ಹೊನ್ನಾಳಿ ಸುಗಮ ಸಂಚಾರ ವ್ಯವಸ್ಥೆ; ಅಧಿಕಾರಿಗಳಿಂದ ಸ್ಥಳ ಪರಿಶೀಲನೆ

| Published : Jan 20 2024, 02:00 AM IST

ಹೊನ್ನಾಳಿ ಸುಗಮ ಸಂಚಾರ ವ್ಯವಸ್ಥೆ; ಅಧಿಕಾರಿಗಳಿಂದ ಸ್ಥಳ ಪರಿಶೀಲನೆ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ದ್ವಿ ಚಕ್ರ ವಾಹನಗಳ ಎಲ್ಲೆಂದರಲ್ಲಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಪಾದಚಾರಿಗಳಿಗೆ, ಬಸ್ ಹಾಗೂ ಕಾರು ಓಡಾಟಕ್ಕೆ ತೊಂದರೆಯಾಗುವುದರಿಂದ ತುಮ್ಮಿನಕಟ್ಟೆ ರಸ್ತೆಯಲ್ಲೂ ಪ್ರತಿನಿತ್ಯ ರಸ್ತೆಯ ಒಂದು ಕಡೆ ಮಾತ್ರ ನಿಲ್ಲಿಸಲು ಅವಕಾಶ ಮಾಡುವುದಕ್ಕೆ ಅಧಿಕಾರಿಗಳು ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ಪಟ್ಟಣದ ಪಾದಚಾರಿ ಹಾಗೂ ಪ್ರಯಾಣಿಕರ ಸುಗಮ ಸಂಚಾರಕ್ಕೆ ಸುವ್ಯವಸ್ಥಿತ ಪಾರ್ಕಿಂಗ್ ಸ್ಥಳ ನಿಗದಿ ಮಾಡಿ ಆ ಮೂಲಕ ಸುಗಮ ಸಂಚಾರಕ್ಕೆ ಅನುವು ಮಾಡುವ ಬಗ್ಗೆ ಶುಕ್ರವಾರ ಉಪ ವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ ಸೇರಿ ಅಧಿಕಾರಿಗಳು ಎಸಿ ಕಚೇರಿಯಲ್ಲಿ ಚರ್ಚಿಸಿ, ಪಾರ್ಕಿಂಗ್‌ ಸ್ಥಳ ನಿಗದಿ ಬಗ್ಗೆ ಉಪವಿಭಾಗಾಧಿಕಾರಿ, ತಹಸೀಲ್ದಾರ್ ಪಟ್ಟರಾಜಗೌಡ, ಪೊಲೀಸ್‍ ಇನ್ಸ್‌ಪೆಕ್ಟರ್ ಸುನಿಲ್‍ ಕುಮಾರ್, ತಾಪಂ ಇಒ ರಾಘವೇಂದ್ರ ಹಾಗೂ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ನಿರಂಜನಿ ಪಟ್ಟಣದಲ್ಲಿ ಸ್ಥಳಗಳ ವೀಕ್ಷಿಸಿದರು.

ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿವರೆಗಿನ ರಸ್ತೆಯ ಇಕ್ಕೆಲಗಳಲ್ಲಿ ದ್ವಿ ಚಕ್ರ ವಾಹನಗಳ ಎಲ್ಲೆಂದರಲ್ಲಿ ನಿಲ್ಲಿಸಿ ಸಂಚಾರಕ್ಕೆ ಅಡ್ಡಿಯಾಗಿರುವುದರಿಂದ ಪಾದಚಾರಿಗಳಿಗೆ, ಬಸ್ ಹಾಗೂ ಕಾರು ಓಡಾಟಕ್ಕೆ ತೊಂದರೆಯಾಗುವುದರಿಂದ ತುಮ್ಮಿನಕಟ್ಟೆ ರಸ್ತೆಯಲ್ಲೂ ಪ್ರತಿನಿತ್ಯ ರಸ್ತೆಯ ಒಂದು ಕಡೆ ಮಾತ್ರ ನಿಲ್ಲಿಸಲು ಅವಕಾಶ ಮಾಡುವುದಕ್ಕೆ ಅಧಿಕಾರಿಗಳು ಚರ್ಚೆ ನಡೆಸಿದರು.

