ಬೇರಂಕಿ ಗ್ರಾಮಸ್ಥರಿಂದ ಹೊನ್ನಾವರ ತಾಪಂ ಮುತ್ತಿಗೆ

| Published : Oct 04 2025, 12:00 AM IST

ಸಾರಾಂಶ

ಗ್ರಾಮ ಪಂಚಾಯಿತಿ ಕಟ್ಟಡ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ಹೊನ್ನಾವರ ತಾಲೂಕಿನ ಬೇರಂಕಿ ಗ್ರಾಮಸ್ಥರು ತಾಪಂ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ. ಬಳಿಕ ಗ್ರಾಮಸ್ಥರು ತಹಸೀಲ್ದಾರ್ ಕಚೇರಿಗೂ ಹೋಗಿ ಮನವಿ ಸಲ್ಲಿಸಿದರು.

ಹೊನ್ನಾವರ: ಗ್ರಾಮ ಪಂಚಾಯಿತಿ ಕಟ್ಟಡ ಸ್ಥಳಾಂತರ ವಿಚಾರಕ್ಕೆ ಸಂಬಂಧಿಸಿದಂತೆ ತಾಲೂಕಿನ ಬೇರಂಕಿ ಗ್ರಾಮಸ್ಥರು ತಾಪಂ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ಶುಕ್ರವಾರ ಮುಂಜಾನೆ ತಾಪಂ ಕಚೇರಿ ಎದುರು ಜಮಾಯಿಸಿದ ಬೇರಂಕಿಯ ಗ್ರಾಮಸ್ಥರು ತಹಸೀಲ್ದಾರ್ ಕಚೇರಿಗೂ ಹೋಗಿ ಮನವಿ ಸಲ್ಲಿಸಿದರು.

ಬೇರಂಕಿ ಗ್ರಾಪಂ ಕಟ್ಟಡ ಭೂಕುಸಿತ ವಲಯದಲ್ಲಿದೆ. ಈ ಕುರಿತು ಹಿರಿಯ ಭೂವಿಜ್ಞಾನಿಗಳು ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ವರದಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೇರಂಕಿ ಗ್ರಾಪಂ ಕಟ್ಟಡವನ್ನು ಸುರಕ್ಷಿತ ಹಾಗೂ ಗ್ರಾಪಂ ಸ್ವಾಮಿತ್ವದ ಕಟ್ಟಡಕ್ಕೆ ಸ್ಥಳಾಂತರಿಸುವಂತೆ 2025 ಜೂ. 6ರಂದು ತಹಸೀಲ್ದಾರ್‌, ಜೂ. 12ರಂದು ತಾಪಂ ಕಾರ್ಯನಿರ್ವಹಣಾಧಿಕಾರಿ ಪತ್ರ ಬರೆದು ಸೂಚಿಸಿದ್ದರು. ಅಂತೆಯೇ ಬೇರಂಕಿ ಗ್ರಾಪಂನ್ನು ಕೊಡಾಣಿಯ ಗ್ರಾಪಂಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು. ಆದರೆ ಈ ಹಿಂದೆ ಕಾರ್ಯನಿರ್ವಾಹಕ ಅಧಿಕಾರಿಗಳು ನಡೆಸಿದ ಗ್ರಾಪಂ ಸಭೆಯಲ್ಲಿ ಸೆ. ೩೦ರ ನಂತರ ಪುನಃ ಹಳೆಯ ಕಟ್ಟಡಕ್ಕೆ ಪಂಚಾಯಿತಿ ಸ್ಥಳಾಂತರಿಸುವುದು ಎಂಬ ಆದೇಶ ತೆಗೆದುಕೊಳ್ಳಲಾಗಿತ್ತು. ಆದರೆ ಸೆಪ್ಟೆಂಬರ್ ತಿಂಗಳು ಮುಗಿದು ಅಕ್ಟೋಬರ್ ಪ್ರಾರಂಭವಾದರೂ ಬೇರಂಕಿಯ ಪಂಚಾಯಿತಿ ಮೂಲ ಕಟ್ಟಡಕ್ಕೆ ಸ್ಥಳಾಂತರವಾಗಿಲ್ಲ. ಗಣಿ ಮತ್ತು ಭೂವಿಜ್ಞಾನ ಇಲಾಖೆ ಸ್ಥಳ ತಪಾಸಣೆಯನ್ನೂ ನಡೆಸಿಲ್ಲ. ಕಟ್ಟಡ ಯೋಗ್ಯವಾಗಿಲ್ಲ ಎಂದು ತೀರ್ಮಾನವನ್ನು ಅಧಿಕೃತವಾಗಿ ನೀಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಕಟ್ಟಡ ಕುಸಿಯುತ್ತದೆ ಎಂಬ ವರದಿಯನ್ನು ಲಿಖಿತವಾಗಿಯಾದರೂ ನೀಡಲಿ, ಅಲ್ಲಿಯವರೆಗೆ ಮತ್ತೆ ಬೇರಂಕಿಯ ಮೂಲ ಕಟ್ಟಡಕ್ಕೆ ಗ್ರಾಪಂ ಸ್ಥಳಾಂತರ ಆಗಲಿ ಎಂದು ಒಕ್ಕೊರಲ ಧ್ವನಿಯಲ್ಲಿ ಗ್ರಾಮಸ್ಥರು ಹೇಳಿದರು.

