ಹನಿಟ್ರ್ಯಾಪ್‌, ರೇಪ್‌ ಪ್ರಕರಣ: ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ಪೊಲೀಸ್‌

| Published : Sep 11 2024, 01:02 AM IST

ಹನಿಟ್ರ್ಯಾಪ್‌, ರೇಪ್‌ ಪ್ರಕರಣ: ನ್ಯಾಯಾಧೀಶರ ಮುಂದೆ ಹೇಳಿಕೆ ದಾಖಲಿಸಿದ ಪೊಲೀಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಕಲಬುರಗಿ ಹನಿಟ್ರ್ಯಾಪ್‌ ಪ್ರಕರಣದ ತನಿಖೆ ತೀವ್ರಗೊಳ್ಳುತ್ತ ಸಾಗಿದೆ. ಕಳೆದ 3 ದಿನದಲ್ಲೇ ನಗರದ ಸೆನ್‌ ಠಾಣೆಯ ಪೊಲೀಸರು ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿ ಹನಿಟ್ರ್ಯಾಪ್‌ ಪ್ರಕರಣದ ತನಿಖೆ ತೀವ್ರಗೊಳ್ಳುತ್ತ ಸಾಗಿದೆ. ಕಳೆದ 3 ದಿನದಲ್ಲೇ ನಗರದ ಸೆನ್‌ ಠಾಣೆಯ ಪೊಲೀಸರು ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ ಸೇರಿದಂತೆ ಒಟ್ಟು 8 ಜನ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ಈ ಆರೋಪಿಗಳೆಲ್ಲರ ಮೊಬೈಲ್‌ ಫೋನ್‌ಗಳನ್ನು ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಆರೋಪಿಗಳ ಮೊಬೈಲ್‌, ಅವರು ಹೊಂದಿರುವ ಸಂಪರ್ಕಗಳು, ವಿಡಿಯೋ ಇತ್ಯಾದಿಗಳೇನಾದರೂ ಇವೆಯಾ? ಎಂಬುದರ ಮಾಹಿತಿ ಪತ್ತೆಗೆ ಈ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಈ ಪ್ರಕರಣದಲ್ಲಿ ಹೆಚ್ಚಿನ ಮಹತ್ವ ಪಡೆಯುವ ಸಾಧ್ಯತೆಗಳಿವೆ.

ಏತನ್ಮಧ್ಯೆ ಸೋಮವಾರ ರಾತ್ರಿ ಬಂಧಿತರಾಗಿರುವ ದಲಿತ ಸೇನೆಯ ರಾಜ್ಯಾಧ್ಯಕ್ಷ ಹಣಮಂತ ಯಳಸಂಗಿ (ಎ- 3), ಶ್ರೀಕಂತ ರೆಡ್ಡಿ (ಎ - 4), ದಲಿತ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ ಭಂಡಾರಿ (ಎ- 5), ಉದಯಕುಮಾರ ಖಣಗೆ (ಎ- 6), ಅರವಿಂದ ಕಮಲಾಪುರ (ಎ- 7), ಸಂತೋಷ ಪಾಳಾ (ಎ- 8) ಇವರೆಲ್ಲರನ್ನು ನ್ಯಾಯಾಧೀಶರಮುಂದೆ ಹಾಜರುಪಡಿಸಲಾಗಿದ್ದು, ಸೆ.21ರ ವರೆಗೆ ಇವರೆಲ್ಲರನ್ನ ನ್ಯಾಯಾಧೀಶರು ನ್ಯಾಯಾಂಗ ಬಂಧನಕ್ಕೊಪ್ಪಿದ್ದಾರೆ.

ಮುಂಬೈ ಮೂಲದ ಸಂತ್ರಸ್ತೆ ಯುವತಿ ನೀಡಿರುವ ದೂರನ್ನಾಧರಿಸಿ ಸ್ಟೇಷನ್‌ ಬಜಾರ್‌ ಠಾಣೆಯಲ್ಲಿ ರೇಪ್‌ ಮತ್ತು ಹನಿಟ್ರ್ಯಾಪ್‌ ಪ್ರಕರಣ ದಾಖಲಿಸಿದ್ದ ಪೊಲೀಸರು ಅದಾಗಲೇ ಪ್ರಕರಣದಲ್ಲ್ಲಿ ರಾಜು ಲೇಂಗಟಿ (ಎ- 1) ಹಾಗೂ ಪ್ರಭು ಹಿರೇಮಠ (ಎ- 2) ಇ‍ರಿಬ್ಬರನ್ನೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಪ್ರಕರಣದಲ್ಲಿ ಇಲ್ಲಿಯವರೆಗೂ ಒಟ್ಟು 8 ಆರೋಪಿಗಳ ಬಂಧನವಾಗಿದೆ.

