಂಡ ಸಿದ್ದು ಕೊಣ್ಣೂರ ₹10 ಲಕ್ಷ ನೀಡುವುದಾಗಿ ಭರವಸೆ ನೀಡಿದರು.
ಇದಕ್ಕೂ ಮುಂಚೆ ಸಾರೋಟಿನಲ್ಲಿ ಚನ್ನಮ್ಮನ ಭಾವಿಚಿತ್ರವಿಟ್ಟು ಗ್ರಾಮದಲ್ಲಿ ಮೆರವಣಿಗೆ ನಡೆಯಿತು. ಶ್ರೀ ನಾಗಯ್ಯ ಮಠಪತಿ, ಶ್ರೀಶೈಲ ದಲಾಲ, ಮಹಾಂತೇಶ ಹಿಟ್ಟಿನಮಠ, ಅರ್ಜುನ ಹಲಗಿಗೌಡರ, ಮಹಾಂತೇಶ ಉರಬಿನ್ನವರ, ಮಹಾದೇವ ಮಾರಾಪುರ, ಸಿದ್ದುಗೌಡ ಪಾಟೀಲ, ಬಸವರಾಜ ನಾಗನೂರ, ನಿಂಗಪ್ಪ ಪಿರೋಜಿ, ಲಕ್ಕಪ್ಪ ಪಾಟೀಲ, ಚಂದ್ರಶೇಖರ ಆದಬಸಪ್ಪಗೋಳ, ಚನ್ನಪ್ಪ ಪಟ್ಟಣಶೆಟ್ಟಿ, ವಿನೋದ ಉಳ್ಳೇಗಡ್ಡಿ, ಶ್ರೀಶೈಲ ಅರಭಾವಿ, ಬಸವರಾಜ ಹಾದಿಮನಿ ಸೇರಿದಂತೆ ಕಿತ್ತೂರು ರಾಣಿ ಚನ್ನಮ್ಮ ಕಮಿಟಿ ಪದಾಧಿಕಾರಿಗಳು ಹಾಗೂ ಅತಿಥಿಗಳು, ಯುವ ಕಾರ್ಯಕರ್ತರು, ಗ್ರಾಮಸ್ಥರು ಇದ್ದರು. ಸದಾಶಿವ ಪಟ್ಟಣಶೆಟ್ಟಿ ಸ್ವಾಗತಿಸಿ, ಗೌರಿ ಮಟ್ಟಿ ನಿರೂಪಿಸಿ, ಮಲ್ಲಪ್ಪ ಅರಭಾವಿ ವಂದಿಸಿದರು.