8 ತಿಂಗಳಾದರೂ ಕಲಾವಿದರಿಗೆ ಸಿಗದ ಗೌರವಧನ

| Published : Jul 10 2024, 12:37 AM IST

ಸಾರಾಂಶ

ವಿಪರ್ಯಾಸವೆಂದರೆ ಅದೇ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ್ದ ಬೆಂಗಳೂರಿನ ದೊಡ್ಡ ದೊಡ್ಡ ಕಲಾವಿದರು, ಸಂಗೀತ ಕಾರ್ಯಕ್ರಮ ನೀಡಿದ ಚಿತ್ರರಂಗದ ಗಣ್ಯರಿಗೆ ಅಂದೇ ಗೌರವಧನ ಪಾವತಿಸಲಾಗಿದ್ದು,

ಶಿವಕುಮಾರ ಕುಷ್ಟಗಿ ಗದಗ

ಕರ್ನಾಟಕ ರಾಜ್ಯ ಎಂದು ನಾಮಕರಣಗೊಂಡು 50 ವರ್ಷಗಳು ಪೂರೈಸಿದ ಹಿನ್ನೆಲೆ 2023ರ ನ.1, 2,3 ರಂದು ಹಮ್ಮಿಕೊಂಡಿದ್ದ ಕರ್ನಾಟಕ ಸಂಭ್ರಮ- 50 ಕಾರ್ಯಕ್ರಮ ನಡೆದು 8 ತಿಂಗಳು ಗತಿಸಿದ್ದರೂ ಅಂದು ಕಲಾ ಪ್ರದರ್ಶನ ನೀಡಿದ್ದ ಜಾನಪದ ಕಲಾವಿದರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನೀಡಬೇಕಾಗಿದ್ದ ಗೌರವ ಧನ ಇನ್ನೂ ನೀಡದೇ ಇರುವುದರಿಂದ ಕಲಾವಿದರು ನಿತ್ಯವೂ ಕಚೇರಿಗೆ ಅಲೆಯಬೇಕಾಗಿದೆ.

ವಿಪರ್ಯಾಸವೆಂದರೆ ಅದೇ ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ್ದ ಬೆಂಗಳೂರಿನ ದೊಡ್ಡ ದೊಡ್ಡ ಕಲಾವಿದರು, ಸಂಗೀತ ಕಾರ್ಯಕ್ರಮ ನೀಡಿದ ಚಿತ್ರರಂಗದ ಗಣ್ಯರಿಗೆ ಅಂದೇ ಗೌರವಧನ ಪಾವತಿಸಲಾಗಿದ್ದು, ಬಡ ಜಾನಪದ ಕಲಾವಿದರಿಗೆ ಇನ್ನೂ ವೇತನ ನೀಡದೇ ಸತಾಯಿಸಲಾಗುತ್ತಿದೆ.

75 ಕಲಾ ತಂಡಗಳಿಗೆ ಬಾಕಿ: ಕರ್ನಾಟಕ ಸಂಭ್ರಮ-50ರ ವೇದಿಕೆ ಕಾರ್ಯಕ್ರಮ ಹಾಗೂ ಮೆರವಣಿಗೆಯಲ್ಲಿ ಪಾಲ್ಗೊಂಡು ಸಾರ್ವಜನಿಕರನ್ನು ಮನರಂಜಿಸಿದ್ದ 75ಕ್ಕೂ ಹೆಚ್ಚು ಕಲಾ ತಂಡಗಳಿಗೆ ನೀಡಬೇಕಾದ ₹ 11 ಲಕ್ಷಕ್ಕೂ ಅಧಿಕ ಗೌರವಧನ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬಾಕಿ ಉಳಿಸಿಕೊಂಡಿದೆ. ಇದಕ್ಕಾಗಿ ಕಲಾವಿದರೂ ನಿತ್ಯವೂ ಇಲಾಖೆ ಕಚೇರಿ, ಜಿಲ್ಲಾಧಿಕಾರಿ ಕಚೇರಿಗೆ ಅಲೆಯುವಂತಾಗಿದೆ.

