5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ, ಕೊಲೆ, ಮರ್ಯಾದಾಗೇಡು ಹತ್ಯೆಯಂತಹ ಘಟನೆಗಳು ನಡೆದು ರಾಷ್ಟ್ರಮಟ್ಟದಲ್ಲಿಯೇ ಚರ್ಚೆಯಾಗುವ ಮೂಲಕ ಮನುಕುಲವೇ ತಲೆತಗ್ಗಿಸುವಂತಹ ಘಟನೆಗಳಿಗೆ ಹುಬ್ಬಳ್ಳಿ ಸಾಕ್ಷಿಯಾಯಿತು.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ

ಮರ್ಯಾದಾಗೇಡು ಹತ್ಯೆ, ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ, ಅತ್ಯಾಚಾರಿಗೆ ಗುಂಡು.

ಇವು ಹುಬ್ಬಳ್ಳಿ-ಧಾರವಾಡ ಕಮಿಷನರೇಟ್‌ ವ್ಯಾಪ್ತಿಯಲ್ಲಿ 2025ನೇ ಸಾಲಿನ ನಡೆದ ಅಪರಾಧ ಪ್ರಕರಣದ ಒಂದು ಝಲಕ್‌.

5 ವರ್ಷದ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನ, ಕೊಲೆ, ಮರ್ಯಾದಾಗೇಡು ಹತ್ಯೆಯಂತಹ ಘಟನೆಗಳು ನಡೆದು ರಾಷ್ಟ್ರಮಟ್ಟದಲ್ಲಿಯೇ ಚರ್ಚೆಯಾಗುವ ಮೂಲಕ ಮನುಕುಲವೇ ತಲೆತಗ್ಗಿಸುವಂತಹ ಘಟನೆಗಳಿಗೆ ನಗರ ಸಾಕ್ಷಿಯಾಯಿತು. ಜತೆಗೆ ಸುಲಿಗೆ, ಚಾಕು ಇರಿತ, ಹಲವು ರೌಡಿಶೀಟರ್‌ಗಳಿಗೆ ಗೂಂಡಾ ಕಾಯ್ದೆಯಡಿ ಜೈಲಿಗೆ ಅಟ್ಟಿರುವುದನ್ನು ನೆನಪಿಸಿಕೊಳ್ಳಬಹುದಾಗಿದೆ.

ವರ್ಷದ ಮೊದಲ ಎನ್‌ಕೌಂಟರ್‌:

ಏ. 13ರಂದು ಇಲ್ಲಿನ ಅಧ್ಯಾಪಕ ನಗರದಲ್ಲಿ ಗೇಟಿನ ಮುಂದೆ ಆಟವಾಡುತ್ತಿದ್ದ 5 ವರ್ಷದ ಬಾಲಕಿಯನ್ನು ಬಿಹಾರ ಮೂಲದ ರಿತೇಶಕುಮಾರ ಎಂಬುವನು ಹೊತ್ತೊಯ್ದು ಅತ್ಯಾಚಾರಕ್ಕೆ ಯತ್ನಿಸಿದ್ದ ಅಲ್ಲದೇ, ಕೊಲೆ ಮಾಡಿದ್ದ. ಈ ಘಟನೆ ಒಂದೇ ಗಂಟೆಯಲ್ಲೇ ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ನಗರ ಅಕ್ಷರಶಃ ಹೊತ್ತಿ ಉರಿದಿತ್ತು. ಬಳಿಕ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಮಹಜರು ನಡೆಸಲು ಹೋದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪಿಎಸ್‌ಐ ಅನ್ನಪೂರ್ಣ ಆರ್‌.ಎಂ. ಎನ್‌ಕೌಂಟರ್‌ ಮಾಡಿದ್ದರು. ಈ ಶಿಕ್ಷೆಗೆ ದೇಶಾದ್ಯಂತ ಶ್ಲಾಘನೆ ವ್ಯಕ್ತವಾಗಿತ್ತು. ರಾಜ್ಯ ಮಾನವ ಹಕ್ಕುಗಳ ಆಯೋಗವು ಇನ್ನೂ ತನಿಖೆ ನಡೆಸುತ್ತಿದೆ.

