ಮತದಾನ ಜಾಗೃತಿಗಾಗಿ ಹಾಪ್ ಮ್ಯಾರಾಥಾನ್

| Published : Apr 17 2024, 01:15 AM IST / Updated: Apr 17 2024, 01:16 AM IST

ಸಾರಾಂಶ

ಬಾಗಲಕೋಟೆ: ಜಿಲ್ಲೆಯ ಎಲ್ಲ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತಚಲಾಯಿಸಬೇಕು. ಈ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ:

ಜಿಲ್ಲೆಯ ಎಲ್ಲ ಅರ್ಹ ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿ ಮತಚಲಾಯಿಸಬೇಕು. ಈ ಮೂಲಕ ಪ್ರಜಾಪ್ರಭುತ್ವದ ಹಬ್ಬದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಜಾನಕಿ ಕೆ.ಎಂ ಮನವಿ ಮಾಡಿದರು.ಜಿಲ್ಲಾಡಳಿತ ಭವನದ ಆವರಣದಲ್ಲಿ ಮಂಗಳವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ ಹಾಗೂ ಸ್ವೀಪ್ ಸಮಿತಿ ಆಯೋಜಿಸಿದ್ದ ಮತದಾನ ಜಾಗೃತಿಗಾಗಿ ಹಾಪ್ ಮ್ಯಾರಾಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯ ಎಲ್ಲ ಅರ್ಹ ಮತದಾರರು ಮೇ.7 ರಂದು ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು. ಪ್ರಜಾಪ್ರಭುತ್ವವನ್ನು ಸದೃಢಗೊಳಿಸಬೇಕು. ಜಿಲ್ಲಾ ಸ್ವೀಪ್ ಸಮಿತಿಯು ಮತದಾನ ಜಾಗೃತಿ ಹಾಗೂ ಅರಿವು ಮೂಡಿಸುವುದಕ್ಕಾಗಿ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಜಾಗೃತಿ ಮೂಡಿಸುತ್ತಿದೆ ಎಂದರು.ಜಿಲ್ಲಾ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಹಾಗೂ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಶಿಧರ್ ಕುರೇರ ಮಾತನಾಡಿ, ಮತದಾರರು ಮತದಾನ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡು ತಪ್ಪದೇ ಮತದಾನ ಮಾಡಬೇಕು. ವಿದ್ಯಾರ್ಥಿಗಳು ತಮ್ಮ ಕುಟುಂಬ ವರ್ಗದವರಿಗೂ ಹಾಗೂ ನೆರೆಹೊರೆಯವರಿಗೂ ಮತದಾನದ ಮಹತ್ವದ ಕುರಿತು ತಿಳಿಸುವ ಮೂಲಕ ಮತದಾನಕ್ಕೆ ಪ್ರೇರೆಪಿಸಬೇಕು. ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಜಿಲ್ಲೆಯಲ್ಲಿ ನೂರಕ್ಕೆ ನೂರರಷ್ಟು ಮತದಾನ ದಾಖಲಾಗಲು ಜಿಲ್ಲಾದ್ಯಂತ ಮತದಾನ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.ಜಿಲ್ಲಾಡಳಿತ ಭವನದಿಂದ ಆರಂಭವಾದ ಮ್ಯಾರಾಥಾನ್ ನವನಗರದ ಬಸ್ ನಿಲ್ದಾಣ, ಎಲ್ಐಸಿ ವೃತ್ತ, ನಗರಸಭೆ ಮಾರ್ಗ, ಸರ್ಕಾರಿ ಆಸ್ಪತ್ರೆ ವೃತ್ತ, ಆಸ್ಪತ್ರೆ ಹಿಂಭಾಗ, ವೇದಾಂತ ಆಫೀಸ್ ಅಟೋಮೇಶನ್ ಕ್ರಾಸ್ ಮೂಲಕ ಸಂಚರಿಸಿ, ಜಿಲ್ಲಾ ಕ್ರೀಡಾಂಗಣದಲ್ಲಿ ಮುಕ್ತಾಯವಾಯಿತು. ಮಾರ್ಗ ದುದ್ದಕ್ಕೂ ಮತದಾನ ಮಹತ್ವ ಸಾರುವ ಘೋಷಣೆಗಳನ್ನು ಕೂಗಲಾಯಿತು. ಮ್ಯಾರಾಥಾನ್‌ಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಮತದಾನದ ಪ್ರತಿಜ್ಞಾವಿಧಿ ಬೋಧಿಸಲಾಯಿತು. ಮ್ಯಾರಾಥಾನ್‌ ನಲ್ಲಿ ಭಾಗವಹಿಸಿ ವಿಜೇತರಾದ ಕ್ರೀಡಾಪಟುಗಳಿಗೆ ಪದಕ ಹಾಗೂ ಪ್ರಮಾಣ ಪತ್ರ ವಿತರಿಸಲಾಯಿತು.ಈ ಕಾರ್ಯಕ್ರಮದಲ್ಲಿ ಜಿಪಂ ಯೋಜನಾ ನಿರ್ದೇಶಕ ಶಶಿಕಾಂತ ಶಿವಪುರೆ, ಕ್ರೀಡಾ ಇಲಾಖೆ ಸಹಾಯ ನಿರ್ದೇಶಕ ಗುರುಪಾದ ಡೂಗನವರ, ಕ್ರೀಡಾಪಟುಗಳು, ವಿವಿಧ ಶಾಲಾ-ಕಾಲೇಜಿನ ವಿದ್ಯಾರ್ಥಿಗಳು, ಅಧಿಕಾರಿ ಮತ್ತು ಸಿಬ್ಬಂದಿ ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.