ಅಗಳ ಮೈದಾನದಲ್ಲಿ ಕಾರು ನಿಲ್ದಾಣ

ಸರ್ಕಾರಿ ಹಾಗೂ ಇತರ ಕೆಲಸಗಳಿಗೆ ಗ್ರಾಮೀಣ ಭಾಗದಿಂದ ಬರುವ ಕಾರು ಹಾಗೂ ಇತರ ವಾಹನಗಳಿಗೆ ಪಟ್ಟಣದ ಹೃದಯ ಭಾಗದಲ್ಲಿರುವ ಅಗಳ ಮೈದಾನದಲ್ಲಿ ನಿಲ್ದಾಣಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಅಲ್ಲಿಯೂ ವೀಕ್ಷಿಸಿ ಚರ್ಚೆ ನಡೆಸಿದರು.

ಪತ್ರ ಬರಹಗಾರರಿಗೆ ಬದಲಿ ವ್ಯವಸ್ಥೆ:

ಪುರಸಭೆ ಪಕ್ಕದ ರಸ್ತೆಯ ಎರಡು ಬದಿಗಳಲ್ಲಿರುವ ಪತ್ರ ಬರಹಗಾರರ ಶೆಡ್‍ಗಳ ಅದೇ ಜಾಗದಲ್ಲಿ ಒಂದು ಕಡೆಗೆ ಸ್ಥಳಾಂತರಿಸಿ, ಖಾಲಿ ಜಾಗದಲ್ಲಿ ದ್ವಿಚಕ್ರ ವಾಹನಗಳ ನಿಲ್ಲಿಸುವ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಚರ್ಚಿಸಿದರು. ಇದೇ ರೀತಿಯಲ್ಲಿ ನ್ಯಾಮತಿ ರಸ್ತೆಯಲ್ಲೂ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡುವ ಬಗ್ಗೆ ಸಭೆಯಲ್ಲಿ ಚರ್ಚಿಸಿದರು.

ಖಾಸಗಿ ಬಸ್ ನಿಲ್ದಾಣದ ಅಕ್ಕಪಕ್ಕದಲ್ಲಿರುವ ಪುರಸಭೆಯ ಮಳಿಗೆಗಳ ಮುಂದಿನ ಜಾಗಗಳ ತೆರವುಗೊಳಿಸಲು ನೋಟಿಸ್‌ ಜಾರಿ ಮಾಡಲು ಉಪ ವಿಭಾಗಾಧಿಕಾರಿ ಪುರಸಭೆ ಮುಖ್ಯಾಧಿಕಾರಿಗಳಿಗೆ ಸೂಚಿಸಿದರು.

ಏಕಮುಖ ನಿಲ್ದಾಣ ಮಾಡಿದ ಮೇಲೆ ಆ ಸ್ಥಳದಲ್ಲಿ ಹೋಂ ಗಾರ್ಡ್‍ಗಳ ನಿಯೋಜಿಸಿ , ಸುಗಮ ಸಂಚಾರಕ್ಕೆ ಪುರಸಭೆ ಅಧಿಕಾರಿಗಳು ಮುಂದಾಗಬೇಕು ಹಾಗೂ ಹೋಂ ಗಾರ್ಡ್‍ಗಳಿಗೆ ಪುರಸಭೆಯಿಂದಲೇ ವೇತನ ನೀಡಬೇಕು ಎಂದು ಸಿಪಿಐ ಸುನಿಲ್‍ಕುಮಾರ್ ತಿಳಿಸಿದರು.