ಅಧಿಕಾರಿಗಳೊಂದಿಗೆ ವಾಗ್ವಾದ: ತಾಪಂ ಕಚೇರಿಯಲ್ಲಿ ಅಧಿಕಾರಿಗಳು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಜನರು ಆಕ್ರೋಶ ವ್ಯಕ್ತಪಡಿಸಿದರು. ಆಡಳಿತಾಧಿಕಾರಿಗಳು ಬರಬೇಕು ಎಂದು ಜನರು ಪಟ್ಟು ಹಿಡಿದರು. ತಾಲೂಕು ಆಡಳಿತಾಧಿಕಾರಿ ಎನ್.ಆರ್. ಹೆಗಡೆ ಬಂದ ಬಳಿಕ ಅವರ ಮುಂದೆ ಸಮಸ್ಯೆ ಕುರಿತು ಚರ್ಚಿಸಿದರು.

ಈ ಪ್ರತಿಭಟನೆಯನ್ನು ಇಷ್ಟಕ್ಕೆ ನಿಲ್ಲಿಸುವುದಿಲ್ಲ. ನಮ್ಮ ಬೇಡಿಕೆ ಈಡೇರಿಸದಿದ್ದಲ್ಲಿ ನಾವು ಕೊಡಾಣಿಯ ಸಭಾಭವನದಲ್ಲಿರುವ ಗ್ರಾಪಂ ಕಚೇರಿಗೆ ಬೀಗ ಜಡಿಯುತ್ತೇವೆ. ಅಲ್ಲಿಯೂ ಪ್ರತಿಭಟನೆ ಮಾಡುತ್ತೇವೆ ಎಂಬ ಎಚ್ಚರಿಕೆ ನೀಡಿದರು.

ಸ್ಥಳ ಪರಿಶೀಲನೆ ಮಾಡಿ ವರದಿ ನೀಡುವಂತೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ತಾಪಂ ಆಡಳಿತಾಧಿಕಾರಿ ಎನ್.ಆರ್‌.ಹೆಗಡೆ ಪತ್ರ ಬರೆದು ಕಳುಹಿಸಿದರು. ಬಳಿಕ ತಾಪಂ ಕಚೇರಿ ಎದುರಿನ ಪ್ರತಿಭಟನೆಯನ್ನು ಗ್ರಾಮಸ್ಥರು ನಿಲ್ಲಿಸಿದರು.

ನಮ್ಮ ಪಂಚಾಯಿತಿಯನ್ನು ಸೆ. ೩೦ರ ವರೆಗೆ ಮಾತ್ರ ಕೊಡಾಣಿಯ ಸಭಾಭವನದಲ್ಲಿ ಇರಿಸುತ್ತೇವೆ. ಆನಂತರ ಮತ್ತೆ ಮೂಲ ಸ್ಥಳಕ್ಕೆ ಸ್ಥಳಾಂತರಿಸುತ್ತೇವೆ ಎಂದು ಕಾರ್ಯನಿರ್ವಾಹಧಿಕಾರಿಗಳು ಲಿಖಿತವಾಗಿ ತಿಳಿಸಿದ್ದರು. ಆದರೆ ಆ ಆದೇಶವನ್ನು ಪಾಲಿಸಲು ಅವರು ವಿಫಲರಾಗಿದ್ದಾರೆ. ಅಲ್ಲದೆ ನಾವು ಮನವಿ ಕೊಡಲು ಬಂದರೆ ಅವರು ಉದ್ದೇಶ ಪೂರ್ವಕವಾಗಿ ರಜೆ ಹಾಕಿದ್ದಾರೆ. ಹೀಗಾಗಿ ನಾವು ಪ್ರತಿಭಟನೆಗೆ ಮುಂದಾದೆವು ಎಂದು ಗ್ರಾಪಂ ಸದಸ್ಯ ಜಯಂತ್ ನಾಯ್ಕ ಹೇಳಿದರು.

ಬೇರಂಕಿ ಗ್ರಾಪಂ ಸದಸ್ಯ ಜಯಂತ್ ನಾಯ್ಕ, ಶೋಭಾ ಜಟ್ಟಿ ನಾಯ್ಕ ನೇತೃತ್ವದಲ್ಲಿ ನೂರಕ್ಕೂ ಹೆಚ್ಚಿನ ಜನರು ಭಾಗವಹಿಸಿದ್ದರು.