ಸಾರಾಂಶ
ಅಭಿವೃದ್ಧಿ ಪರಿಶೀಲನೆ । ಕಾಮಗಾರಿ ವೀಕ್ಷಣೆ
ಕನ್ನಡಪ್ರಭ ವಾರ್ತೆ ಅರಸೀಕೆರೆಗಂಡಸಿ ಹೋಬಳಿ ಜಿ.ಹೊನ್ನೇನಹಳ್ಳಿ ಗೌಡನ ಕಟ್ಟೆ ಅಭಿವೃದ್ಧಿ ಕಾರ್ಯವನ್ನು ಧರ್ಮಸ್ಥಳ ಶ್ರೀ ಕ್ಷೇತ್ರ ಗ್ರಾಮ ಅಭಿವೃದ್ಧಿ ಯೋಜನೆಯ ‘ನಮ್ಮೂರು ನಮ್ಮ ಕೆರೆ’ ಯೋಜನೆಯಡಿ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. ಸದ್ಯದಲ್ಲಿಯೇ ಹಸ್ತಾಂತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಾಲೂಕು ಯೋಜನಾಧಿಕಾರಿ ಅಕ್ಷತಾ ರೈ ಹೇಳಿದರು
ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಅವರು ಗ್ರಾಮಸ್ಥರು ಹಾಗೂ ಕೆರೆ ಅಭಿವೃದ್ಧಿ ಸಮಿತಿ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ನೌಕರರನ್ನು ಒಳಗೊಂಡಂತೆ ಕಾಮಗಾರಿಯನ್ನು ವೀಕ್ಷಿಸಿ, ನಿರೀಕ್ಷೆಯಂತೆ ಕೆಲಸವಾಗಿದೆ, ಗ್ರಾಮಸ್ಥರ ಸಹಕಾರವಿದೆ. ಕೆರೆ ಹಸ್ತಾಂತರ ಕಾರ್ಯಕ್ರಮವನ್ನು ಹಿರಿಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ ದಿನಾಂಕವನ್ನು ನಿಗದಿ ಮಾಡಲಾಗುವುದು ಎಂದು ಹೇಳಿದರು.ಜಲ ಸಂರಕ್ಷಣೆ ಮತ್ತು ಅಂತರ್ಜಲ ಅಭಿವೃದ್ಧಿ ಮೂಲ ಉದ್ದೇಶದಲ್ಲಿ ಶ್ರೀ ಕ್ಷೇತ್ರ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮತ್ತು ಅವರ ಪತ್ನಿ ಆಶಯದಂತೆ ರಾಜ್ಯದ ಎಲ್ಲೆಡೆ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದೆ. ಕೆರೆಯ ಹೂಳನ್ನು ತೆಗೆದಿದ್ದು ಹೆಚ್ಚು ನೀರು ಸಂಗ್ರಹವಾಗುತ್ತದೆ. ಕಟ್ಟೆಯ ಬದಿಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಸಹ ಅಂದು ಹಮ್ಮಿಕೊಳ್ಳಲಾಗುವುದು. ಪರಿಸರ ಸಂರಕ್ಷಣೆಗೆ ಹೆಚ್ಚಿನ ಒತ್ತನ್ನು ಸಹ ನೀಡಲಾಗುತ್ತಿದ್ದು ಎಲ್ಲೆಡೆ ಗಿಡ ನೆಡುವ ಕಾರ್ಯಕ್ರಮವನ್ನು ಮಾಡಲಾಗುತ್ತಿದೆ. ಸಂಘಗಳ ಸದಸ್ಯರ ಸಹಕಾರ ಎಲ್ಲ ಯೋಜನೆಗಳನ್ನು ಯಶಸ್ಸಿನತ್ತ ಕೊಂಡೊಯ್ಯುತ್ತಿದೆ. ಇದೇ ಗ್ರಾಮದ ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೂ ಸಹ ಸಂಸ್ಥೆ ಕಡೆಯಿಂದ ಆರ್ಥಿಕ ನೆರವನ್ನು ನೀಡಲಾಗಿದೆ. ತಾಲೂಕಿನ ಅನೇಕ ದೇವಾಲಯಗಳ ಜೀರ್ಣೋದ್ಧಾರ ಆಗಿದ್ದು ನಿರಾಶ್ರಿತರಿಗೆ ಮನೆ ಒದಗಿಸುವ ಕಾರ್ಯವನ್ನು ಕೈಗೆತ್ತಿಕೊಂಡಿದ್ದೇವೆ ಎಂದು ಮಾಹಿತಿ ನೀಡಿದರು.
ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಶಿಕ್ಷಕರ ಕೊರತೆ ನೀಗಲು ಶಿಕ್ಷಕರನ್ನು ಸಂಸ್ಥೆಯಿಂದ ಒದಗಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದ ಅವರು ಕೆರೆ ಅಭಿವೃದ್ಧಿಯನ್ನು ಮಾಡಿಕೊಟ್ಟಿದ್ದೇವೆ, ಮುಂದೆ ಇದರ ನಿರ್ವಹಣೆಯನ್ನು ಗ್ರಾಮಸ್ಥರು, ಸುತ್ತಲ ಜನ ಮಾಡಬೇಕು ಕೆರೆಯ ನೀರನ್ನು ಶುಚಿಯಾಗಿ ಕಾಪಾಡಿಕೊಳ್ಳುವ ನಿಟ್ಟಿನಲ್ಲಿಯೂ ಗಮನ ಹರಿಸಬೇಕೆಂದು ಮನವಿ ಮಾಡಿದರು.ಕೆರೆ ಅಭಿವೃದ್ಧಿ ಸಮಿತಿಯ ಸದಸ್ಯ ನಾಗರಾಜ್ ಮಾತನಾಡಿ, ಈ ಕಟ್ಟೆಯ ಅಭಿವೃದ್ಧಿಯಿಂದ ಜನ, ಜಾನುವಾರಿಗೆ ಬಹಳ ಅನುಕೂಲ ಆಗಲಿದೆ. ಅಂತರ್ಜಲ ಹೆಚ್ಚುವ ಮೂಲಕ ಸುತ್ತಲ ಕೃಷಿ ಭೂಮಿಗೆ ಸಹಕಾರಿಯಾಗಲಿದ್ದು ಕೆರೆ ತುಂಬಿದರೆ ವರ್ಷವಿಡೀ ನೀರು ನಿಲ್ಲುತ್ತದೆ. ಕೆರೆಯೊಳಗಿನ ಹೆಚ್ಚು ಹೂಳನ್ನು ತೆಗೆಯಲಾಗಿದ್ದು ಹೆಚ್ಚು ನೀರು ಸಂಗ್ರಹವಾಗುತ್ತದೆ. ಉತ್ತಮ ಕಾಮಗಾರಿಯನ್ನು ಶ್ರೀ ಕ್ಷೇತ್ರದ ವತಿಯಿಂದ ಮಾಡಿಕೊಟ್ಟಿದ್ದಾರೆ. ನಮ್ಮೂರ ದೇವಾಲಯಕ್ಕೂ ಸಹ ಆರ್ಥಿಕ ನೆರವನ್ನು ನೀಡಿದ್ದಾರೆ. ಧರ್ಮಸ್ಥಳ ಕ್ಷೇತ್ರದ ವತಿಯಿಂದ ಅನೇಕ ಜನಪರ ಕಾರ್ಯಗಳು ಆಗುತ್ತಿದೆ. ಕಟ್ಟೆ ಸಮರ್ಪಣಾ ದಿನದಂದು ಈ ಕಟ್ಟೆಯ ಸುತ್ತ ಗಿಡ ನೆಡುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳುವುದಾಗಿ ಹೇಳಿದರು.
ಕಟ್ಟೆ ಅಭಿವೃದ್ಧಿ ಸಮಿತಿ ಅಧ್ಯಕ್ಷ, ನಿವೃತ್ತ ಶಿಕ್ಷಕ ನಾಗರಾಜ್, ಗ್ರಾಪಂ ಬಿಲ್ ಕಲೆಕ್ಟರ್ ಲಕ್ಷ್ಮಣ್, ನಿವೃತ್ತ ಶಿಕ್ಷಕ ಚಂದ್ರಶೇಖರ್, ಸೇವಾ ಪ್ರತಿನಿಧಿ ಚೈತ್ರ, ಮೇಲ್ವಿಚಾರಕ ಸೀತಾರಾಮ್, ಜನಜಾಗೃತಿ ಸಮಿತಿ ಸದಸ್ಯ ಎಚ್.ಡಿ.ಸೀತಾರಾಮ್ ಇದ್ದರು.