ಸಾರಾಂಶ
ಬ್ಯಾಡಗಿ: ಸಾರ್ವಜನಿಕರ ಉಪಯೋಗಕ್ಕೆ ಶೀಘ್ರದಲ್ಲೆ ರು. 10 ಕೋಟಿ ವೆಚ್ಚದಲ್ಲಿ ಪಟ್ಟಣದಲ್ಲಿ ಸುಸಜ್ಜಿತವಾದ ನೂತನ ಬಸ್ ನಿಲ್ದಾಣ (ಹೈಟೆಕ್ ಬಸ್ ಟರ್ಮಿನಲ್) ನಿರ್ಮಿಸುವುದಾಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.
ತಾಲೂಕು ಪಂಚಾಯತ್ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಾರಿಗೆ ಘಟಕದ ಕುರಿತು ಚರ್ಚೆ ಸಂದರ್ಭದಲ್ಲಿ ಮಾತನಾಡಿದ ಅವರು, ಈಗಿರುವ ಬಸ್ ನಿಲ್ದಾಣದಲ್ಲಿ ಕೇವಲ ನಾಲ್ಕೈದು ಬಸ್‌ಗಳು ನಿಲ್ಲಲು ಸಾಧ್ಯವಾಗುತ್ತದೆ. ನೂತನ ಬಸ್ ನಿಲ್ದಾಣಕ್ಕೆ ಜನರಿಂದ ಬೇಡಿಕೆಯಿದ್ದು, ಜಿ.ಪಂ. ಎಂಜಿನಿಯರಿಂಗ್ ಕಟ್ಟಡವನ್ನು ತಹಸೀಲ್ದಾರ್ ಕಚೇರಿ ಆವರಣಕ್ಕೆ ಸ್ಥಳಾಂತರಿಸಿ ಸದರಿ ಸ್ಥಳದಲ್ಲಿಯೇ ನೂತನ ಬಸ್ ನಿಲ್ದಾಣ (ಹೈಟೆಕ್ ಟರ್ಮಿನಲ್) ನಿರ್ಮಿಸುವುದಾಗಿ ತಿಳಿಸಿದರು.ಅಗಲೀಕರಣಕ್ಕೆ ಕೈಜೋಡಿಸುತ್ತಿಲ್ಲ: ಅಂತಾರಾಷ್ಟ್ರೀಯ ಮಾರುಕಟ್ಟೆ ಹೊಂದಿರುವ ಬ್ಯಾಡಗಿ ಪಟ್ಟಣದಲ್ಲಿ ಸುಂದರವಾದ ಬಸ್ ನಿಲ್ದಾಣ ಅವಶ್ಯವಿದೆ ಆದರೆ ಮುಖ್ಯರಸ್ತೆಯಲ್ಲಿನ ವ್ಯಾಪಾರಸ್ಥರು ಅಗಲೀಕರಣಕ್ಕೆ ನಮ್ಮೊಂದಿಗೆ ಕೈಜೋಡಿಸುತ್ತಿಲ್ಲ, ಇದರಿಂದ ಬಸ್‌ಗಳ ಸಂಚಾರಕ್ಕೆ ಬಹಳಷ್ಟು ಅನಾನುಕೂಲವಾಗಿದೆ. ತಾಲೂಕು ಮಟ್ಟದ ಎಲ್ಲ ಕಚೇರಿಗಳು ಬಸ್ ನಿಲ್ದಾಣಕ್ಕೆ ಹತ್ತಿರ ಆಗುವುದರಿಂದ ಗ್ರಾಮೀಣ ಜನರಿಗೆ ಅನುಕೂಲವಾಗಲಿದೆ. ವಿದ್ಯಾರ್ಥಿಗಳು ಮತ್ತು ಗ್ರಾಮೀಣ ಜನರ ಅನುಕೂಲಕ್ಕಾಗಿ ಮೊದಲಿದ್ದ ಬಸ್ ನಿಲ್ದಾಣವನ್ನೂ ಸಹ ಬಳಸಿಕೊಳ್ಳಲಾಗುವುದು ಎಂದು ತಿಳಿಸಿದರು.
ಇನ್ನಷ್ಟು ಎಕ್ಸಪ್ರೆಸ್ ಬಸ್: ಎಕ್ಸಪ್ರೆಸ್ ಬಸ್‌ಗಳು ಮುಖ್ಯರಸ್ತೆಯಲ್ಲಿ ದಾಟಲು ಹರಸಾಹಸಪಡುತ್ತಿದ್ದು ವಿಳಂಬವಾಗಿ ಸಾಗುತ್ತಿವೆ. ಪಟ್ಟಣದ ಹೊರವಲಯದಲ್ಲಿ ಬಸ್‌ನಿಲ್ದಾಣ ಮಾಡುವುದರಿಂದ ಬೆಂಗಳೂರಿನಿಂದ ಹುಬ್ಬಳ್ಳಿ ಮತ್ತು ಹುಬ್ಬಳಿಯಿಂದ ಬೆಂಗಳೂರು ಕಡೆಗೆ ಸಂಚರಿಸುವವರಿಗೆ ಕಾಕೋಳ ಹಾಗೂ ಮೋಟೆಬೆನ್ನೂರ ಮೂಲಕ ಇನ್ನಷ್ಟು ಎಕ್ಸಪ್ರೆಸ್ ಬಸ್‌ಗಳನ್ನು ಬ್ಯಾಡಗಿ ಪಟ್ಟಣಕ್ಕೆ ಬಂದು ತೆರಳುವಂತೆ ಮಾಡುವುದಾಗಿ ತಿಳಿಸಿದರು.ಡೆಂಘೀ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ: ಡೆಂಘೀ ಜ್ವರದ ಬಗ್ಗೆ ಯಾವುದೇ ಅಧಿಕಾರಿಗಳು ಬೇಜವಾಬ್ದಾರಿ ತೋರಿದರೇ ಕ್ರಮ ಅನಿವಾರ್ಯ, ಡೆಂಘೀ ಜ್ವರದ ಕುರಿತು ಯದ್ಧೋಪಾದಿಯಲ್ಲಿ ಕೆಲಸ ನಿರ್ವಹಿಸಬೇಕು. ಸದರಿ ವಿಷಯದಲ್ಲಿ ತಜ್ಞ ವೈದ್ಯರು ಅದರಲ್ಲೂ ಫಿಜಿಸಿಯನ್‌ಗಳು ಅನಗತ್ಯವಾಗಿ ರಜೆಗೆ ತೆರಳದೇ ಜನರ ಜೀವಕ್ಕೆ ಹಾನಿಯಾಗದಂತೆ ಎಚ್ಚರಿಕೆ ವಹಿಸಬೇಕು, ಸ್ಥಳೀಯ ಸಂಸ್ಥೆಯ ಅಧಿಕಾರಿಗಳು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸುವಂತೆ ಸಲಹೆ ನೀಡಿದರು.
ಎಪಿಎಂಸಿ ಪ್ರಾಂಗಣಕ್ಕೆ ಕಲುಷಿತ ನೀರು: ಸ್ಥಳೀಯ ಎಪಿಎಂಸಿ ಮಾರುಕಟ್ಟೆ ಪ್ರಾಂಗಣಕ್ಕೆ ಕೋಳೂರು ಕ್ಯಾಂಪ್ ಸೇರಿದಂತೆ ಇನ್ನಿತರ ಕಡೆಗಳಿಂದ ಚರಂಡಿ ನೀರು ಪ್ರಾಂಗಣಕ್ಕೆ ನುಗ್ಗುತ್ತಿದ್ದು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ಕಪ್ಪುಚುಕ್ಕೆಯಂತಾಗಿದೆ. ಕೂಡಲೇ ಯುಜಿಡಿ ಹಾಗೂ ಪುರಸಭೆ ಅಧಿಕಾರಿಗಳು ಪ್ರಾಂಗಣಕ್ಕೆ ಬರುವಂತಹ ಕಲುಷಿತ ನೀರನ್ನು ಸ್ಥಗಿತಗೊಳಿಸುವಂತೆ ತಾಕೀತು ಮಾಡಿದರು.ಸೋಲಾರ ಬೇಡ ವಿದ್ಯುತ್ ಕೊಡಿ: ಕೊಳವೆಬಾವಿ ಹಾಕಿಸಿಕೊಂಡಿರುವ ರೈತರಿಗೆ ಕೂಡಲೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಿ ಕೊಡಿ, ನಿಯಮದಂತೆ ಸೋಲಾರ್ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲಾಗಿದೆ ಆದರೆ, ಸುಮಾರು 500 ರಿಂದ 600 ಅಡಿಗಳಷ್ಟು ಆಳಕ್ಕೆ ಬೋರವೆಲ್ ಕೊರೆಸಿದ್ದರಿಂದ ನಮ್ಮಲ್ಲಿ ಸದರಿ ಯೋಜನೆ ಯಶಸ್ವಿಯಾಗಲು ಸಾಧ್ಯವಿಲ್ಲ, ಅರ್ಜಿ ಸಲ್ಲಿಸಿದ ಎಲ್ಲ ರೈತರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ತಾಕೀತು ಮಾಡಿದರು.