ಬಾಲಕನಿಂದಲೇ ಚಾಕು ಇರಿತ:

ಮೇ 12ರಂದು ಡಿಜೆ ಮತ್ತು ಲೈಟಿಂಗ್‌ ವಿಷಯಕ್ಕೆ ಸಂಬಂಧಿಸಿದಂತೆ ಬಾಲಕನೇ ಬಾಲಕನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಇಲ್ಲಿನ ಗುರುಸಿದ್ದೇಶ್ವರ ನಗರದಲ್ಲಿ ನಡೆದಿತ್ತು. 6ನೇ ತರಗತಿ ಓದುವ ಬಾಲಕ 8ನೇ ತರಗತಿಯ ಚೇತನ ಎಂಬ ಬಾಲಕನಿಗೆ ಚಾಕು ಇರಿದಿದ್ದ. ಆಸ್ಪತ್ರೆಗೆ ಸಾಗಿಸುವಾಗ ಬಾಲಕ ಮೃತಪಟ್ಟಿದ್ದ. ಈ ಘಟನೆ ಇಡೀ ಹುಬ್ಬಳ್ಳಿಯನ್ನೇ ಬೆಚ್ಚಿ ಬೀಳಿಸಿತ್ತು.

ಅಂಗನವಾಡಿ ಅನ್ನಕ್ಕೆ ಕನ್ನ:

ಅಂಗನವಾಡಿಗೆ ಪೂರೈಸಬೇಕಿದ್ದ 329 ಚೀಲ ಪೌಷ್ಟಿಕ ಆಹಾರ ಪದಾರ್ಥ ಗೋದಾಮುಗಳಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಪ್ರಕರಣದ ಆರೋಪಿಗಳ ವಿರುದ್ಧ ಇಲ್ಲಿನ ಕಸಬಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದವು. ಇಬ್ಬರು ಪೊಲೀಸರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು ಅಮಾನತುಗೊಂಡಿದ್ದರು.

ಪೊಲೀಸರ ಗುಂಡು:

ವಿದ್ಯಾನಗರದ ಗೋಲ್ಡನ್‌ ಹೈಟ್ಸ್‌ ಬಾರ್‌ ಆ್ಯಂಡ್‌ ರೆಸ್ಟೋರೆಂಟ್‌ನ ಪಾರ್ಕಿಂಗ್‌ ಜಾಗದಲ್ಲಿ ಜನವರಿ ತಿಂಗಳ ತಡರಾತ್ರಿ ಆಕಾಶ ವಾಲ್ಮೀಕಿ (22) ಯುವಕನನ್ನು ಐವರು ಸೇರಿ ಚಾಕುವಿನಿಂದ ಇರಿದು ಕೊಲೆ ಮಾಡಿದ್ದರು. ಬಂಧನದ ವೇಳೆ ಪೊಲೀಸರ ಮೇಲೆ ದಾಳಿ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಮೂವರು ಆರೋಪಿಗಳನ್ನು ಪೊಲೀಸರು ಗುಂಡಿಕ್ಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.

ದರೋಡೆಕೋರರಿಗೆ ಗುಂಡು:

ನಗರ ಹೊರವಲಯದಲ್ಲಿ ವಾಹನಗಳನ್ನು ಅಡ್ಡಗಟ್ಟಿ ದರೋಡೆ ಮಾಡುತ್ತಿದ್ದ ನಟೋರಿಯಸ್‌ ಗ್ಯಾಂಗ್‌ನ ಇಬ್ಬರ ಕಾಲಿಗೆ ಪೊಲೀಸರು ಗುಂಡು ಹಾರಿಸಿದ್ದರು. ಹೀಗಾಗಿ ವರ್ಷವಿಡೀ ಪೊಲೀಸರ ಗುಂಡಿನ ಸದ್ದು ಆಗಾಗ ಕೇಳಿಸುತ್ತಲೇ ಇತ್ತು.

ನಿಲ್ಲದ ಗಾಂಜಾ ಘಮಲು:

ಛೋಟಾ ಮುಂಬೈ ಎಂದೇ ಪ್ರಖ್ಯಾತಿ ಹೊಂದಿದ ಹುಬ್ಬಳ್ಳಿಯಲ್ಲಿ 2025ರಲ್ಲೂ ಗಾಂಜಾ ಘಮಲು ಜೋರಾಗಿಯೇ ಸದ್ದು ಮಾಡಿತು. ಹೊರ ರಾಜ್ಯ, ದೇಶದಿಂದ ಬರುವ ಆಗುಂತಕರು, ಇಲ್ಲಿ ಗಾಂಜಾ ಮಾರಾಟ ಮಾಡಿ ಹೋಗುತ್ತಿರುವುದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಜನವರಿಯಿಂದ ಜುಲೈವರೆಗೆ ಒಟ್ಟು 372 ಜನರನ್ನು ಬಂಧಿಸಿದ್ದು, ₹28 ಲಕ್ಷ ಮೌಲ್ಯದ 35 ಕೆಜಿ ಗಾಂಜಾ ಜಪ್ತಿ ಮಾಡಿದ್ದರು.

ಮಾನಕಳೆದ ಮರ್ಯಾದಾಗೇಡು ಹತ್ಯೆ

ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪುರದಲ್ಲಿ ನಡೆದ ಮರ್ಯಾದಾಗೇಡು ಹತ್ಯೆ ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತೆ ಆಗಿತ್ತು. ಅನ್ಯಜಾತಿಯ ಯುವಕನನ್ನು ಮದುವೆಯಾಗಿದ್ದಾಳೆ ಎಂಬ ಕಾರಣಕ್ಕೆ 7 ತಿಂಗಳ ಗರ್ಭಿಣಿ ಎಂಬುದನ್ನು ಲೆಕ್ಕಿಸದೇ ತಂದೆಯೇ ಮಗಳನ್ನು ಕೊಲೆ ಮಾಡಿದ ಘಟನೆಗೂ ನಗರ ಸಾಕ್ಷಿಯಾಯಿತು. ಗ್ರಾಮದ ಮಾನ್ಯಾ ಪಾಟೀಲ(20) ಮೃತಳು. ಅದೇ ಗ್ರಾಮದ ವಿವೇಕಾನಂದ ಪಾಟೀಲ ಎಂಬವನನ್ನು ಪ್ರೀತಿಸಿ ಮದುವೆಯಾಗಿದ್ದಳು. ಇದೀಗ ಯುವತಿಯ ತಂದೆ ಪ್ರಕಾಶಗೌಡ ಪಾಟೀಲ ಮತ್ತಿತರರು ಜೈಲಿನಲ್ಲಿದ್ದರೆ, ಯುವಕನ ಮನೆಯವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಪ್ರಕರಣದಿಂದ ಜೀವ ಕಳೆದುಕೊಂಡ ಯುವತಿ ಮಾನ್ಯಳ ಸಾವಿಗೆ ಸಮಾಜ ಮಮ್ಮಲ ಮರಗುತ್ತಿದೆ. 2900 ಪ್ರಕರಣಗಳು ದಾಖಲು

ಮಹಾನಗರ ವ್ಯಾಪ್ತಿಯ ಎಲ್ಲ ಠಾಣೆಗಳಲ್ಲಿ ಒಂದೇ ವರ್ಷದಲ್ಲಿ 2900 ಪ್ರಕರಣ ದಾಖಲಾಗಿವೆ. ಇದರಲ್ಲಿ ಅಪಘಾತ- 406, ಎನ್.ಡಿ.ಪಿ.ಎಸ್- 255, ಕಳ್ಳತನ- 67, ವಂಚನೆ- 47, ಡಕಾಯಿತಿ- 06, ಕಿಡ್ನ್ಯಾಪ್- 60, ಮಿಸ್ಸಿಂಗ್- 320, ಅಬಕಾರಿ- 70, ಮಟ್ಕಾ- 214, ಕ್ರಿಕೆಟ್ ಬೆಟ್ಟಿಂಗ್ 120, ಎಸ್ಸಿ, ಎಸ್ಟಿ ಪ್ರಕರಣ- 50, ಕೊಲೆ- 10, ಪೋಕ್ಸೋ- 55, ಆತ್ಮಹತ್ಯೆ 16 ಸೇರಿವೆ. ಕಳೆದ ಬಾರಿಗೆ 3323 ಪ್ರಕರಣಗಳು ದಾಖಲಾಗಿದ್ದವು. ಇದನ್ನೆಲ್ಲ ನೋಡಿದರೆ ಒಟ್ಟಾರೆ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗಿದೆ.