ಪುತ್ತೂರು: ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘವು ೨೦೨೫-೨೬ನೇ ಸಾಲಿನಲ್ಲಿ ೩.೧೯ ಕೋಟಿ ರು. ಮೊತ್ತದ ಜೇನು ವ್ಯವಹಾರ ನಡೆಸಿದ್ದು, ೧.೦೯ ಲಕ್ಷ ಕೆ.ಜಿ ಜೇನು ಮಾರಾಟಗೈದು ೧.೧೭ ಕೋಟಿ ರು. ಲಾಭ ಗಳಿಸಿದೆ. ಸಂಘವು ವಾರ್ಷಿಕವಾಗಿ ೩೭.೮೩ ಕೋಟಿ ರು. ವ್ಯವಹಾರ ಮಾಡಿದ್ದು, ೨೦.೯೨ ಲಕ್ಷ ರು. ನಿವ್ವಳ ಲಾಭ ಗಳಿಸಿದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ. ೨೨ ಡಿವಿಡೆಂಡ್‌ ಹಾಗೂ ಜೇನು ವ್ಯವಸಾಯಗಾರರಿಗೆ ಪ್ರತಿ ಕೆ.ಜಿಗೆ ೧೧ ರು. ಬೋನಸ್ ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಘೋಷಣೆ ಮಾಡಿದರು.ದ.ಕ. ಜೇನು ವ್ಯವಸಾಯಗಾರರ ಸಹಕಾರಿ ಸಂಘದ ೮೮ನೇ ವಾರ್ಷಿಕ ಮಹಾಸಭೆ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಪುತ್ತೂರಿನ ಪ್ರಧಾನ ಕಚೇರಿಯ ಮಾಧುರಿ ಸೌಧ ಸಭಾಂಗಣದಲ್ಲಿ ನಡೆಯಿತು.

ಮುಂದಿನ ಆರ್ಥಿಕ ವರ್ಷದಲ್ಲಿ ಜೇನಿನ ಪ್ರದರ್ಶನ ಹಾಗೂ ಮಾರಾಟ ಮಾಡಲು ಲಘು ವಾಹನ ಖರೀದಿಸಲಾಗುವುದು. ಇದರೊಂದಿಗೆ ಜೇನು ಚಾಕೋಲೇಟ್‌ ಮಾರಾಟ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ಜೇನಿನ ಉತ್ಪನ್ನವಾದ ಹನಿ ಬೈಟ್ ಚಾಕೋಲೇಟ್ ಹಾಗೂ ಹನಿ ಪೆಪ್ಪರ್ ಬೈಟ್ ಚಾಕೋಲೆಟ್ ಅನ್ನು ಹೊಸ ವಿನ್ಯಾಸದೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು. ಸಕ್ಕರೆ ರಹಿತ ಚಾಕೋಲೇಟ್ ಮತ್ತು ಹನಿ ಸೋಪು, ಜೇನಿನ ಸೌಂದರ್ಯ ವರ್ಧಕ ಉತ್ಪನ್ನಗಳನ್ನು ಮುಂದಿನ ದಿನಗಳಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು.

ಮಹಾಸಭೆಯಲ್ಲಿ ವರದಿ ವರ್ಷದಲ್ಲಿ ಸಂಘಕ್ಕೆ ಅತಿ ಹೆಚ್ಚು ಜೇನು ನೀಡಿದ ೧೦ ಜನ ಜೇನು ವ್ಯವಸಾಯಗಾರರಿಗೆ ಹಾಗೂ ಅತಿ ಹೆಚ್ಚು ಜೇನು ಖರೀದಿಸಿ, ಮಾರಾಟ ಮಾಡಿದ ಮಾರಾಟಗಾರರಿಗೆ ಬಹುಮಾನ ನೀಡಿ ಗೌರವಿಸಲಾಯಿತು. ಕೃಷಿ ವಿಜ್ಞಾನ ಕೇಂದ್ರ ಮಂಗಳೂರು ಇದರ ಹಿರಿಯ ವಿಜ್ಞಾನಿಗಳಾದ ಡಾ. ಟಿ.ಜೆ. ರಮೇಶ್ ಹಾಗೂ ಡಾ. ಮಲ್ಲಿಕಾರ್ಜುನ ಎಲ್. ಅವರು ಮಣ್ಣಿನ ಫಲವತ್ತತೆ ಹಾಗೂ ನೀರು ಸಂರಕ್ಷಣೆ ಬಗ್ಗೆ ಮಾಹಿತಿ ನೀಡಿದರು.

ಸಂಘದ ಉಪಾಧ್ಯಕ್ಷ ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ನಿರ್ದೇಶಕರಾದ ಜಿ.ಪಿ .ಶ್ಯಾಮ ಭಟ್, ಜನಾರ್ದನ ಚೂಂತಾರು, ಡಿ. ತನಿಯಪ್ಪ, ಶ್ರೀಶ ಕೊಡವೂರು, ಇಂದಿರಾ ಕೆ., ಹರೀಶ್ ಕೋಡ್ಲ, ಪಾಂಡುರಂಗ ಹೆಗ್ಡೆ, ಪುರುಷೋತ್ತಮ ಭಟ್ ಎಂ. ಶಿವಾನಂದ, ಮನಮೋಹನ ಎ. ಪುಟ್ಟಣ್ಣ ಗೌಡ ಕೆ, ಶಂಕರ್ ಪೆರಾಜೆ, ಸರಸ್ವತಿ ವೈ ಪಿ., ಸುಶೀಲ ಹಾಗೂ ವ್ಯವಸ್ಥಾಪನಾ ನಿರ್ದೇಶಕ ಜಯಾನಂದ ಜಿ. ಇದ್ದರು.