- ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮನುವಾಲಜ್ಜಿ ಒತ್ತಾಯ । ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವ

- - -

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ.ಶಾಂತನಗೌಡ ಅವರು ರಾಜಕೀಯ ಕ್ಷೇತ್ರದಲ್ಲಿ ಅಪಾರ ಅನುಭವ ಹೊಂದಿದ ಹಿರಿಯ ಮುತ್ಸದ್ದಿ ನಾಯಕರಾಗಿದ್ದಾರೆ. ಅವರ ಇಡೀ ಕುಟುಂಬವೇ ರಾಜಕೀಯ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆ ನೀಡಿದೆ, ಪಕ್ಷದ ಶಾಸಕಾಂಗ ಪಕ್ಷದ ನಾಯಕರು ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾಕರ್ ಅ‍ವರ ಸಂಪುಟದಲ್ಲಿ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕಿನ ಯುವ ಕಾಂಗ್ರೆಸ್ ಘಟಕ ಪಕ್ಷದ ಹೈಕಮಾಂಡ್ ಹಾಗೂ ವರಿಷ್ಠ ನಾಯಕರನ್ನು ಒತ್ತಾಯಪಡಿಸುತ್ತಿದೆ ಎಂದು ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮನುವಾಲಜ್ಜಿ ಹೇಳಿದರು.

ಮಂಗಳವಾರ ಈ ಕುರಿತು ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿ ಕ್ಷೇತ್ರದ ಶಾಸಕರಾದ ಡಿ.ಜಿ. ಶಾಂತನಗೌಡ ಅವರು 1999ರಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ 29 ಸಾವಿರ ಮತಗಳ ಅಂತರದಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. ಅಂದಿನ ಎಸ್.ಎಂ. ಕೃಷ್ಣ ನಾಯಕತ್ವದಲ್ಲಿ ಅಧಿಕೃತವಾಗಿ ಯಾವುದೇ ಆಕಾಂಕ್ಷೆಗಳಿಲ್ಲದೇ, ಬೇಡಿಕೆ ಇಲ್ಲದೇ ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಸೇರಿದ್ದರು ಎಂದರು.


ಅನಂತರ 2013ರಲ್ಲಿ ಹಾಗೂ 2023ರಲ್ಲಿ ಪಕ್ಷದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಇವರೆಗೂ ಯಾವುದೇ ರೀತಿಯ ಕ್ಯಾಬಿನೆಟ್ ದರ್ಜೆ ಸೂಕ್ತ ಸ್ಥಾನಮಾನಗಳು ಅವರಿಗೆ ದೊರೆತಿಲ್ಲ, ಕಾಂಗ್ರೆಸ್ ಕಟ್ಟಾಳಾಗಿ ಸತತವಾಗಿ ಹೊನ್ನಾಳಿ, ನ್ಯಾಮತಿ ಅವಳಿ ತಾಲೂಕು ಸರ್ವ ಅಭಿವೃದ್ಧಿಗೆ ಶ್ರಮಿಸುತ್ತಾ ಕಾಂಗ್ರೆಸ್ ಪಕ್ಷವನ್ನು ಬಲಿಷ್ಠವಾಗಿ ಸಂಘಟಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿದ್ದಾರೆ ಎಂದು ತಿಳಿಸಿದರು.

ತಾಲೂಕಿನ ಪ್ರತಿ ಕಾರ್ಯಕರ್ತರೊಂದಿಗೆ ನಿಕಟ ಸಂಪರ್ಕ ಹೊಂದಿ, ಪಕ್ಷ ನೀಡಿದ ಕರ್ತವ್ಯಗಳನ್ನು, ಹೈಕಮಾಂಡ್ ನೀಡಿದ ಸೂಚನೆಗಳಂತೆ ಪಕ್ಷ ಬಲಪಡಿಸುತ್ತಿದ್ದಾರೆ. ಇಂತಹ ಸರಳ, ಸಜ್ಜನಿಕೆ ವ್ಯಕ್ತಿತ್ವವುಳ್ಳ ಶಾಸಕ ಡಿ.ಜಿ, ಶಾಂತನಗೌಡ ಅವರನ್ನು ಡಿ.ಕೆ.ಶಿವಕುಮಾರ್ ನೂತನ ಸಚಿವ ಸಂಪುಟದಲ್ಲಿ ಸಚಿವರಾಗಿ ಅವಕಾಶ ನೀಡಬೇಕು. ಹೀಗಾದರೆ ಹೊನ್ನಾಳಿ, ನ್ಯಾಮತಿ ತಾಲೂಕುಗಳು ಹಾಗೂ ದಾವಣಗೆರೆ ಜಿಲ್ಲೆಯಲ್ಲಿಯೇ ವಿಶೇಷವಾದ ಶಕ್ತಿ ಕಾಂಗ್ರೆಸ್ ಪಕ್ಷ ಹೊಂದುತ್ತದೆ ಎಂದರು.

