ಸಹಕಾರ ಕ್ಷೇತ್ರಕ್ಕೆ ಪ್ರಾಮಾಣಿಕ ಸೇವೆಯೇ ಭದ್ರ ಬುನಾದಿ

| Published : Nov 05 2025, 12:45 AM IST

ಸಹಕಾರ ಕ್ಷೇತ್ರಕ್ಕೆ ಪ್ರಾಮಾಣಿಕ ಸೇವೆಯೇ ಭದ್ರ ಬುನಾದಿ
Share this Article
  • FB
  • TW
  • Linkdin
  • Email

ಸಾರಾಂಶ

ಸಹಕಾರ ಕ್ಷೇತ್ರದಲ್ಲಿ ಹಾಲಪ್ಪ ಆಚಾರ್ ಸೇವೆ ಅನನ್ಯ. ಅವರ ಪ್ರಾಮಾಣಿಕ ಸೇವೆಯಿಂದ ಮುಚ್ಚುತ್ತಿದ್ದ ಡಿಸಿಸಿ ಬ್ಯಾಂಕ್ ಉಳಿಯಿತು.

ಕುಕನೂರು: ಸಹಕಾರ ಕ್ಷೇತ್ರಕ್ಕೆ ಪ್ರಾಮಾಣಿಕ ಸೇವೆಯೇ ಭದ್ರ ಬುನಾದಿ ಎಂದು ಮಾಜಿ ಸಚಿವ ಹಾಲಪ್ಪ ಆಚಾರ್ ಹೇಳಿದರು.

ತಾಲೂಕಿನ ಮಸಬಹಂಚಿನಾಳ ಗ್ರಾಮದ ಬಿಜೆಪಿ ಕಾರ್ಯಾಲಯದಲ್ಲಿ ಮಂಡಲಗೇರಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳನ್ನು ಸನ್ಮಾನಿಸಿ ಮಾತನಾಡಿದ ಅವರು, ಕೃಷಿಕರಿಗೆ ಅನುಕೂಲವಾಗುವಂತೆ ಕಾರ್ಯ ಮಾಡಿ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಶ್ರಮಿಸಬೇಕು. ಪ್ರತಿ ಗ್ರಾಮದಲ್ಲಿರುವ ಸಹಕಾರಿ ಸಂಘ ಜನರ ಜೀವನಾಡಿ ಆಗಿರುತ್ತದೆ. ಯಾವ ಗ್ರಾಮದಲ್ಲಿ ಸಹಕಾರಿ ಸಂಘಗಳು ಸದೃಢವಾಗಿ ಬಲಿಷ್ಠ ಆಗಿರುತ್ತವೇಯೋ ಆ ಗ್ರಾಮದ ಒಗ್ಗಟ್ಟಿನಿಂದ ಕೂಡಿರುತ್ತದೆ. ಸಹಕಾರಿ ಸಂಘಕ್ಕೆ ಪ್ರಾಮಾಣಿಕ ಸೇವೆಯೇ ಭದ್ರ ಬುನಾದಿ. ಸಂಘದಿಂದ ರೈತರಿಗೆ ಅವಶ್ಯಕವಾದ ಬೀಜ, ಗೊಬ್ಬರ, ಸಾಲ, ಸೌಲಭ್ಯ ನಿಗದಿತ ಅವಧಿಯಲ್ಲಿ ವಿತರಿಸಬೇಕು. ಅಂದಾಗ ಮಾತ್ರ ಸಹಕಾರ ತತ್ವ ಸಾರ್ಥಕ ಆಗುತ್ತದೆ ಎಂದರು.

ಎಪಿಎಂಸಿ ಮಾಜಿ ಸದಸ್ಯ ಹಂಚ್ಯಾಳಪ್ಪ ತಳವಾರ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಹಾಲಪ್ಪ ಆಚಾರ್ ಸೇವೆ ಅನನ್ಯ. ಅವರ ಪ್ರಾಮಾಣಿಕ ಸೇವೆಯಿಂದ ಮುಚ್ಚುತ್ತಿದ್ದ ಡಿಸಿಸಿ ಬ್ಯಾಂಕ್ ಉಳಿಯಿತು. ಅವರ ಅಧ್ಯಕ್ಷತೆಯಲ್ಲಿ ಸಹಕಾರ ಮಹಾ ಮಂಡಳಿ ಅಭಿವೃದ್ಧಿ ಸಹ ಆಯಿತು. ಪ್ರತಿ ಗ್ರಾಮದಲ್ಲಿರುವ ಸಹಕಾರಿ ಸಂಘಕ್ಕೆ ತಮ್ಮ ಆಡಳಿತಾವಧಿಯಲ್ಲಿ ಹೆಚ್ಚಿನ ಆದ್ಯತೆ ನೀಡಿದ್ದಾರೆ. ಸಹಕಾರಿ ಸಂಘಗಳ ಬಲವರ್ಧನೆಗೆ ಶ್ರಮಿಸಿದ್ದಾರೆ ಎಂದರು.

ಇತ್ತಿಚ್ಚೇಗೆ ಜರುಗಿದ ಮಂಡಲಗೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ 11 ಸ್ಥಾನ ಬಿಜೆಪಿ ಬೆಂಬಲಿತ ಸದಸ್ಯರು ತಮ್ಮದಾಗಿಸಿಕೊಂಡಿದ್ದು, ಅವರನ್ನು ಮಾಜಿ ಸಚಿವ ಹಾಲಪ್ಪ ಆಚಾರ್ ಸನ್ಮಾನಿಸಿದರು. ನೂತನವಾಗಿ ಆಯ್ಕೆಯಾದ ಸಂಘದ ಪದಾಧಿಕಾರಿಗಳಿದ್ದರು.