ವೈಜ್ಞಾನಿಕ- ತಾಂತ್ರಿಕ ಸಾಕ್ಷ್ಯಗಳ ಸಂಗ್ರಹಕ್ಕೆ ಆದ್ಯತೆ: ಕಮೀಶ್ನರ್‌ ಡಾ. ಶರಣಪ್ಪ

ಇದಿಲ್ಲಿ ಸುದ್ದಿಗೋಷ್ಠಿಯಲ್ಲಿ ಈ ಸಂಗತಿ ತಿಳಿಸಿರುವ ಕಲಬುರಗಿ ನಗರ ಪೊಲೀಸ್‌ ಕಮೀಶ್ನರ್‌ ಡಾ. ಶರಣಪ್ಪ ಢಗೆ, ಪ್ರಕರಣದಲ್ಲಿ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಕ್ಷ್ಯಗಳನ್ನು ಕಲೆ ಹಾಕಲಾಗುವತ್ತ ಆದ್ಯತೆ ನೀಡಲಾಗುತ್ತಿದೆ. ಈಗಾಗಲೇ ಸಂತ್ರಸ್ತೆ ದೂರು ನೀಡಿರುವ ಮುಂಬೈ ಮೂಲದ ಯುವತಿಯ ವೈದ್ಯಕೀಯ ಪರೀಕ್ಷೆಯಾಗಿದೆ. ಇದಲ್ಲದೆ ಕಲಂ 164 ಅಡಿಯಲ್ಲಿ ಆಕೆಯ ಹೇಳಿಕೆಯನ್ನು ನ್ಯಾಯಧೀಶರ ಸಮ್ಮುಖದಲ್ಲೇ ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಐಟಿ ಕಾಯ್ದೆಗಳೂ ಲಾಗೂ ಆಗಿದ್ದು ಅದರಡಿಯಲ್ಲೂ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಆರೋಪಿಗಳ ಮೊಬೈಲ್‌ ಮಾಹಿತಿಗಳೂ ಪ್ರಮುಖವಾಗಲಿವೆ. ಹೀಗಾಗಿ ಅವರ ಮೊಬೈಲ್‌ನ ಸಂಗತಿಗಳೆಲ್ಲವನ್ನು ಕಲೆ ಹಾಕಲು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಆ ವರದಿಯೂ ಪ್ರಕರಣದಲ್ಲಿ ಪ್ರಮುಖವಾಗಲಿದೆ. ಆರೋಪಿಗಳನ್ನೆಲ್ಲ ವಿಚಾರಣೆಗೆ ಪೊಲೀಸ್‌ ವಶಕ್ಕೆ ನೀಡುವಂತೆ ನ್ಯಾಯಾಲಯಕ್ಕೆ ಕೋರಲಾಗುವುದು ಎಂದರು.

ಸಂತ್ರಸ್ತರು ಮುಂದೆ ಬಂದು ದೂರು ಕೊಡಲಿ

ಪ್ರಶ್ನೆಯೊಂದಕ್ಕೆ ಉತ್ತರಿಸಿದ ಡಾ. ಶರಣಪ್ಪ ಸದರಿ ಪ್ರಕರಣದಲ್ಲಿ ಇನ್ನೂ ಹಲವರು ಇರಬಹುದು, ಇವೆಲ್ಲ ದೃಷ್ಟಿಕೋನದಲ್ಲಿ ತನಿಖೆ ಸಾಗಲಿದೆ. ಇಂತಹ ದುಷ್ಕೃತ್ಯದಲ್ಲಿ ನೊಂದವರು ಯಾರಾದರೂ ಇದ್ದರೆ ಅವರು ನೇರವಾಗಿ ತಮಗೆ ದೂರು ಕೊಡಲಿ, ಮಾಹಿತಿ ಗೌಪ್ಯವಾಗಿಡಲಾಗುತ್ತದೆ ಎಂದರು.

ಸಂತ್ರಸ್ತರು ಯುವತಿಯರಾಗಿರಲಿ, ವರ್ತಕರು, ಉದ್ದಿಮೆದಾರರಾಗಿರಲಿ, ಅಧಿಕಾರಿಗಳಿರಲಿ ಯಾರ ಇದ್ದರೂ ಇಂತಹ ಅಪರಾಧದಿಂದ ತೊಂದರೆಗೊಳಗಾಗಿದ್ದರೆ ಮುಂದೆ ಬಂದು ಮಾಹಿತಿ ಕೊಡಲಿ, ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ತಪಾಸಣೆ ಮಾಡಿ ಕ್ರಮ ಕೈಗೊಳ್ಳುತ್ತೇವೆಂದರು. ಆರೋಪಿಗಳು ಕೃತ್ಯಕ್ಕೆ ಬಳಸಿರುವ ವಾಹನಗಳನ್ನ ಜಪ್ತಿ ಮಾಡಿದ್ದೇವೆ. ಆಯುಧಗಳು ಜಪ್ತಿ ಮಾಡಿಲ್ಲ. ಈ ಪ್ರಕರಣದಲ್ಲಿ ಆಯುಧ ಬಳಸಿರುವ ಸಾಧ್ಯತೆಗಳು ಕ್ಷೀಣ. ಬರುವ ದಿನಗಳಲ್ಲಿ ತನಿಖೆಯಿಂದ ಎಲ್ಲವೂ ಹೊರಬರಲಿದೆ. ತನಿಖೆಗೆ ಸ್ವಲ್ಪ ಸಮಯ ಬೇಕಾಗುತ್ತದೆ. ತನಿಖೆಯನ್ನ ವೈಜ್ಞಾನಿಕ ಹಾಗೂ ತಾಂತ್ರಿಕ ಸಾಕ್ಷ್ಯಾಧಾರಗಳನ್ನಾಧರಿಸಿ ನಡೆಸುತ್ತೇವೆಂದು ಡಾ. ಶರಣಪ್ಪ ಹೇಳಿದ್ದಾರೆ. ಪ್ರಕರಣ ಹೊರಬಿದ್ದು ವಾರ ಕಳೆದರೂ ಕೂಡಾ ಮುಂಬೈ ಮೂಲದ ಯುವತಿ ಹೊರತುಪಡಿಸಿ ಇನ್ನೂ ಯಾರೂ ಪೊಲೀಸರಿಗೆ ದೂರು ನೀಡಿಲ್ಲ, ಯಾವ ಉದ್ಯಮಿ, ವರ್ತರೂ ದೂರು ನೀಡಿಲ್ಲವೆಂದು ಕಮೀಶ್ನರ್‌ ಸ್ಪಷ್ಪಡಸಿದಿರು.