ಜನಪರ ಕೆಲಸಗಳನ್ನು ಮಾಡುತ್ತಿರುವ ಶಾಸಕ ಡಿ.ಜಿ.ಶಾಂತನಗೌಡ ಸಚಿವರಾಗಿ ಅರ್ಥಪೂರ್ಣ ಹಾಗೂ ಸಮರ್ಥವಾಗಿ ಕರ್ತವ್ಯ ನಿಭಾಯಿಸುವ ಎಲ್ಲ ಅರ್ಹತೆ, ಶಕ್ತಿ ಹೊಂದಿದ್ದಾರೆ. ಪಕ್ಷದ ಹೈಕಮಾಂಡ್, ವರಿಷ್ಠರು ಶಾಂತನಗೌಡ ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಯುವ ಕಾಂಗ್ರೆಸ್ ಒತ್ತಾಯಪಡಿಸುತ್ತದೆ ಎಂದರು.

ಶಾಸಕ ಡಿ.ಜಿ.ಶಾಂತನಗೌಡ ಅವರ ತಂದೆ ಶಂಕ್ರಪ್ಪ ಗೌಡ ಸಹ ಮೈಸೂರು ಸಂಸ್ಥಾನದಲ್ಲಿ ಎಂ.ಆರ್.ಎ. ಆಗಿ ಕಾರ್ಯನಿರ್ವಹಿಸಿದ್ದಾರೆ. ಶಾಂತನಗೌಡ ಅವರ ಅಣ್ಣ ದಿವಂಗತ ಡಿ.ಜಿ.ಬಸವಗೌಡ ಸಹ 2 ಬಾರಿ ಶಾಸಕರಾಗಿ ಉತ್ತಮ ಕೆಲಸ ಮಾಡಿದ ಕೀರ್ತಿ ಅವರಿಗಿದೆ. ಇಂತಹ ಉತ್ತಮ ಹಿನ್ನಲೆವುಳ್ಳ ಕುಟುಂಬದವರು ಶಾಸಕ ಡಿ.ಜಿ. ಶಾಂತನಗೌಡ. ಅವರಿಗೆ ಸಚಿವ ಸ್ಥಾನದ ಎಲ್ಲ ಅರ್ಹತೆಗಳಿದ್ದು, ಸಚಿವ ಸ್ಥಾನ ನೀಡಿದರೆ ಕಾಂಗ್ರೆಸ್‌ಗೆ ಗೌರವದ ಸಂಕೇತವಾಗಲಿದೆ ಎಂದು ಯುವ ಕಾಂಗ್ರೆಸ್ ತಾಲೂಕು ಅಧ್ಯಕ್ಷ ಮನು ವಾಲಜ್ಜಿ,ಒತ್ತಾಯಿಸಿದರು.

ಸಾಸ್ವೇಹಳ್ಳಿ ಯುವ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಸಚಿನ್, ಹೊನ್ನಾಳಿ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್, ಯುವ ಮುಖಂಡ ವೀರೇಶ್ ಘಂಟ್ಯಾಪುರ, ಪ್ರಕಾಶ್, ಸುಜಯ್ ಹೊನ್ನಾಳಿ, ಸಿದ್ದೇಶ್, ಹರೀಶ್ ಕೋಟೆಮಲ್ಲೂರು, ಬೀರೇಶ್ ಸೊರಟೂರು, ಆದಿತ್ಯ, ಮನೋಜ್ ಅಂಜನೇಯಪುರ ಸೇರಿದಂತೆ ಅನೇಕ ಯುವ ಕಾಂಗ್ರೆಸ್ ಮುಖಂಡರು ಇದ್ದರು.

- - -

-2ಎಚ್.ಎಲ್.ಐ2:

ಹೊನ್ನಾಳಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಮನುವಾಲಜ್ಜಿ ನೇತೃತ್ಯದಲ್ಲಿ ಯುವ ಮುಖಂಡರು ಸುದ್ದಿಗೋಷ್ಠಿ ನಡೆಸಿ ಶಾಸಕ ಡಿ.ಜಿ.ಶಾಂತನಗೌಡರಿಗೆ ಸಚಿವ ಸ್ಥಾನ ನೀಡಬೇಕೆಂದು ಒತ್ತಾಯಪಡಿಸಿದರು.