ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ನೋವನ್ನು ಮರೆಸುವ ಶಕ್ತಿ ಸಂಗೀತಕ್ಕಿದೆ. ವಿಶ್ವಭಾಷೆ ಸಂಗೀತವನ್ನು ಅರಿತವರು ಆನಂದದಿಂದ ಇರುವರು. ಎಲ್ಲರೂ ಸಂಗೀತ ಕಲಿತು ಆಸ್ವಾದಿಸಬೇಕು ಎಂದು ಶಾಸಕ ಟಿ.ಎಸ್. ಶ್ರೀವತ್ಸ ತಿಳಿಸಿದರು.ನಗರದ ಹೂಟಗಳ್ಳಿ ಬಿ.ಎನ್. ರಾವ್ ಸಭಾಂಗಣದಲ್ಲಿ ಕಲಾಭೂಮಿ ಪ್ರತಿಷ್ಠಾನವು ಭಾನುವಾರ ಆಯೋಜಿಸಿದ್ದ ಸ್ವರ ಸಂಭ್ರಮ ರಾಜ್ಯ ಮಟ್ಟದ ಕರೋಕೆ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಾಂಸ್ಕೃತಿಕ ರಾಜಧಾನಿ ಮೈಸೂರು ಕಲಾವಿದರ ತವರೂರು. ಇದಕ್ಕೆ ಸಂಗೀತದ ಶಕ್ತಿಯೇ ಕಾರಣ ಎಂದರು.
ಸಂಗೀತ ಅಭ್ಯಾಸದಿಂದ ಆರೋಗ್ಯ ವೃದ್ಧಿಸುತ್ತದೆ. ಶಂಖನಾದ ಶ್ವಾಸಕೋಶ ಶುದ್ಧಿ ಮಾಡುತ್ತದೆ. ಜನಪದ ಶೈಲಿ ಉತ್ತಮ ಆರೋಗ್ಯಕ್ಕೆ ಸಹಕಾರಿ ವೇದಮಂತ್ರ ಮೆದುಳಿಗೆ ಶಕ್ತಿ ಹೆಚ್ಚಿಸುತ್ತದೆ. ಹಿಂದೂಸ್ತಾನಿ, ಕರ್ನಾಟಿಕ ಸಂಗೀತ ಪ್ರದರ್ಶನಕ್ಕೆ ವಿದೇಶಗಳಲ್ಲಿ ಗೌರವವಿದೆ ಎಂದು ಅವರು ಹೇಳಿದರು.ಕಟ್ಟುನಿಟ್ಟಿನ ಸಂಗೀತ ಪ್ರಕಾರದಿಂದ ಆರೋಗ್ಯ ವೃದ್ಧಿಯಾಗುತ್ತದೆ. ಮಕ್ಕಳನ್ನು ಕಡ್ಡಾಯವಾಗಿ ಸಂಗೀತ ಶಾಲೆಗೆ ಸೇರಿಸಿದರೆ ಮುಂದಿನ ಅವರ ಭವಿಷ್ಯ ಉಜ್ವಲವಾಗಿರುತ್ತದೆ. ಇಂದಿನ ಕಾಲದಲ್ಲಿ ಆಕಾಶವಾಣಿ, ದೂರದರ್ಶನದಲ್ಲಿ ಸಂಗೀತ ಕಾರ್ಯಕ್ರಮಗಳು ಜನಸಾಮಾನ್ಯರು ಅವಲಂಬಿತರಾಗಿದ್ದರು. ಅದು ಆರೋಗ್ಯದ ಮನಃಶಾಂತಿ ಹೆಚ್ಚಾಗಿ ಸಿಗುತ್ತದೆ ಎಂದು ಅವರು ತಿಳಿಸಿದರು.
ಸಂಗೀತ ನಿರ್ದೇಶಕ ಲಯ ಕೋಕಿಲ ಮಾತನಾಡಿ, ಶ್ರದ್ಧೆ ಮತ್ತು ಛಲದಿಂದ ಕಲೆಯನ್ನು ಕರಗತ ಮಾಡಿಕೊಳ್ಳಬೇಕು. ಯಾವುದೇ ಕಲೆಯ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಮುನ್ನ ಶ್ರದ್ಧೆ ಮತ್ತು ಛಲದಿಂದ ಅದನ್ನು ಕರಗತ ಮಾಡಿಕೊಳ್ಳುವ ಅವಿರತ ಪ್ರಯತ್ನ ಇರಬೇಕು ಎಂದು ಹೇಳಿದರು.ಈ ಕೊರೋಕೆ ಸ್ಪರ್ಧೆಯಲ್ಲಿ 50 ಹೆಚ್ಚು ಸ್ಪರ್ಧಿಗಳು ಭಾಗಿಯಾಗಿದ್ದರು. ಕಲಾಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆಸ್ಕರ್ ಕೃಷ್ಣ, ನಿರ್ದೇಶಕ ನಿಂಗರಾಜು, ಒಂದು ಹೆಜ್ಜೆ ರಕ್ತದಾನಿಗಳ ಬಳಗದ ಅಧ್ಯಕ್ಷ ಮಂಜು, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಎಸ್.ಇ. ಗಿರೀಶ್, ಬಿಜೆಪಿ ನಗರ ಉಪಾಧ್ಯಕ್ಷ ಜೋಗಿ ಮಂಜು, ಸಹನಾ ಗೌಡ, ಮನೋರೋಗ ತಜ್ಞೆ ಡಾ. ರೇಖಾ ಮನಶಾಂತಿ, ಉದ್ಯಮಿ ರಘುನಂದನ್, ಪ್ರಶಾಂತ್, ಮಂಜುಳಾ, ರುದ್ರೇಗೌಡ, ಶಾಲಿನಿ, ಸುಲ್ತಾನ್, ಕಾತ್ಯಾಯಿನಿ ಮೊದಲಾದವರು ಇದ್ದರು.