ಸಾರಾಂಶ
ಹುಬ್ಬಳ್ಳಿ:
ನಗರದ ವ್ಯಾಪಾರಿಯೊಬ್ಬರಿಗೆ ಹನಿಟ್ರ್ಯಾಪ್ ಮಾಡಿದ್ದ ತಂಡ, ಗೋವಾ, ಬೆಳಗಾವಿ, ಹೊಸಪೇಟೆಯಲ್ಲೂ ಹನಿಟ್ರ್ಯಾಪ್ ಮಾಡಿದೆ ಎಂಬುದು ವಿಚಾರಣೆಯಿಂದ ಗೊತ್ತಾಗಿದೆ ಎಂದು ಅಪರಾಧ ಮತ್ತು ಕಾನೂನು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ತಿಳಿಸಿದರು.ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಗರದ ಪಾತ್ರೆ ಅಂಗಡಿ ವ್ಯಾಪಾರಿಯೋರ್ವರಿಗೆ ಹನಿಟ್ರ್ಯಾಪ್ ಮಾಡಿ ಬೆತ್ತಲೆ ವಿಡಿಯೋ ಮಾಡಿಕೊಂಡ ಪ್ರಕರಣದಲ್ಲಿ ಇಲ್ಲಿನ ಮುಲ್ಲಾ ಓಣಿಯ ಜೋಯಾ ಊರ್ಫ್ ಶಬಾನಾಬೇಗಂ ನದಾಫ್, ಸೈಯದ್ ತಹಶೀಲ್ದಾರ, ತೌಸೀಪ್ ಊರ್ಫ ಮೆಹಬೂಬಸಾಬ ನಾಲಬಂದ, ಅಬ್ದುಲ್ ರೆಹಮಾನ್ ಬಿಲ್ಲೆವಾಲೆ, ಪರವೀನ ಬಳ್ಳಾರಿ ಎಂಬುವರನ್ನು ಬಂಧಿಸಲಾಗಿತ್ತು. ಇವರು ವ್ಯಾಪಾರಿಗೆ ₹5 ಲಕ್ಷ ಬೇಡಿಕೆ ಇಟ್ಟಿದ್ದರು ಎಂಬ ಮಾಹಿತಿ ದೊರೆತಿದೆ ಎಂದರು.
ಹೇಗೆ ಗಾಳ ಹಾಕುತ್ತಿದ್ದರು?:ಆರೋಪಿಗಳಾದ ಜೋಯಾ ಹಾಗೂ ಸೈಯದ್ ಇಬ್ಬರೂ ಲಿವಿಂಗ್ ರಿಲೇಶನ್‌ಶಿಪ್‌ನಲ್ಲಿದ್ದರು. ನಗರದಾದ್ಯಂತ ಸಂಚರಿಸುತ್ತಿದ್ದ ಸೈಯದ್ ಪುರುಷ ವ್ಯಾಪಾರಿಗಳು ಯಾರು ಎಂಬ ಮಾಹಿತಿ ಪಡೆದು ಅವರ ಮೊಬೈಲ್ ಸಂಖ್ಯೆಗಳನ್ನು ತಂದು ಜೋಯಾಗೆ ನೀಡುತ್ತಿದ್ದನು. ನಂತರ ಮಹಿಳೆಯು ವ್ಯಾಪಾರಿಗೆ ಮೆಸೇಜ್ ಮಾಡುತ್ತಾ ಬಲೆಗೆ ಹಾಕಿಕೊಳ್ಳುತ್ತಿದ್ದಳು. ಮೆಸೇಜ್ ಮಾಡಿದ ಮೇಲೆ ವ್ಯಾಪಾರಿಗಳು ಪ್ರತಿಕ್ರಿಯೆ ನೀಡಿದರೆ ಆಯ್ತು ಅಂಥವರೊಂದಿಗೆ ಮೊಬೈಲ್ ಮೂಲಕ ಮೆಸೇಜ್ ಕಳುಹಿಸುತ್ತಾ ಹತ್ತಿರವಾಗುತ್ತಿದ್ದಳು. ಪರಿಚಯವಾದ ಮೇಲೆ ಇಲ್ಲಿನ ರಾಜ್‌ನಗರದಲ್ಲಿದ್ದ ಬಾಡಿಗೆ ರೂಮಿನಲ್ಲಿ ಸೇರುವುದಾಗಿ ವ್ಯಾಪಾರಿಗಳನ್ನು ಕರೆಸಿಕೊಳ್ಳುತ್ತಿದ್ದಳು. ನಂತರ ಈ ತಂಡವು ಅಲ್ಲಿಯೇ ಅವರನ್ನು ನಗ್ನಮಾಡಿ ವಿಡಿಯೋ ಮಾಡಿಕೊಂಡು ಹಣದ ಬೇಡಿಕೆ ಇಡುತ್ತಿದ್ದರು. ಮೇಸೆಜ್ ಮಾಡಿದ ವೇಳೆ ವ್ಯಾಪಾರಿಗಳಿಂದ ಪ್ರತಿಕ್ರಿಯೆ ಬಾರದಿದ್ದರೆ ಅಂತಹ ಸಂಖ್ಯೆಗಳನ್ನು ಅಳಿಸಿಹಾಕುತ್ತಿದ್ದಳು ಎಂಬ ಮಾಹಿತಿ ದೊರೆತಿದೆ. ಇನ್ನೂ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ ಎಂದು ಡಿಸಿಪಿ ವಿವರಿಸಿದರು.
ಇನ್ನಿಬ್ಬರ ಬಂಧನಕ್ಕೆ ಕ್ರಮ:ಮಹಾನಗರ ಪಾಲಿಕೆ ಎಂಜಿನಿಯರ್‌ಗೆ ಲೋಕಾಯುಕ್ತ ಪೊಲೀಸರ ಹೆಸರಿನಲ್ಲಿ ವಂಚಿಸಿದ್ದ ಶರಣು ಪಾಟೀಲ ಮತ್ತು ಜಾಕೀರ್ ಮುಲ್ಲಾ ಎಂಬುವರನ್ನು ಈಗಾಗಲೇ ಬಂಧಿಸಲಾಗಿದೆ. ಇನ್ನುಳಿದ ರವಿ ಪಾಟೀಲ ಮತ್ತು ಮಹಾಂತೇಶ ಹಿರೇಮಠ ಎಂಬುವವರು ತಲೆಮರೆಸಿಕೊಂಡಿದ್ದಾರೆ. ಶೀಘ್ರದಲ್ಲಿಯೇ ಈ ಇಬ್ಬರೂ ಆರೋಪಿಗಳನ್ನು ಪತ್ತೆ ಹಚ್ಚಲಾಗುವುದು ಎಂದು ಡಿಸಿಪಿ ಹೇಳಿದರು.