ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿಗೆ ಸನ್ಮಾನ ಕಾರ್ಯಕ್ರಮ

| Published : May 30 2024, 12:50 AM IST

ಸಾರಾಂಶ

88 ವರ್ಷದ ಹಿರಿಯ ಯಕ್ಷಗಾನ ವಿದ್ವಾಂಸರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರು ಮಹಾಭಾರತ ಕೋಶ, ರಾಮಾಯಣ ಕೋಶ, ಭಾಗವತ ಕೋಶ, ಪುರಾಣ ಕಥಾ ಚಿಂತಾ ರತ್ನ ಹೀಗೆ ಹಲವು ಯಕ್ಷಗಾನ ಕೃತಿಗಳನ್ನು ರಚಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಬೆಳ್ತಂಗಡಿ

ಹಿರಿಯ ಯಕ್ಷಗಾನ ಅರ್ಥಧಾರಿ ಮೂಡಂಬೈಲು ಸಿ.ಗೋಪಾಲಕೃಷ್ಣ ಶಾಸ್ತ್ರಿ ಅವರನ್ನು ಬೆಳ್ತಂಗಡಿ ತಾಲೂಕಿನ ಪಡಂಗಡಿ ಯ ಅವರ ಸ್ವಗೃಹ ‘ಶ್ರೀನಿಲಯ’ದಲ್ಲಿ ವಿವಿಧ ಯಕ್ಷಗಾನ ಸಂಘಗಳ ವತಿಯಿಂದ ಗೌರವಿಸಲಾಯಿತು.

ಪುತ್ತೂರಿನ ಬೊಳುವಾರು ಶ್ರೀ ಆಂಜನೇಯ ಯಕ್ಷಗಾನ ಕಲಾ ಸಂಘದ ಅಧ್ಯಕ್ಷ ಭಾಸ್ಕರ ಬಾರ್ಯ, ಉಪ್ಪಿನಂಗಡಿ ಶ್ರೀ ಕಾಳಿಕಾಂಬ ಯಕ್ಷಗಾನ ಕಲಾ ಸೇವಾ ಸಂಘದ ಅಧ್ಯಕ್ಷ ದಿವಾಕರ ಆಚಾರ್ಯ ಗೇರುಕಟ್ಟೆ ಮೂಡಂಬೈಲುಗೋಪಾಲಕೃಷ್ಣ ಶಾಸ್ತ್ರಿ ಅವರನ್ನು ಗೌರವಿಸಿದರು. ಸ್ವರ್ಣಲತಾ ಭಾಸ್ಕರ್ ಉಪಸ್ಥಿತರಿದ್ದರು.

88 ವರ್ಷದ ಹಿರಿಯ ಯಕ್ಷಗಾನ ವಿದ್ವಾಂಸರಾದ ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ ಅವರು ಮಹಾಭಾರತ ಕೋಶ, ರಾಮಾಯಣ ಕೋಶ, ಭಾಗವತ ಕೋಶ, ಪುರಾಣ ಕಥಾ ಚಿಂತಾ ರತ್ನ, ದಶಾವತಾರ ಉಪನ್ಯಾಸಗಳು, ಅರ್ಥ ಸಹಿತ ಕುಮಾರ ವಿಜಯ ಮುಂತಾದ ಅಪೂರ್ವ ಯಕ್ಷಗಾನ ಕೃತಿಗಳನ್ನು ರಚಿಸಿ ಯಕ್ಷಗಾನ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿ ಸದ್ಯ ಸ್ವಗೃಹದಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದಾರೆ. ಹಿರಿಯ ಯಕ್ಷಗಾನ ಅರ್ಥಧಾರಿಗಳಾದ ಶೇಣಿ , ಸಾಮಗ, ಪೆರ್ಲ, ತೆಕ್ಕಟ್ಟೆ, ಕಾಂತ ರೈ , ಜೋಷಿ ಮೊದಲಾದ ಮಹಾನ್ ಕಲಾವಿದರೊಂದಿಗೆ ಅರ್ಥಧಾರಿಯಾಗಿ ಜನಪ್ರಿಯರಾಗಿದ್ದ ಅವರು ಕಳೆದ ಮೂರು ವರ್ಷಗಳಿಂದ ತಾಳಮದ್ದಳೆಯಲ್ಲಿ ಭಾಗವಹಿಸದೆ ವಿಶ್ರಾಂತ ಜೀವನದಲ್ಲಿ ತನ್ನ ಜ್ಞಾನ ಮತ್ತು ಅನುಭವಗಳನ್ನು ಕಲಾಸಕ್ತರ ಜೊತೆ ಹಂಚಿಕೊಳ್ಳುತ್ತ ಸಕ್ರಿಯವಾಗಿದ್ದಾರೆ.)