ಬಸವರಾಜ ಹೊರಟ್ಟಿ ಅವರು 45 ವರ್ಷ ಶಿಕ್ಷಕರ ಕ್ಷೇತ್ರದ ಸ್ಪರ್ಧಿಸಿ ಅವರ ಸಮಸ್ಯೆ ನಿವಾರಣೆಗೆ ಶ್ರಮಿಸಿದ್ದಾರೆ. ಆದರ್ಶ ವ್ಯಕ್ತಿಗೆ ಅವರು ಪ್ರೇರಣೆಯಾಗಿದ್ದು, ಪಕ್ಷಾತೀತವಾಗಿ ಸೇವೆ ಮಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಸಮಾರಂಭ ಆಯೋಜಿಸಲಾಗಿದೆ.
ಹುಬ್ಬಳ್ಳಿ:
ಪಶ್ಚಿಮ ಶಿಕ್ಷಕರ ಮತಕ್ಷೇತ್ರದಿಂದ ಸತತ 8 ಬಾರಿ ಆಯ್ಕೆಯಾಗಿ ವಿಶ್ವದಾಖಲೆ ನಿರ್ಮಿಸಿರುವ ವಿಧಾನಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಅಭಿಮಾನಿ ಬಳಗದಿಂದ ಡಿ.13ರಂದು ಗೌರವ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಶಾಸಕ ಎನ್.ಎಚ್. ಕೋನರಡ್ಡಿ, ಹೊರಟ್ಟಿ ಅವರು ಸರಳ, ಸಜ್ಜನ ಹಾಗೂ ನೇರ ವ್ಯಕ್ತಿಯಾಗಿದ್ದಾರೆ. ರಾಜಕೀಯ ರಂಗದಲ್ಲೇ ಅಜಾತ ಶತ್ರು ಎಂದು ಗುರುತಿಸಿಕೊಂಡಿರುವ ಅವರು, ಶಿಕ್ಷಕರ ಅನೇಕ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿದ್ದಾರೆ. ವಿವಿಧ ಇಲಾಖೆಗಳ ಜವಾಬ್ದಾರಿಯನ್ನು ಸೂಕ್ತವಾಗಿ ನಿಭಾಯಿಸಿದ್ದಾರೆ. ಹೀಗಾಗಿ ಪಕ್ಷಾತೀತವಾಗಿ ಗೌರವ ಸನ್ಮಾನ ಸಮಾರಂಭ ಹಮ್ಮಿಕೊಂಡಿದ್ದು ಕಾರ್ಯಕ್ರಮಕ್ಕೆ ಧಾರವಾಡ, ಗದಗ, ಹಾವೇರಿ, ಉತ್ತರ ಕನ್ನಡ ಜಿಲ್ಲೆಯಿಂದ 15ರಿಂದ 20 ಸಾವಿರ ಶಿಕ್ಷಕರು ಹಾಗೂ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.
ಸಿಎಂ ಚಾಲನೆ:ಸಂಜೆ 4 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗೌರವ ಸನ್ಮಾನ ಸಮಾರಂಭಕ್ಕೆ ಚಾಲನೆ ನೀಡಲಿದ್ದು, ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್.ಡಿ. ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ, ಉಪ ಸಭಾಪತಿ ರುದ್ರಪ್ಪ ಲಮಾಣಿ, ಸಚಿವ ಎಚ್.ಕೆ. ಪಾಟೀಲ್, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಸಂಸದರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಉದ್ಯಮಿ ಡಾ. ವಿಜಯ ಸಂಕೇಶ್ವರ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ ಸೇರಿದಂತೆ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಹೊರಟ್ಟಿ ಅವರು 45 ವರ್ಷ ಶಿಕ್ಷಕರ ಕ್ಷೇತ್ರದ ಸ್ಪರ್ಧಿಸಿ ಅವರ ಸಮಸ್ಯೆ ನಿವಾರಣೆಗೆ ಶ್ರಮಿಸಿದ್ದಾರೆ. ಆದರ್ಶ ವ್ಯಕ್ತಿಗೆ ಅವರು ಪ್ರೇರಣೆಯಾಗಿದ್ದು, ಪಕ್ಷಾತೀತವಾಗಿ ಸೇವೆ ಮಾಡಿದ್ದಾರೆ. ಅವರಿಗೆ ಕೃತಜ್ಞತೆ ಸಲ್ಲಿಸಲು ಈ ಸಮಾರಂಭ ಆಯೋಜಿಸಲಾಗಿದೆ ಎಂದರು.ಕೆಎಲ್‌ಇ ಸಂಸ್ಥೆಯ ನಿರ್ದೇಶಕ ಶಂಕರಣ್ಣ ಮುನವಳ್ಳಿ ಮಾತನಾಡಿ, ರಾಜಕೀಯ ಕ್ಷೇತ್ರದಲ್ಲಿ ಗಿನ್ನಿಸ್ ದಾಖಲೆ ಮಾಡಿದ ವ್ಯಕ್ತಿ ಹೊರಟ್ಟಿ ಒಬ್ಬರೆ. ತಮ್ಮ ರಾಜಕೀಯ ಅವಧಿಯಲ್ಲಿ ವಿಜ್ಞಾನ, ತಂತ್ರಜ್ಞಾನ, ಶಿಕ್ಷಣ ಸೇರಿದಂತೆ ವಿವಿಧ ಖಾತೆಗಳನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಇದೊಂದು ಪಕ್ಷಾತೀತವಾಗಿ ಹಮ್ಮಿಕೊಂಡಿರುವ ಕಾರ್ಯಕ್ರಮವಾಗಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಆಗಮಿಸಬೇಕೆಂದು ಹೇಳಿದರು.
ಪಾಲಿಕೆ ಸದಸ್ಯ ರಾಜಣ್ಣ ಕೊರವಿ ಮಾತನಾಡಿ, ಅಂದು ಸಂಜೆ 4 ಗಂಟೆಗೆ ಲ್ಯಾಮ್ಮಿಂಗ್ಟನ್ ಶಾಲೆಯಿಂದ ಬಸವರಾಜ ಹೊರಟ್ಟಿ ಅವರನ್ನು ಮೆರವಣಿಗೆ ಮೂಲಕ ನೆಹರು ಮೈದಾನಕ್ಕೆ ಕರೆತರಲಾಗುವುದು. ಈ ವೇಳೆ ಅನೇಕ ಜನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಲಿವೆ ಎಂದರು.ಸುದ್ದಿಗೋಷ್ಠಿಯಲ್ಲಿ ವಿಧಾನಪರಿಷತ್ ಮಾಜಿ ಸದಸ್ಯ ಮೋಹನ ಲಿಂಬಿಕಾಯಿ, ಪ್ರದೀಪ್ ಶೆಟ್ಟರ್, ಉದ್ಯಮಿ ಡಾ. ವಿ.ಎಸ್.ವಿ. ಪ್ರಸಾದ, ಶಶಿ ಸಾಲಿ, ಜಿ.ಕೆ. ಆದಪ್ಪಗೌಡ್ರ, ವೀರೇಶ ಸಂಗಳದ, ಜಿ.ಆರ್. ಭಟ್ ಸೇರಿದಂತೆ ಹಲವರಿದ್ದದ್ದರು.
ಸಭಾಪತಿ ಬಸವರಾಜ ಹೊರಟ್ಟಿ ಅವರ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಕುರಿತು ಚರ್ಚೆ ನಡೆದಿದೆ. ಹೊರಟ್ಟಿ ಅವರು ಎಲ್ಲ ಪಕ್ಷಗಳಿಗೆ ಬೇಕಾದವರು. ಹೀಗಾಗಿ ಚಳಿಗಾಲದ ಅಧಿವೇಶನದಲ್ಲಿ ಸರ್ವ ಪಕ್ಷಗಳ ಶಾಸಕರು ಹೊರಟ್ಟಿ ಅವರ ಪರವಾಗಿ ನಿಲ್ಲಬೇಕು.ಪ್ರದೀಪ್ ಶೆಟ್ಟರ್, ವಿಪ ಸದಸ್ಯ