ಹೊನ್ನಾವರ: ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ : 150 ಹಾಸಿಗೆಯಿಂದ ಆರಂಭ

| Published : May 10 2024, 11:47 PM IST / Updated: May 11 2024, 01:02 PM IST

hospital
ಹೊನ್ನಾವರ: ಸೂಪರ್‌ ಸ್ಪೆಷಾಲಿಟಿ ಆಸ್ಪತ್ರೆ : 150 ಹಾಸಿಗೆಯಿಂದ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

ಜಿಲ್ಲೆಯ ಬಹುವರ್ಷದ ಬೇಡಿಕೆಯಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶುಕ್ರವಾರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಶಂಕುಸ್ಥಾಪನೆ ನೆರವೇರಿಸಿದರು.

ಹೊನ್ನಾವರ: ತಾಲೂಕಿನ ಅಳ್ಳಂಕಿಯಲ್ಲಿ ಶ್ರೀ ವಿಶ್ವವೀರಾಂಜನೇಯ ಮಹಾಸಂಸ್ಥಾನ ಹಾಗೂ ಸುಧೀಕ್ಷಾ ಹೇಲ್ತ್ ಕೇರ್ ಪ್ರೈವೇಟ್ ಲಿ. ಬೆಂಗಳೂರು ಇವರ ಸಹಭಾಗಿತ್ವದಲ್ಲಿ ನಿರ್ಮಾಣವಾಗಲಿರುವ ಜಿಲ್ಲೆಯ ಬಹುವರ್ಷದ ಬೇಡಿಕೆಯಾಗಿದ್ದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಶುಕ್ರವಾರ ಬಂಗಾರಮಕ್ಕಿಯ ಧರ್ಮಾಧಿಕಾರಿ ಮಾರುತಿ ಗುರೂಜಿ ಶಂಕುಸ್ಥಾಪನೆ ನೆರವೇರಿಸಿದರು.

ನಂತರ ಶ್ರೀಕ್ಷೇತ್ರ ಬಂಗಾರಮಕ್ಕಿಯ ಶ್ರೀ ವಿರಾಂಜನೇಯ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮಕ್ಕೆ ಚಾಲನೆ‌ ನೀಡಿ, ಉತ್ತರಕನ್ನಡ ಜಿಲ್ಲೆ ಉತ್ತರ ಕಾಣದ ಜಿಲ್ಲೆಯಾಗಿತ್ತು. ಮುಂದೆ ಉತ್ತರ ಕಾಣುವ ಜಿಲ್ಲೆಯಾಗಿ ಹೊರಹೊಮ್ಮಲಿದೆ. ಜಿಲ್ಲೆಯ ಜನಸ್ಪಂದಿಸುವ ವಿಶ್ವಾಸವಿದೆ. ಸ್ಪಂದನೆ ಸಿಕ್ಕಿಲ್ಲವಾದರೆ ಮನೆಮನೆಗೆ ಜೋಳಿಗೆ ಹಿಡಿದು ಬರಬೇಕಾಗುತ್ತದೆ. ಆಡಿದಂತಯೇ ಮಾಡಿಯೇ ಸಿದ್ಧ. ಸದ್ಯ ಇಲ್ಲಿ 150 ಹಾಸಿಗೆ ಆಸ್ಪತ್ರೆ ಮಾಡಿ ಕ್ರಮೇಣ ಹಂತ- ಹಂತವಾಗಿ ಜಾಸ್ತಿ ಹಾಸಿಗೆಯ ಆಸ್ಪತ್ರೆ ವ್ಯವಸ್ಥೆ ಮಾಡಲಾಗುವುದು ಎಂದರು. ನಾವು ಮಾಡುವ ಕಾರ್ಯವೇ ಉತ್ತರವಾಗಬೇಕೆ ವಿನಾ ಆಡುವವರ ಬಾಯಿಗೆ ಉತ್ತರವಾಗಬಾರದು. ಸಾಧನೆ ಎನ್ನುವುದು ನಮ್ಮ ನಂತರವು ಬದುಕಬೇಕು. ಆದ್ದರಿಂದ ಆಸ್ಪತ್ರೆ ನಿರ್ಮಾಣ ಎನ್ನುವುದು ಸಾಧನೆಯ ಸಾಲಿಗೆ ಸೇರುತ್ತದೆ ಎಂದರು.

ಮಂಗಳೂರು ಎಸ್.ಎಸ್. ಸಲ್ಯೂಷನ್‌ನ ಸನ್ನಿತ್ ಕೃಷ್ಣ ಶೇಟ್ ಮಾತನಾಡಿ, ಜಿಲ್ಲೆಯಲ್ಲಿ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಯಾರೂ ಮನಸ್ಸು ಮಾಡಿರಲಿಲ್ಲ. ಆದರೆ ಮಾರುತಿ ಗುರೂಜಿಯವರು ಮುಂದಾಗಿದ್ದಾರೆ. ಇದು ಅಭಿನಂದನಾರ್ಹ ಕಾರ್ಯ ಎಂದರು.

