ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಮರ್ಯಾದೆ ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು.
ಕರ್ತವ್ಯ ಲೋಪವೆಸಗಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಕನ್ನಡಪ್ರಭ ವಾರ್ತೆ ಮುಂಡಗೋಡ
ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಮರ್ಯಾದೆ ಹತ್ಯೆ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು. ದೌರ್ಜನ್ಯಕ್ಕೊಳ್ಳಗಾದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪವೆಸಗಿದ ಎಲ್ಲಾ ಸರ್ಕಾರಿ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಧ್ವನಿ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮುಂಡಗೋಡ ತಹಸೀಲ್ದಾರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಯಿತು.ಏಳು ತಿಂಗಳ ಗರ್ಭಿಣಿಯಾಗಿದ್ದ ಮಾನ್ಯಳನ್ನು ಹತ್ಯೆ ಮಾಡಿರುವುದು ಅತ್ಯಂತ ಕ್ರೌರ್ಯ ಹಾಗೂ ಅಮಾನವೀಯವಾಗಿದೆ. ಜಾತಿ ಹೆಸರಿನ ಮೇಲೆ ಮರ್ಯಾದೆ ಹತ್ಯೆ ಮಾಡಿರುವುದು ಮಾನವೀಯತೆಯ ಮೇಲೆ ನಡೆದ ನೇರ ದಾಳಿಯಾಗಿದ್ದು, ಇಡೀ ನಾಗರಿಕ ಸಮಾಜ ತೆಲೆ ತಗ್ಗಿಸುವಂತೆ ಮಾಡಿದೆ. ನೊಂದ ಕುಟುಂಬದ ಜನರೆಲ್ಲರೂ ಆ ಗ್ರಾಮವನ್ನು ತೊರೆಯಲು ಸಿದ್ದರಾಗಿದ್ದಾರೆ. ಆದ್ದರಿಂದ ಸರ್ಕಾರ ದೌರ್ಜನ್ಯಕ್ಕೊಳಗಾದ ಆ ಕುಟುಂಬಕ್ಕೆ ₹೫ ಕೋಟಿ ಪರಿಹಾರ ಘೋಷಿಸಬೇಕು. ಜಾತಿ ಹೆಸರಿನ ಮೇಲೆ ದೌರ್ಜನ್ಯಕ್ಕೊಳಗಾದ ವಿವೇಕಾನಂದ ದೊಡ್ಮನಿಗೆ ಸರ್ಕಾರಿ ನೌಕರಿ ಒದಗಿಸಬೇಕು ಎಂದು ಒತ್ತಾಯಿಸಿದರು.
ಘಟನೆ ನಡೆದ ದಿನ ಹಾಗೂ ಮರು ದಿನ ನಡೆದ ಅಂತ್ಯಕ್ರಿಯೆಯಲ್ಲಿಯೂ ಹಲವು ಸರಕಾರಿ ಅಧಿಕಾರಿಗಳು ಪಾಲ್ಗೊಳ್ಳದೆ ಬೇಜವಾಬ್ದಾರಿತನ ತೋರಿಸಿದ್ದಲ್ಲದೆ ಕರ್ತವ್ಯ ಲೋಪವೆಸಗಿದ್ದಾರೆ. ಕೆಲವು ಹಿರಿಯ ಅಧಿಕಾರಿಗಳು ಘಟನೆ ನಡೆದು ಮೂರನೇ ದಿನಕ್ಕೆ ಗ್ರಾಮಕ್ಕೆ ಭೇಟಿ ನೀಡಿದ್ದಾರೆ. ಈ ಹಿರಿಯ ಅಧಿಕಾರಿಗಳು ಬೇಜವಾಬ್ದಾರಿ ಧೋರಣೆ ಮತ್ತು ವಿಳಂಬ ನೀತಿ, ನಿರ್ಲಕ್ಷ್ಯ ಆರೋಪಿಗಳ ಪರ ಧೈರ್ಯ ನೀಡಿದಂತಾಗಿದೆ. ಈ ಬಗ್ಗೆ ತನಿಖೆ ನಡೆಸಿ ಈ ಎಲ್ಲಾ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಿ ಅವರನ್ನು ಸೇವೆಯಿಂದ ವಜಾ ಮಾಡಬೇಕು.ತ್ವರಿತವಾಗಿ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆ ನಡೆಸಿ ವಿಶೇಷ ಸರಕಾರಿ ಅಭಿಯೋಜಕರನ್ನು ನೇಮಿಸಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಆರೋಪಿಗಳ ಪರೋಕ್ಷವಾಗಿ ಭಾಗಿಯಾದವರನ್ನು ಗುರುತಿಸಿ ಪ್ರಕರಣದಲ್ಲಿ ಸೇರಿಸಬೇಕು.
ಈ ಘಟನೆಯಿಂದ ಇಡೀ ರಾಜ್ಯದಲ್ಲಿ ದಲಿತ ಸಮುದಾಯಕ್ಕೆ ಭಯದ ವಾತಾವರಣ ಉಂಟಾಗಿದೆ. ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ, ರಾಜ್ಯ ಪೊಲೀಸ್ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ಸಂಪೂರ್ಣ ಜವಾಬ್ದಾರಿ ಹೊತ್ತು ಕಾನೂನು ಭಯ ಇಲ್ಲದ ಸವರ್ಣೀಯರಿಗೆ ಕಡಿವಾಣ ಹಾಕಿ ಇಡೀ ರಾಜ್ಯದ ದಲಿತ ಜನರಿಗೆ ರಕ್ಷಣೆ ನೀಡಬೇಕು.ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ ಜಿಲ್ಲಾಧ್ಯಕ್ಷ ಬಸವರಾಜ ಸಂಗಮೇಶ್ವರ, ತಾಲೂಕಾಧ್ಯಕ್ಷ ನಾಗರಾಜ ಮೇತ್ರಿ, ಎನ್.ಎಂ. ಮೇತ್ರಿ, ಚಂದ್ರಶೇಖರ ತೊಂಡೂರ, ಅಶೋಕ ಹರಿಜನ, ಅರ್ಜುನ ಸನವಳ್ಳಿ, ಮಂಜುನಾಥ ಗೊಟಗೊಡಿಕೊಪ್ಪ, ಗಣಪತಿ ನಡಕಿನಮನಿ, ಬಸವರಾಜ ಅತ್ತೀವೇರಿ, ಪರಶುರಾಮ ಹರಿಜನ, ಪರಶುರಾಮ ಗೌಡಣ್ಣನವರ, ವೀರಭದ್ರ ಕೊಳಗಿ, ಶಂಕರ ಹರಿಜನ, ಸರೋಜಾ ದೊಡ್ಮನಿ ಮುಂತಾದವರು ಉಪಸ್ಥಿತರಿದ್ದರು.