ದಿ.ಜಿ.ಮಾದೇಗೌಡರಿಗೆ ಕರ್ನಾಟಕ ರತ್ನ ನೀಡಿ ಗೌರವಿಸಿ: ಶಾಸಕ ಪ್ರದೀಪ್ ಈಶ್ವರ್

| Published : Sep 19 2025, 01:00 AM IST

ದಿ.ಜಿ.ಮಾದೇಗೌಡರಿಗೆ ಕರ್ನಾಟಕ ರತ್ನ ನೀಡಿ ಗೌರವಿಸಿ: ಶಾಸಕ ಪ್ರದೀಪ್ ಈಶ್ವರ್
Share this Article
  • FB
  • TW
  • Linkdin
  • Email

ಸಾರಾಂಶ

ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಮನರಂಜನಾ ಕಾರ್ಯಕ್ರಮ ರಂಜಿಸಿದವು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಭಾರತೀನಗರ ಮುಖ್ಯರಸ್ತೆಯಲ್ಲಿ ಜಾನಪದ ಕಲಾ ಮೆರವಣಿಗೆ ನಡೆಯಿತು.

ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ

ಕಾವೇರಿ ಹಿತರಕ್ಷಣಾ ಸಮಿತಿ ಅಧ್ಯಕ್ಷರಾಗಿ ನಾಡು, ನುಡಿ, ನೆಲ, ಜಲದ ರಕ್ಷಣೆಗಾಗಿ ಹೋರಾಟ ನಡೆಸುವ ಜೊತೆಗೆ ಗ್ರಾಮೀಣ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ ಭವಿಷ್ಯವನ್ನು ಉತ್ತಮಗೊಳಿಸಿದ ಮಾಜಿ ಸಂಸದ ದಿ.ಜಿ.ಮಾದೇಗೌಡರಿಗೆ ರಾಜ್ಯ ಸರ್ಕಾರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದು ಪರಿಶ್ರಮ ನೀಟ್ ಅಕಾಡೆಮಿ ಸಂಸ್ಥಾಪಕ ಹಾಗೂ ಶಾಸಕ ಪ್ರದೀಪ್ ಈಶ್ವರ್ ಒತ್ತಾಯಿಸಿದರು.

ಭಾರತೀ ವಿದ್ಯಾಸಂಸ್ಥೆ ವತಿಯಿಂದ ಕಾಲೇಜು ಕ್ರೀಡಾಂಗಣದಲ್ಲಿ ನಡೆದ ಭಾರತೀ ಉತ್ಸವದಲ್ಲಿ ಭಾಗವಹಿಸಿ ಮಾತನಾಡಿದ ಅವರು, ದಿ.ಜಿ.ಮಾದೇಗೌಡರು ತಮ್ಮ ಉಸಿರು ಇರುವ ತನಕವೂ ಹೋರಾಟದ ಮುಂಚೂಣಿ ನಾಯಕರಾಗಿ ಮಂಡ್ಯ ಜಿಲ್ಲೆಯ ಕಾವೇರಿ ಹೋರಾಟದ ಚೈತನ್ಯ ಶಕ್ತಿ ಆಗಿದ್ದರು ಎಂದರು.

ಜಿ.ಮಾದೇಗೌಡರು ಗ್ರಾಮೀಣ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಭಾರತೀ ಶಿಕ್ಷಣ ಸಂಸ್ಥೆ ಆರಂಭಿಸಿದ ಫಲದಿಂದ ಇಂದು ದೇಶದ ವಿವಿಧೆಡೆಯಿಂದ ಶಿಕ್ಷಣ ಪಡೆಯಲು ಭಾರತೀನಗರಕ್ಕೆ ಬರುವ ರೀತಿಯಲ್ಲಿ ಅಡಿಪಾಯ ಹಾಕಿಕೊಟ್ಟಿದ್ದಾರೆ. ಲಕ್ಷಾಂತರ ವಿದ್ಯಾರ್ಥಿಗಳಿಗೆ ಬೆಳಕು ನೀಡಿದ ನಾಯಕನಿಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿ ನೀಡುವಂತೆ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಹೇಳಿದರು.