ಶಿವಮೊಗ್ಗದ ರಾಮಕೃಷ್ಣ ವಿವೇಕಾನಂದಾಶ್ರಮದ ವಿನಯಾನಂದ ಸ್ವಾಮೀಜಿಯವರು ಮಾತನಾಡಿ, 21ನೇ ಶತಮಾನದಲ್ಲಿ ಆರೋಗ್ಯಕ್ಕೆ ಸಂಬಂಧಿಸಿದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲಿ ಆಗದಿರುವುದು ಆಶ್ಚರ್ಯದ ಸಂಗತಿ. ಇಂದು ಶಂಕುಸ್ಥಾಪನಗೊಂಡ ಆಸ್ಪತ್ರೆ ಜಗತ್ತಿನ ದುಃಖ ನಿವಾರಣೆ ಮಾಡುವಂತಹುದು ಎಂದರು.

ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಅರವಿಂದ ಕರ್ಕಿಕೋಡಿ, ಪತ್ರಕರ್ತ ಬಿ. ಗಣಪತಿ, ಸಾಹಿತಿ ಮಹಾಬಲಮೂರ್ತಿ ಹೆಗಡೆ ಕೊಡ್ಲಕೆರೆ ಮಾತನಾಡಿ, ಇಂದು ಶಂಕುಸ್ಥಾಪನೆಯಾಗಿರುವ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯು ಮುಂದಿನ ಪೀಳಿಗೆಗೆ ದೊಡ್ಡ ನಿಧಿಯಾಗಿ ಉಳಿಯುತ್ತದೆ. ಆರೋಗ್ಯ ಸಂರಕ್ಷಣೆಗಾಗಿ ಸಂಕಲ್ಪ ಮಾಡಿರುವ ಮಾರುತಿ ಗುರೂಜಿಯವರ ಅನುಗ್ರಹದ ಜತೆಗೆ ಎಲ್ಲರ ಸಹಕಾರವೂ ಬೇಕು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಧೀಕ್ಷಾ ಗ್ರುಪ್ ಆಫ್ ಕಂಪನಿಸ್ ಮುಖ್ಯಸ್ಥ ಡಾ. ಸುಬ್ರಹ್ಮಣ್ಯ ಶರ್ಮ ಗೌರವರಂ ಮಾತನಾಡಿ, ₹120 ಕೋಟಿ ವೆಚ್ಚದಲ್ಲಿ ಸುವ್ಯವಸ್ಥೆಯ, ಉನ್ನತ ದರ್ಜೆಯ ಆಸ್ಪತ್ರೆಯನ್ನು ಈ ಜಿಲ್ಲೆಗೆ ಕೊಡುಗೆಯಾಗಿ ನೀಡಲಾಗುವುದು. ಈ ಆಸ್ಪತ್ರೆ ಈ ಭಾಗದ ಜನರ ಆರೋಗ್ಯ ಅಗತ್ಯಗಳಿಗೆ ಸ್ಪಂದಿಸಲಿದೆ. ಜರ್ಮನಿಯಲ್ಲಿ ತಯಾರಾದ ವೈದ್ಯಕೀಯ ಪರಿಕರಗಳನ್ನು, ಯಂತ್ರಗಳನ್ನು ಈ ಆಸ್ಪತ್ರೆಯಲ್ಲಿ ಬಳಸಲಾಗುವುದು. ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಲಿದೆ ಎಂದರು.

ಈಗಾಗಲೇ ಸಾವಿರಾರು ಪರಿಣಿತ ವೈದ್ಯರು ಇಲ್ಲಿ ಸೇವೆ ನೀಡಲು ತಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯವರೇ ಆಗಿದ್ದು ಹೊರಪ್ರಾಂತ್ಯದಲ್ಲಿದ್ದ ತಜ್ಞ ವೈದ್ಯರು ಈ ಜಿಲ್ಲೆಯಲ್ಲಿ ಸೇವೆ ಸಲ್ಲಿಸಲು ಉತ್ಸಾಹದಲ್ಲಿದ್ದಾರೆ ಎಂದರು.

ವೇದಿಕೆಯಲ್ಲಿ ಕಟ್ಟಡ ವಿನ್ಯಾಸಕರಾದರಾದ ಮಹೇಶ ದೋಹಿಪಡೆ‌, ಅಕ್ಷಯ ದೋಹಿಪಡೆ, ಅರ್ಪಿತಾ ಮಾರುತಿ ಗುರೂಜಿ ಮತ್ತಿತರರು ಉಪಸ್ಥಿತರಿದ್ದರು.