ಪೊಲೀಸ್‌ ಸರ್ಪಗಾವಲಿನಲ್ಲಿ ಕೊಲೆಯಾದ ಮಾನ್ಯಾ ಅಂತ್ಯಕ್ರಿಯೆ ನೆರವೇರಿತು

ಹುಬ್ಬಳ್ಳಿ: ಮರ್ಯಾದೆಗೇಡು ಹತ್ಯೆ ನಡೆದ ತಾಲೂಕಿನ ಇನಾಂವೀರಾಪುರದಲ್ಲಿ ಸ್ಮಶಾನ ಮೌನ ಆವರಿಸಿದೆ. ಇಡೀ ಗ್ರಾಮವೇ ಮಮ್ಮಲ ಮರುಗುತ್ತಿದೆ. ಗ್ರಾಮಸ್ಥರ ಕಂಬನಿಯ ನಡುವೆಯೇ ಹತ್ಯೆಗೀಡಾದ ಯುವತಿ ಮಾನ್ಯಾಳ ಅಂತ್ಯಸಂಸ್ಕಾರ ಸೋಮವಾರ ಮಧ್ಯಾಹ್ನ ಪತಿಯ ಕುಟುಂಬಸ್ಥರು ನೆರವೇರಿಸಿದ್ದಾರೆ.

ಈ ನಡುವೆ ಪ್ರಕರಣಕ್ಕೆ ಸಂಬಂಧಪಟ್ಟಂತೆ 18 ಜನರ ಮೇಲೆ ಎಫ್‌ಐಆರ್‌ ದಾಖಲಾಗಿದ್ದು, ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣವನ್ನು ಖಂಡಿಸಿ ವಿವಿಧ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸಿವೆ.

ಅನ್ಯ ಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎಂದು ಗರ್ಭೀಣಿ ಎಂಬುದನ್ನು ಲೆಕ್ಕಿಸದೇ ಹೆತ್ತ ಮಗಳನ್ನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಘಟನೆಯಲ್ಲಿ ತಂದೆ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.ಅಂತ್ಯಕ್ರಿಯೆ

ಭಾನುವಾರ ರಾತ್ರಿ ಮೃತಪಟ್ಟ ಮಾನ್ಯಾಳ ಮರಣೋತ್ತರ ಪರೀಕ್ಷೆಯನ್ನು ಕೆಎಂಸಿಆರ್‌ಐನಲ್ಲಿ ನಡೆಸಿ ಶವವನ್ನು ಸೋಮವಾರ ಪತಿಯ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು. ಹುಬ್ಬಳ್ಳಿಯಲ್ಲಿ ವಿವಿಧ ದಲಿತ ಸಂಘಟನೆಗಳು ಪಾರ್ಥೀವ ಶರೀರದ ಮೆರವಣಿಗೆ ನಡೆಸಿದವು. ಬಳಿಕ ಸ್ವಗ್ರಾಮ ಇನಾಂವೀರಾಪುರ ಗ್ರಾಮಕ್ಕೆ ತೆಗೆದುಕೊಂಡು ಹೋಗಿ ಗಂಡನ ಮನೆಯವರು ಅಂತ್ಯಸಂಸ್ಕಾರ ನೆರವೇರಿಸಿದರು. ಪತಿಯೇ ಪತ್ನಿಯ ಅಂತಿಮ ವಿಧಿ ವಿಧಾನ ಪೂರ್ಣಗೊಳಿಸಿದನು. ಪೊಲೀಸ್‌ ಸರ್ಪಗಾವಲಿನಲ್ಲಿ ಅಂತ್ಯಸಂಸ್ಕಾರ ನಡೆಯಿತು. ಈ ವೇಳೆ ಪತಿ ವಿವೇಕಾನಂದ ದೊಡ್ಡಮನಿ ದುಃಖ ಮುಗಿಲು ಮುಟ್ಟಿತ್ತು. ಕುಟುಂಬಸ್ಥರು ಸಮಾಧಾನಪಡಿಸುತ್ತಿದ್ದ ದೃಶ್ಯ ಮನಕಲುಕುತ್ತಿತ್ತು.

ಈ ನಡುವೆ ಯುವತಿಯ ಗಂಡನ ಮನೆಯವರು, ಗ್ರಾಮಸ್ಥರು ಮಾತ್ರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದು, ಕಂಡುಬಂತು. ಕೂಗಳತೆಯಲ್ಲೇ ತವರು ಮನೆಯಿದ್ದರೂ ಯಾರೊಬ್ಬರು ಅದರಲ್ಲಿ ಪಾಲ್ಗೊಂಡಿರಲಿಲ್ಲ. ಇದು ಪಾಲ್ಗೊಂಡವರಲ್ಲಿ ಬೇಸರವನ್ನುಂಟು ಮಾಡುತ್ತಿತ್ತು.