ಕಲಾ ತಂಡಗಳಾದ ಮಂಗಲವಾದ್ಯ, ಸುಗಮ ಸಂಗೀತ, ತತ್ವಪದ, ಸಮೂಹ ನೃತ್ಯ, ಹಿಂದೂಸ್ತಾನಿ ಸಂಗೀತ, ದೊಡ್ಡಾಟ, ಗೀಗೀ ಪದ, ಸುಗ್ಗಿ ಕುಣಿತ, ಡೊಳ್ಳಿನ ಪದ, ಯಕ್ಷಗಾನ, ಲಾವಣಿ ಪದ, ಯೋಗಾಸನ, ಜಾನಪದ ನೃತ್ಯ, ಜನಪದ ಸಂಗೀತ, ಲಂಬಾಣಿ ನೃತ್ಯ, ವಾದ್ಯ ಸಂಗೀತ, ಜೋಗತಿ ನೃತ್ಯ ಹೀಗೆ ಸ್ಥಳೀಯ ಕಲಾವದರಿಗೆ ಮಾತ್ರ ಗೌರವ ಧನ ನೀಡಿಲ್ಲ, ಅದೇ ವೇದಿಕೆಯಲ್ಲಿ ಬೆಂಗಳೂರಿನಿಂದ ಆಗಮಿಸಿದ್ದ ಪ್ರಖ್ಯಾತ ಚಲನಚಿತ್ರ ಗಾಯಕರು, ಖ್ಯಾತ ನಿರೂಪಕರು ಸೇರಿದಂತೆ ದೊಡ್ಡ ದೊಡ್ಡ ಕಲಾವಿದರಿಗೆ ಅಂದೇ ಹಣ ನೀಡಲಾಗಿದೆ. ಆದರೆ ಸ್ಥಳೀಯ ಕಲಾವಿದರಿಗೆ ಮಾತ್ರ 8 ತಿಂಗಳಿಂದ ಸತಾಯಿಸುತ್ತಿರುವುದು ಯಾವ ನ್ಯಾಯ ನೀವೇ ಹೇಳಿ ಎನ್ನುತ್ತಾರೆ ಬಡ ಕಲಾವಿದರು.

ಬೇರೆ ಜಿಲ್ಲೆಯವರೂ ಪರದಾಟ: ಕರ್ನಾಟಕ ಸಂಭ್ರಮದ-50ರ ಕಾರ್ಯಕ್ರಮದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ ಭಾಗಿಯಾಗಿದ್ದ ಅದ್ಧೂರಿ ಮೆರವವಣಿಗೆಯಲ್ಲಿ ದೂರದ ಮಂಡ್ಯ, ಮೈಸೂರು, ಚಿಕ್ಕಮಗಳೂರು, ಚಾಮರಾಜನಗರ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪೂಜಾ ಕುಣಿತ, ಪಟ ಕುಣಿತ, ಕೊಂಬು ಕಹಳೆ, ಮಹಿಳಾ ವೀರಗಾಸೆ, ನಗಾರಿ, ನಂದಿಧ್ವಜ, ಗೊರವರ ಕುಣಿತ, ನಂದಿಕೋಲು, ಕೀಲುಕುದುರೆ, ಕರಡಿ ಮಜಲು, ಡೊಳ್ಳು ಕುಣಿತ, ಜಾಂಜ್ ಮೇಳ ಸೇರಿದಂತೆ 25 ಕ್ಕೂ ಹೆಚ್ಚು ಅನ್ಯ ಜಿಲ್ಲೆಗಳ ಕಲಾ ತಂಡಗಳ ಕಲಾವಿದರಿಗೂ ಗೌರವ ಧನ ನೀಡಿಲ್ಲ, ಹಾಗಾಗಿ ಅವರೆಲ್ಲ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ.

ಕಳೆದ 8 ತಿಂಗಳಿಂದ ಕರ್ನಾಟಕ ಸಂಭ್ರಮ ಕಾರ್ಯಕ್ರಮದ ಗೌರವಧನ ಬರುತ್ತದೆ ಎಂದು ಕಾಯ್ದು ಕಾಯ್ದು ಸಾಕಾಗಿದೆ. ಜಿಲ್ಲಾಡಳಿತ, ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು ಎಂದು ಕಲಾವಿದ ಶಿವಪ್ಪ ಭಜಂತ್ರಿ ತಿಳಿಸಿದ್ದಾರೆ.

ಕರ್ನಾಟಕ ಸಂಭ್ರಮ-50ರ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಕಲಾವಿದರಿಗೆ ಗೌರವಧನ ವಿತರಿಸಿಲ್ಲ. ಈ ಕುರಿತು ಇಲಾಖೆಗೆ ಪತ್ರ ಬರೆಯಲಾಗಿದೆ, ಬಿಡುಗಡೆಯಾದ ತಕ್ಷಣ ಕಲಾವಿದರ ಖಾತೆಗೆ ಜಮೆ ಮಾಡಲಾಗುವುದು ಎಂದು ಸಹಾಯಕ, ನಿರ್ದೇಶಕ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧಿಕಾರಿ ವೀರಯ್ಯಸ್ವಾಮಿ ಬಿ ಹೇಳಿದ್ದಾರೆ.