ತಮ್ಮ ಮಕ್ಕಳ ಭವಿಷ್ಯವನ್ನು ಉತ್ತಮಗೊಳಿಸಲು ತಂದೆ- ತಾಯಿಗಳು ಕಷ್ಟಪಟ್ಟು ಶಾಲಾ ಕಾಲೇಜಿಗೆ ಕಳುಹಿಸುತ್ತಾರೆ. ಆದ್ದರಿಂದ ವಿದ್ಯಾರ್ಥಿಗಳು ಗುರಿ ಮುಟ್ಟುವ ತನಕ ಕಷ್ಟಪಟ್ಟು ಓದಿ ಉನ್ನತ ಹುದ್ದೆ ಅಲಂಕರಿಸಬೇಕು. ನಿಮಗಾಗಿ ತ್ಯಾಗ ಮಾಡಿದ ತಂದೆ- ತಾಯಿಗಳಿಗೆ ದೇವಸ್ಥಾನ ಕಟ್ಟಿಸದಿದ್ದರೂ ಪರವಾಗಿಲ್ಲ. ಆದರೆ ದೇವಸ್ಥಾನದ ಮುಂದೆ ಕೂರಿಸದೇ ಋಣ ತೀರಿಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಗಾಮೀಣ ವಿದ್ಯಾರ್ಥಿಗಳು ಇಂಗ್ಲಿಷ್ ಬರುವುದಿಲ್ಲ ಎಂದು ಚಿಂತಿಸಬೇಡಿ. ಇಂಗ್ಲಿಷ್ ಇರೋದೇ ತಪ್ಪು ಮಾತನಾಡುವುದಕ್ಕೆ. ಕನ್ನಡ ಇರುವುದೇ ಸತ್ಯ ಮಾತನಾಡುವುದಕ್ಕೆ. ಕೀಳರಿಮೆ ಬಿಟ್ಟು ಓದಿನ ಕಡೆಗೆ ಮುಖ ಮಾಡಬೇಕು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಆಭದ್ರತೆ ಕಾಣುತ್ತಿದೆ. ಡಿಗ್ರಿ ಪದವಿ ಪಡೆದರೂ ಭಯ, ಆತಂಕ ಎದುರಾಗಿದೆ. ತಮ್ಮಲ್ಲಿ ವಿಶೇಷ ಪ್ರತಿಭೆ ಇದ್ದರೆ ಎಲ್ಲಿ ಬೇಕಾದರೂ ಉದ್ಯೋಗ ಪಡೆಯಬಹದು. ನಿಮಗೆ ನೀವೆ ಶಕ್ತಿ ಎಂದು ತಿಳಿಯಬೇಕು ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಮಾತನಾಡಿ, ಗ್ರಾಮೀಣ ಮಕ್ಕಳ ಅನುಕೂಲಕ್ಕಾಗಿ ಭಾರತೀ ಎಜುಕೇಷನ್ ಟ್ರಸ್ಟ್ ಕ್ಯಾಂಪಸ್‌ನಲ್ಲಿಯೇ ಎಲ್ಲಾ ರೀತಿಯ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ನಮ್ಮ ತಂದೆ ಹಾದಿಯಲ್ಲೇ ಸಾಮಾಜಿಕ ಕಳಕಳಿಯನ್ನು ಹೊಂದಿ ಸಂಸ್ಥೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ. ಪಕ್ಷಾತೀತವಾಗಿ ಬಡವರ ಸೇವೆಗಾಗಿ ಶ್ರಮಿಸುತ್ತೇನೆ ಎಂದರು.

