ಕಿಕ್ಕೇರಿಯಲ್ಲಿ ಗೋವಿನ ಪೂಜೆಯೊಂದಿಗೆ ಹೊನ್ನಾರು ಆಚರಣೆ

| Published : Apr 12 2025, 12:47 AM IST

ಸಾರಾಂಶ

ನಶಿಸುತ್ತಿರುವ ರೈತಾಪಿ ಸಮುದಾಯದ ಸಂಭ್ರಮದ ಹಬ್ಬದಲ್ಲಿ ಒಂದಾದ ಹೊನ್ನಾರು ಹಬ್ಬಇದಾಗಿದೆ. ಭೂದೇವಿ ರೈತರ ಬೇಸಾಯಕ್ಕೆ ಕೈಬಿಡದೆ ರಕ್ಷಿಸಲು ಪ್ರಾರ್ಥಿಸುವ ಹಬ್ಬವಾಗಿದೆ. ಈ ಹಬ್ಬಆಚರಣೆ ತಪ್ಪದೆ ಮಾಡುವುದು ತಮ್ಮಕರ್ತವ್ಯವಾಗಿದೆ ಎಂದು ಸಾಮೂಹಿಕವಾಗಿ ದೇವರಲ್ಲಿ ಪ್ರಾರ್ಥಿಸಿಕೊಂಡರು.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಭಾರತೀಯ ಸಂಸ್ಕೃತಿಯಲ್ಲಿ ಪೂಜನೀಯ ಸ್ಥಾನದ ಹೊಂದಿರುವ ಗೋಮಾತೆಗೆ ಪೂಜಿಸಿ ನೊಗಕಟ್ಟಿ ಹೊನ್ನಾರು ಸಂಭ್ರಮವನ್ನು ರೈತರು ಶುಕ್ರವಾರ ಆಚರಿಸಿದರು.

ಪಟ್ಟಣದ ಉಪ್ಪರಿಗೆ ಬಸವಣ್ಣ ದೇವರಿಗೆ ಅಗ್ರ ಪೂಜೆ ಸಲ್ಲಿಸಿದ ನಂತರ ಆರಂಭವಾದ ಹೊನ್ನಾರು ಕಾರ್ಯಕ್ರಮಕ್ಕೆ ರೈತ ಮುಖಂಡರಲ್ಲಿ ಸಂಭ್ರಮ ಮೂಡಿತ್ತು. ರೈತಾಪಿ ಸಮುದಾಯದವರು ಎದ್ದು ಜಾನುವಾರುಗಳನ್ನು ಪೂಜಿಸಲು ಸಜ್ಜಾದರು.

ರಾಸುಗಳ ಮೈ ಶುಭ್ರವಾಗಿ ತೊಳೆದು, ಎಣ್ಣೆಯಿಂದ ಮೈ ನುಣುಪಾಗಿ ಸವರಿದರು. ಕೊಂಬುಗಳಿಗೆ ಎಣ್ಣೆ ಮಜ್ಜನ ಮಾಡಿ ಮಿರ್ರನೆ ಮಿಂಚುವಂತೆ ಮಾಡಿದರು. ನೊಸಲಿಗೆ ಅರಿಷಿಣ, ಕುಂಕುಮದ ತಿಲಕವಿಟ್ಟು ಕೊರಳಿಗೆ ಉಣ್ಣೆಕಪ್ಪುದಾರ, ಗೆಜ್ಜೆ ಕಟ್ಟಿದರು. ನೊಗ, ನೇಗಿಲು ಇಟ್ಟು ಪೂಜಿಸಿದರು. ನಂತರ ಎತ್ತುಗಳಿಗೆ ನೊಗ ಏರಿಸಿ ನೇಗಿಲು ಕಟ್ಟಿದರು.

ಬಸವೇಶ್ವರ ಗುಡಿಯ ಸುತ್ತ ಪ್ರದಕ್ಷಿಣೆ ಹಾಕಿ, ರೇಖೆ ನಿರ್ಮಿಸಿ ತಮಟೆ ವಾದ್ಯದೊಂದಿಗೆ ಸಂಭ್ರಮದಿಂದ ಸಾಗಿದರು. ಎತ್ತುಗಳ ಉಳುಮೆ ನಶಿಸುತ್ತ ಟ್ರ್ಯಾಕ್ಟರ್, ಟಿಲ್ಲರ್‌ಗಳಂತಹ ಯಂತ್ರಗಳು ಬಂದು ಜೋಡೆತ್ತುಗಳ ಉಳುಮೆ ಇಲ್ಲವಾಗಿದೆ. ಇರುವಷ್ಟು ರಾಸುಗಳಿಂದ ಹೊನ್ನಾರು ಆಚರಣೆ ಮಾಡಿದರೆ ಸಕಾಲಕ್ಕೆ ಮಳೆ ಜೊತೆಗೆ ಯುವ ರೈತರು ಉಳುಮೆ ಮಾಡಲು ಗೋವುಗಳ ಪರಿಚಯ ಮಾಡಿಕೊಟ್ಟಂತೆ ಆಗಲಿದೆ ಎಂದರು.

ನಶಿಸುತ್ತಿರುವ ರೈತಾಪಿ ಸಮುದಾಯದ ಸಂಭ್ರಮದ ಹಬ್ಬದಲ್ಲಿ ಒಂದಾದ ಹೊನ್ನಾರು ಹಬ್ಬಇದಾಗಿದೆ. ಭೂದೇವಿ ರೈತರ ಬೇಸಾಯಕ್ಕೆ ಕೈಬಿಡದೆ ರಕ್ಷಿಸಲು ಪ್ರಾರ್ಥಿಸುವ ಹಬ್ಬವಾಗಿದೆ. ಈ ಹಬ್ಬಆಚರಣೆ ತಪ್ಪದೆ ಮಾಡುವುದು ತಮ್ಮಕರ್ತವ್ಯವಾಗಿದೆ ಎಂದು ಸಾಮೂಹಿಕವಾಗಿ ದೇವರಲ್ಲಿ ಪ್ರಾರ್ಥಿಸಿಕೊಂಡರು.

ಈ ವೇಳೆ ಮುಖಂಡರಾದ ಶಿವರಾಮೇಗೌಡ, ಕಾಯಿ ಮಂಜೇಗೌಡ, ಉಮೇಶ್, ನಾಗೇಗೌಡ, ಶಿವೇಗೌಡ, ತಮಟೆ ವಾದಕ ಚಾಮುಂಡಿ, ನಾಗರಾಜು ಇದ್ದರು.