ದಲಿತ ಸಂಘಟನೆಗಳ ಪ್ರತಿಭಟನೆ

ಘಟನೆ ಖಂಡಿಸಿ, ಕರ್ನಾಟಕ ದಲಿತ ವಿಮೋಚನಾ ಸಮಿತಿ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿ ಕೆಎಂಸಿಆರ್‌ಐ ಶವಾಗಾರ ಎದುರಿಗೆ ಪ್ರತಿಭಟನೆ ನಡೆಸಿದ ಕಾರ್ಯಕರ್ತರು ಜಾತಿವಾದಿಗಳಿಗೆ ತಕ್ಕ ಶಿಕ್ಷೆಗೊಳಪಡಿಸಬೇಕು. ಈ ಕೃತ್ಯದಲ್ಲಿ ಭಾಗಿಯಾಗಿರುವ ಇನ್ನುಳಿದ ಆರೋಪಿಗಳನ್ನು ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು. ದಲಿತರಿಗೆ ನ್ಯಾಯ ಒದಗಿಸಬೇಕು. ಹತ್ಯೆಯಾದ ಮಾನ್ಯಾ ಪತಿ ಹಾಗೂ ಕುಟುಂಬದವರಿಗೆ ಸೂಕ್ತ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಎಸ್ಪಿ ಗುಂಜನ್‌ ಆರ್ಯ, ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೃತಳ ತಂದೆ ಸೇರಿದಂತೆ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಹಲವರು ಭಾಗಿಯಾಗಿದ್ದಾರೆ. ಅವರ ಹುಡುಕಾಟ ಮುಂದುವರಿದಿದೆ. ಇದಕ್ಕಾಗಿ ಪ್ರತ್ಯೇಕ ವಿಶೇಷ ತಂಡಗಳನ್ನು ರಚಿಸಲಾಗಿದೆ. ಆದಷ್ಟು ಬೇಗನೆ ಎಲ್ಲ ಆರೋಪಿಗಳನ್ನು ಬಂಧಿಸಲಾಗುವುದು ಎಂದರು.

ಬಂದೋಬಸ್ತ್‌

ಈ ನಡುವೆ ಮರ್ಯಾದೆಗೇಡು ಹತ್ಯೆ ಪ್ರಕರಣದಿಂದಾಗಿ ಗ್ರಾಮದಲ್ಲಿ ಮುಂಜಾಗ್ರತಾ ಹಿನ್ನೆಲೆಯಲ್ಲಿ ಹೆಚ್ಚುವರಿ ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳ ವ್ಯಾಪ್ತಿ ಬರುತ್ತಿದ್ದರೂ ಹುಬ್ಬಳ್ಳಿ-ಧಾರವಾಡ ಪೊಲೀಸ್‌ ಕಮಿಷನರೇಟ್‌ ಸಹ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಥ್‌ ನೀಡುತ್ತಿದೆ.

ಹೊಂಚು ಹಾಕಿ ಕೊಲೆ

ನಾನು ಮಾನ್ಯ ಎರಡು ವರ್ಷದಿಂದ ಪ್ರೀತಿಸುತ್ತಿದ್ದೇವು. ಇದು ಮಾನ್ಯಾಳ ಕುಟುಂಬದವರಿಗೆ ಇಷ್ಟವಿರಲಿಲ್ಲ. ಹೀಗಾಗಿ, ನಾವು ಓಡಿ ಹೋಗಿ ಉಳವಿ ಚನ್ನಬಸವೇಶ್ವರ ದೇವಸ್ಥಾನದಲ್ಲಿ ಮದುವೆಯಾಗಿದ್ದೇವು. ಇತ್ತೀಚಿಗಷ್ಟೇ ವಾಪಸ್‌ ಬಂದಿದ್ದೇವು. ಈಗ ಹೊಂಚು ಹಾಕಿ ನನ್ನ ಪತ್ನಿಯನ್ನು ಕೊಲೆ ಮಾಡಿದ್ದಾರೆ ಎಂದು ಮೃತ ಮಾನ್ಯಾಳ ಪತಿ ವಿವೇಕಾನಂದ ದೊಡ್ಡಮನಿ ಆರೋಪಿಸಿದ್ದಾನೆ,