ಶಾಸಕ ಪ್ರದೀಪ್ ಈಶ್ವರ್ ಸಾವಿರಾರು ವಿದ್ಯಾರ್ಥಿಗಳಿಗೆ ದಾರಿದೀಪವಾಗಿದ್ದಾರೆ. ಶಿಕ್ಷಣ ಸಂಸ್ಥೆಯಲ್ಲಿ ಸಲ್ಲಿಸುತ್ತಿರುವ ಸೇವೆಯನ್ನು ಗುರುತಿಸಿ ಮುಖ್ಯಮಂತ್ರಿಗಳು ಸಚಿವ ಸ್ಥಾನ ನೀಡಿದರೆ ಮತ್ತಷ್ಟು ಸಾವಿರಾರು ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಶಾಸಕರಾದ ಪಿ.ರವಿಕುಮಾರ್, ಪ್ರದೀಶ್ ಈಶ್ವರ್, ಚಿತ್ರನಟಿ ರಾಗಿಣಿ ದ್ವಿವೇದಿ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಪುರುಷೋತ್ತಮ ಬಿಳಿಮಲೆ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ವೇದಿಕೆಯಲ್ಲಿ ಭಾರತೀ ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಬಿ.ಎಂ.ನಂಜೇಗೌಡ, ಸಿದ್ದೇಗೌಡ, ಬಿಇಟಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಆಶಯ್ ಜಿ.ಮಧು. ಕೆ.ಬಿ.ಮಹದೇವಪ್ಪ, ಎಸ್.ಬಸವೇಗೌಡ, ಎಸ್.ಜಯರಾಮು, ಮುದ್ದಯ್ಯ, ಭಾರತೀ ಕಾಲೇಜಿನ ಪ್ರಾಂಶುಪಾಲ ಡಾ.ಎಂ.ಎಸ್.ಮಹದೇವಸ್ವಾಮಿ, ಎಸ್. ನಾಗರಾಜು, ಎಸ್. ರೇವಣ್ಣ. ಹಾಜರಿದ್ದರು.

ವಿದ್ಯಾರ್ಥಿಗಳ ಸಾಂಸ್ಕೃತಿಕ ಸ್ಪರ್ಧೆ ಹಾಗೂ ಮನರಂಜನಾ ಕಾರ್ಯಕ್ರಮ ರಂಜಿಸಿದವು. ವೇದಿಕೆ ಕಾರ್ಯಕ್ರಮಕ್ಕೂ ಮುನ್ನಾ ಭಾರತೀನಗರ ಮುಖ್ಯರಸ್ತೆಯಲ್ಲಿ ಜಾನಪದ ಕಲಾ ಮೆರವಣಿಗೆ ನಡೆಯಿತು.

‘ಆಧುನಿಕ ಶಿಕ್ಷಣ ವ್ಯವಸ್ಥೆಯಲ್ಲಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅವಕಾಶಗಳು ಸಿಗುತ್ತಿವೆ. ತಮ್ಮ ಆಸಕ್ತಿಗೆ ಅನುಸಾರವಾಗಿ ಶಿಕ್ಷಣ ಪಡೆಯುವಂತಾಗಬೇಕು. ಮಕ್ಕಳು ಕಾಲೇಜಿನ ಜೀವನವನ್ನು ಪರಿಣಾಮಕಾರಿಯಾಗಿ ಪ್ರಯೋಜನ ಪಡೆದುಕೊಳ್ಳಬೇಕು. ಶಿಕ್ಷಣ ವ್ಯವಸ್ಥೆಯಲ್ಲಿ ಯಾವ ವಿಷಯವನ್ನಾದರೂ ಓದುವ ಅವಕಾಶವಿದೆ. ಸಂಕುಚಿತ ಮನೋಭಾವ ಬಿಟ್ಟು ಸಾಧನೆಯತ್ತ ಮುನ್ನಡೆಯಬೇಕು.’

ರಾಗಿಣಿ ದ್ವಿವೇದಿ, ಚಲನಚಿತ್ರ ನಟಿ