ಸಭೆಯಲ್ಲಿ ಉಪಸ್ಥಿತರಿದ್ದ ರೇಷ್ಮೆ ಇಲಾಖೆಯ ಪ್ರಭಾರಿ ಅಧಿಕಾರಿ ಎಸ್.ಜಿ.ಅಂಗಡಿ, ಇಲಾಖೆಗೆ ಸಿಬ್ಬಂದಿಗಳ ಕೊರತೆಯಿಂದ ನರಳುತ್ತಿದೆ, ಕೆಲಸ ನಿರ್ವಹಿಸಲು ಸಿಬ್ಬಂದಿಗಳಿಲ್ಲ ಎರಡ್ಮೂರು ತಾಲೂಕುಗಳಿಗೆ ಒಬ್ಬರೇ ಅಧಿಕಾರಿಗಳಿದ್ದಾರೆ. ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನುವಾಗುತ್ತಿಲ್ಲ ಎಂದು ಮನವಿ ಮಾಡಿದರು.ಗಮನಕ್ಕೆ ತಂದು ಲ್ಯಾಪಟಾಪ್ ಕೊಡಿ: ಕಾರ್ಮಿಕ ಇಲಾಖೆಯ ಚರ್ಚೆಯ ಸಂದರ್ಭದಲ್ಲಿ ಮಾತನಾಡಿದ ಶಾಸಕರು, 150 ಫಲಾನುಭವಿಗಳಿಗೆ ಲ್ಯಾಪಟಾಪ್ ಬಂದಿವೆ. ಆದರೆ ಇನ್ನೂ ಹಂಚಿಕೆಯಾಗಿಲ್ಲ, ವಿಳಂಬಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು. ಇಲಾಖೆಯ ಕಾರ್ಯವೈಖರಿ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಡುತ್ತಿದ್ದು, ನನ್ನ ಗಮನಕ್ಕೆ ತಾರದೇ ಏನೊಂದು ವಿತರಿಸದಂತೆ ಎಚ್ಚರಿಕೆ ನೀಡಿದರು.
ವೇದಿಕೆಯಲ್ಲಿ ತಹಸೀಲ್ದಾರ್ ಫೀರೋಜ್ ಶಾ ಸೋಮನಕಟ್ಟಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಚನ್ನಬಸಪ್ಪ ಹುಲ್ಲತ್ತಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಮರಡೆಪ್ಪ ಹೆಡಿಯಾಲ, ಅಕ್ಷರ ದಾಸೋಹಾಧಿಕಾರಿ ಎನ್. ತಿಮ್ಮಾರೆಡ್ಡಿ, ಮುಖ್ಯಾಧಿಕಾರಿ ವಿನಯಕುಮಾರ ಹಾಗೂ ರಾಣಿಬೆನ್ನೂರ, ಹಾವೇರಿ ತಾಲೂಕು ಪಂಚಾಯತ್ ಇಓ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಇದ್ದರು.