ಅಂಧತ್ವ ನಿವಾರಣೆಗಾಗಿ ಆಶಾಕಿರಣ ಕಾರ್ಯಕ್ರಮ

| Published : Jan 28 2024, 01:20 AM IST

ಸಾರಾಂಶ

ಜನಸಾಮಾನ್ಯರಲ್ಲಿ ಕಣ್ಣಿನ ಪರೀಕ್ಷೆ ಹಾಗೂ ಕಣ್ಣಿನ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಮಹತ್ತರ ಉದ್ದೇಶದಿಂದ ಮನೆ ಮನೆಗಳಿಗೆ ತೆರಳಿ ಆಶಾಕಿರಣ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ.

ಹೊಸದುರ್ಗ: ಜನಸಾಮಾನ್ಯರಲ್ಲಿ ