ವ್ಯಾಪಾರದಲ್ಲಿ ಪ್ರಾಮಾಣಿಕತೆ ಮತ್ತು ಗುಣಮಟ್ಟ ಎಂಬ ಎರಡು ಮೂಲ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ದೀರ್ಘ ಕಾಲೀನ ಯಶಸ್ಸು ಸಾಧ್ಯವಾಗುತ್ತದೆ ಎಂದು ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು.
ಬ್ಯಾಡಗಿ: ವ್ಯಾಪಾರದಲ್ಲಿ ಪ್ರಾಮಾಣಿಕತೆ ಮತ್ತು ಗುಣಮಟ್ಟ ಎಂಬ ಎರಡು ಮೂಲ ಮೌಲ್ಯಗಳನ್ನು ಅಳವಡಿಸಿಕೊಂಡಾಗ ಮಾತ್ರ ದೀರ್ಘ ಕಾಲೀನ ಯಶಸ್ಸು ಸಾಧ್ಯವಾಗುತ್ತದೆ ಎಂದು ಬ್ಯಾಡಗಿ ಮೆಣಸಿನಕಾಯಿ ವರ್ತಕರ ಸಂಘದ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ ಹೇಳಿದರು. ಹುಬ್ಬಳ್ಳಿ ಟೈಕಾನ್ ಸಂಸ್ಥೆ ವತಿಯಿಂದ ಆಯೋಜಿಸಲಾದ 2026 ಉತ್ತರ ಕರ್ನಾಟಕ ರೈಸಿಂಗ್ ಸಮಾವೇಶದಲ್ಲಿ ಮೆಣಸಿನಕಾಯಿ ವ್ಯಾಪಾರ ಕ್ಷೇತ್ರದಲ್ಲಿ ಗಣನೀಯ ಸಾಧನೆಗಾಗಿ ನೀಡಲಾದ ಜೀವಮಾನದ ಸಾಧನೆ ಪ್ರಶಸ್ತಿಗೆ ಭಾಜನರಾದ ಹಿನ್ನೆಲೆಯಲ್ಲಿ ಗಜಾನನ ಅರ್ಬನ್ ಕೋ-ಆಪರೇಟಿವ ಬ್ಯಾಂಕ್ ಲಿ.ಆಡಳಿತ ಮಂಡಳಿ ವತಿಯಿಂದ ಆಯೋಜಿಸಲಾಗಿದ್ದ ಸನ್ಮಾನ ಕಾರ‍್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
‘ವ್ಯಾಪಾರವು ಕೇವಲ ಲಾಭಕ್ಕಾಗಿ ಮಾತ್ರವಲ್ಲ, ನಂಬಿಕೆಗೆ ಆಧಾರವಾಗಿರಬೇಕು. ರೈತರೊಂದಿಗೆ ನೇರ ಸಂಪರ್ಕ, ಸರಿಯಾದ ತೂಕ, ಪಾರದರ್ಶಕ ವ್ಯವಹಾರ ಹಾಗೂ ಸ್ಪರ್ಧಾತ್ಮಕ ಬೆಲೆಗಳು ನಮ್ಮ ಸಂಸ್ಥೆಯ ಪ್ರಮುಖ ಲಕ್ಷಣಗಳಾಗಿವೆ. ರೈತರಿಗೆ ಸಕಾಲದಲ್ಲಿ ಹಣ ಪಾವತಿಸುವುದು ನಮ್ಮ ಮೊದಲ ಆದ್ಯತೆ, ಈ ನಂಬಿಕೆಯಿಂದಲೇ ನಮ್ಮ ಬಿ.ಡಿ.ಪಾಟೀಲ ಅಂಡ್ ಸನ್ಸ್ ಸಂಸ್ಥೆಗೆ ಉತ್ತಮ ಹೆಸರು ಬಂದಿದೆ’ ಎಂದು ಹೇಳಿದರು. ಬ್ಯಾಡಗಿ ಮೆಣಸಿನಕಾಯಿ ಇಂದು ದೇಶವ್ಯಾಪಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿಯೂ ತನ್ನದೇ ಆದ ಛಾಪು ಮೂಡಿಸಿಕೊಂಡಿದೆ, ಇದರ ಹಿಂದೆ ಸಾವಿರಾರು ರೈತರ ಕಠಿಣ ಪರಿಶ್ರಮ, ಬೆಳೆ ಗುಣಮಟ್ಟ ಮತ್ತು ವ್ಯಾಪಾರಸ್ಥರ ನಿಷ್ಠೆ ಕಾರಣವಾಗಿದೆ ಎಂದರು. ಈ ವೇಳೆ ಬ್ಯಾಂಕ್ ಉಪಾಧ್ಯಕ್ಷ ಚನಬಸನಗೌಡ ಪಾಟೀಲ (ಆರ್‌ಜಿಪಿ ಬಾಬಣ್ಣ), ನಿರ್ದೇಶಕರಾದ ಸತೀಶ ಪಾಟೀಲ, ಸುರೇಶ ಪಾಟೀಲ, ಅಂಬಾಲಾ ಜೈನ್, ಗಂಗಾಂಬಿಕಾ ಪಾಟೀಲ, ಶ್ರೀನಿವಾಸ ಬೆಟಗೇರಿ, ಅಶೋಕ ಹೊಟ್ಟಿಗೌಡ್ರ, ಬಿ. ಎಂ.ತುಮರಿಕೊಪ್ಪದ,ಜಗದೀಶ ಹುಗ್ಗಿ, ಜಿ.ವಿ.ರಾಯ್ಕರ, ಸಾವಿತ್ರಿ ಪಾಟೀಲ, ಜಿ.ಡಿ.ಹೊನ್ನಮ್ಮನರ,ಎಂ.ಎಫ್.ಮುಳಗುಂದ ಎಂ.ಕೆ. ವೀರನಗೌಡ್ರ ಹಾಗೂ ವ್ಯವಸ್ಥಾಪಕ ಎನ್.ಜಿ. ಬ್ಯಾಡಗಿ, ಆರ್.ಆರ್.ಪಾಟೀಲ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.ಪ್ರತಿ ವರ್ಷ ಅಂದಾಜು 3 ಸಾವಿರ ಕೋಟಿ ರು.ಗಳಿಗೂ ಅಧಿಕ ವಹಿವಾಟು ನಡೆಯುತ್ತಿರುವುದು ಬ್ಯಾಡಗಿ ಮೆಣಸಿನಕಾಯಿ ಮಾರುಕಟ್ಟೆಯ ಶಕ್ತಿ ಮತ್ತು ವಿಶ್ವಾಸಾರ್ಹತೆಯ ಪ್ರತಿರೂಪವಾಗಿದೆ. ಅಷ್ಟಕ್ಕೂ ಇದು ಕೇವಲ ವ್ಯಾಪಾರವಲ್ಲ, ಲಕ್ಷಾಂತರ ಜನರಿಗೆ ಆರ್ಥಿಕ ಶಕ್ತಿಯಾಗಿದೆ ಎಂದು ಮಾಜಿ ಶಾಸಕ ಸುರೇಶಗೌಡ ಪಾಟೀಲ ಹೇಳಿದರು.