ಸಾರಾಂಶ
ಆಳ್ವಾಸ್ ಕಾಲೇಜಿನಲ್ಲಿ ವಿದ್ಯಾರ್ಥಿ ಸ್ಟಾರ್ಟ್ಅಪ್ ವೇದಿಕೆ ‘ಟ್ರೈಬ್ಲೇಜ್’ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಮೂಡುಬಿದಿರೆಪ್ರಾಮಾಣಿಕತೆ ಎಂಬುದು ನಮ್ಮ ನೈತಿಕ ಮತ್ತು ಸಾಮಾಜಿಕ ಬದುಕಿನ ಬಹುಮುಖ್ಯ ಅಂಶ. ಜೀವನದಲ್ಲಿ ಕಷ್ಟ, ವಿಫಲತೆಗಳು ಹಾಗೂ ಆಕಸ್ಮಿಕ ಸಮಸ್ಯೆಗಳು ಬಂದರೂ, ಪ್ರಾಮಾಣಿಕತೆಯ ಹಾದಿಯಲ್ಲಿ ನಡೆದರೆ ಯಶಸ್ಸು ನಮಗೆ ಖಂಡಿತ ಒಲಿಯುತ್ತದೆ ಎಂದು ಮಾಜಿ ಸಚಿವ ಹಾಗೂ ರಾಜ್ ಫಿಶ್ ಮಿಲ್ ಆ್ಯಂಡ್ ಆಯಿಲ್ ಕಂಪನಿಯ ವ್ಯವಸ್ಥಾಪಕ ಪಾಲುದಾರ ಪ್ರಮೋದ್ ಮಧ್ವರಾಜ್ ಹೇಳಿದರು.ಅವರು ಶನಿವಾರ ಕುವೆಂಪು ಸಭಾಂಗಣದಲ್ಲಿ ನಡೆದ ಆಳ್ವಾಸ್ ಕಾಲೇಜಿನ ಮ್ಯಾನೇಜ್ಮೆಂಟ್ ವಿಭಾಗದ ನೂತನ ವಿದ್ಯಾರ್ಥಿ ಸ್ಟಾರ್ಟ್ಅಪ್ ವೇದಿಕೆ ‘ಟ್ರೈಬ್ಲೇಜ್’ ಉದ್ಘಾಟಿಸಿ, ‘ಯಶಸ್ವಿ ನಾಯಕತ್ವದ ತಂತ್ರಗಳು’ ವಿಷಯದ ಕುರಿತು ಮಾತನಾಡಿದರು.ಕಾರ‍್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಮೋದ ಮಧ್ವರಾಜ್ ಮಂತ್ರಿಗಳಾಗಿದ್ದಾಗ ಹತ್ತು ಹಲವು ಸಮಾಜಮುಖಿ ಕ್ರಮಗಳನ್ನು ಜಾರಿಗೊಳಿಸಿದರು. ಪ್ರಮುಖವಾಗಿ ಕ್ರೀಡಾ ನೀತಿಯನ್ನು ರಾಜ್ಯದಲ್ಲಿ ಜಾರಿಗೊಳಿಸಿ, ಕರ್ನಾಟಕದ ಕ್ರೀಡಾಪಟುಗಳಿಗೆ ಕ್ರೀಡಾ ಕೋಟಾದಡಿಯಲ್ಲಿ ಸರ್ಕಾರಿ ನೌಕರಿಗಳಲ್ಲಿ ಉದ್ಯೋಗದ ಅವಕಾಶಗಳನ್ನು ಕಲ್ಪಿಸಿದರು ಎಂದರು.ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಚಾರ್ಯ ಡಾ.ಕುರಿಯನ್ ಮಾತನಾಡಿದರು. ‘ಟ್ರೈಬ್ಲೇಜ್’ ವಿದ್ಯಾರ್ಥಿ ಸ್ಟಾರ್ಟ್ಅಪ್ ವೇದಿಕೆಯ ನೂತನ ಲಾಂಛನ ಹಾಗೂ ಬುಲೆಟಿನ್ ಬಿಡುಗಡೆಗೊಳಿಸಲಾಯಿತು. ನೂತನ ವೇದಿಕೆಯ ಪದಾಧಿಕಾರಿಗಳ ಪದಗ್ರಹಣ ಕಾರ‍್ಯಕ್ರಮ ನಡೆಯಿತು.
ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿಭಾಗದ ಮುಖ್ಯಸ್ಥೆ ಸುರೇಖಾ ರಾವ್, ವೇದಿಕೆಯ ನಿರ್ದೇಶಕಿ ಸೋನಿ, ವೇದಿಕೆ ಅಧ್ಯಕ್ಷ ಹಾರ್ದಿಕ್ ಶೆಟ್ಟಿ, ಕಾರ‍್ಯದರ್ಶಿ ಕಿರಣ್ ಕುಮಾರ್ ಇದ್ದರು. ಅಫ್ತಾಬ್ ಮೊಹಮ್ಮದ್ ನಿರೂಪಿಸಿದರು. ಚಿನ್ಮಯಿ ಹೊಳ್ಳ ಅತಿಥಿಗಳನ್ನು ಪರಿಚಯಿಸಿದರು. ಇಶಿಕಾ ಅಂಚನ್ ಸ್ವಾಗತಿಸಿದರು. ದುರ್ಗಾ ಬಾಕರ್ ವಂದಿಸಿದರು.