ಅನಾರೋಗ್ಯ ಕಾರಣ ಕಳೆದ ಬುಧವಾರ ಕುವೆಂಪು ವಿವಿ ಆವರಣದಲ್ಲಿ ಹಮ್ಮಿಕೊಂಡಿದ್ದ 35ನೇ ಘಟಿಕೋತ್ಸವಕ್ಕೆ ಗೈರಾಗಿದ್ದ ಡಾಕ್ಟರೇಟ್ ಪುರಸ್ಕೃತರಾದ ಕೋಣಂದೂರು ಲಿಂಗಪ್ಪ ಅವರ ಮನೆಗೆ ಶುಕ್ರವಾರ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ನೇತೃತ್ವದಲ್ಲಿ ವಿಶ್ವವಿದ್ಯಾಲಯದ ಕುಲಪತಿಗಳು, ಕುಲಸಚಿವರು, ಸಿಂಡಿಕೇಟ್ ಸದಸ್ಯರು, ಇತರೆ ಅಧಿಕಾರಿಗಳು ಶುಕ್ರವಾರ ಭೇಟಿ ನೀಡಿ ಕುವೆಂಪು ವಿಶ್ವವಿದ್ಯಾಲಯದ 35ನೇ ಘಟಿಕೋತ್ಸವದಲ್ಲಿ ಘೋಷಿಸಲಾದ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಈ ಸಂದರ್ಭದಲ್ಲಿ ಸಚಿವ ಮಧುಬಂಗಾರಪ್ಪ ಮಾತನಾಡಿ, ತಮ್ಮಂತಹ ಹಿರಿಯರಿಗೆ ಡಾಕ್ಟರೇಟ್ ಲಭಿಸಿರುವುದು ಅತ್ಯಂತ ಸಂತಸದ ವಿಷಯ. ನಿಮ್ಮನ್ನು ಭೇಟಿ ಮಾಡಿ ಮಾತನಾಡುತ್ತಿರುವುದು ನಮ್ಮ ಪುಣ್ಯ ಎಂದರು. ಇದೇ ವೇಳೆ ತಮ್ಮ ತಂದೆ ಮಾಜಿ ಮುಖ್ಯಮಂತ್ರಿ ಬಂಗಾರಪ್ಪನವರ ರಾಜಕೀಯ ಜೀವನದ ಘಟನೆಯೊಂದನ್ನು ಸ್ಮರಿಸಿಕೊಂಡು, ಹಿರಿಯರೊಂದಿಗೆ ಹಂಚಿಕೊಂಡರು.

ನನ್ನ ತಂದೆ ಬಂಗಾರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮೈಸೂರಿನಲ್ಲಿ ಕಾರ್ಯಕ್ರಮವೊಂದನ್ನು ಆಯೋಜಿಸಲಾಗಿತ್ತು. ಆ ಸಂದರ್ಭದಲ್ಲಿ ಕುವೆಂಪುರವರನ್ನು ಭೇಟಿಯಾಗಿದ್ದರು. ಆ ವೇಳೆ ಕುವೆಂಪುರವರು ಕುಪ್ಪಳಿಯ ತಮ್ಮ ಮನೆಯನ್ನು ನೋಡಬೇಕೆಂಬ ಇಂಗಿತ ವ್ಯಕ್ತಪಡಿಸಿದಾಗ ಬಂಗಾರಪ್ಪನವರು ಖುದ್ದಾಗಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿ, ಅಂದಿನ ಸಚಿವರಾಗಿದ್ದ ಮಲ್ಲಿಕಾರ್ಜುನಯ್ಯ ಹಾಗೂ ಹಾಗೂ ವೈದ್ಯರ ತಂಡದೊಂದಿಗೆ ಕುವೆಂಪುರವರ ಮನೆ ತೋರಿಸಿ, ಅವರನ್ನು ಗೌರವದಿಂದ ಕರೆತಂದಿದ್ದರು ಎಂದು ಮಧು ಬಂಗಾರಪ್ಪ ನೆನಪಿಸಿಕೊಂಡರು. ಅಂದಿನ ದಿನಗಳಲ್ಲಿ ಇದ್ದಂತಹ ಬದ್ಧತೆ ಮತ್ತು ಹಿರಿಯರ ಬಗ್ಗೆ ಇದ್ದ ಗೌರವ ಇಂದು ಮಾದರಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಇದೇ ವೇಳೆ ಕೋಣಂದೂರು ಲಿಂಗಪ್ಪನವರು ಶಿಕ್ಷಣ ವ್ಯವಸ್ಥೆ, ಫಲಿತಾಂಶದ ಬಗ್ಗೆ ವಿಚಾರಿಸಿದರು. ಸಚಿವರು ಪ್ರತಿಕ್ರಿಯಿಸಿ, ರಾಜ್ಯದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಶೇ. 94.10 ಫಲಿತಾಂಶ ಪಡೆಯುವ ಮೂಲಕ ಈ ಬಾರಿ ಐತಿಹಾಸಿಕ ಸಾಧನೆ ದಾಖಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿ, ಹಿಂದೆ ಈ ಪ್ರಮಾಣವು ಶೇ. 70-80 ರಷ್ಟಿರುತ್ತಿತ್ತು. ಪೂರಕ ಪರೀಕ್ಷೆಯ ಬದಲಾಗಿ ವರ್ಷಕ್ಕೆ ಮೂರು ಪರೀಕ್ಷೆಗಳನ್ನು ನಡೆಸುವ ಸರ್ಕಾರದ ಹೊಸ ನೀತಿಯು ವಿದ್ಯಾರ್ಥಿಗಳಿಗೆ ವರದಾನವಾಗಿದೆ. ಪರೀಕ್ಷೆ ಮುಗಿದ 20 ದಿನಗಳಲ್ಲೇ ಮತ್ತೊಂದು ಅವಕಾಶ ನೀಡುವುದರಿಂದ ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿದೆ ಎಂದರು.

ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರುವ ಮೂಲಕ ಮಕ್ಕಳ ಭವಿಷ್ಯವನ್ನು ಉಜ್ವಲಗೊಳಿಸುವುದೇ ನಮ್ಮ ಸರ್ಕಾರದ ಗುರಿ ಎಂದು ಸಚಿವರು ಈ ಸಂದರ್ಭದಲ್ಲಿ ಪುನರುಚ್ಚರಿಸಿದರು.

ಈ ವೇಳೆ ಕುವೆಂಪು ವಿಶ್ವವಿದ್ಯಾಲಯದ ಕುಲಪತಿ ಶರತ್ ಅನಂತಮೂರ್ತಿ, ಕುಲಸಚಿವ ಎನ್‌.ಹೇಮಂತ್‌, ವಿವಿ ಸಿಂಡಿಕೇಟ್ ಸದಸ್ಯರು ಇದ್ದರು.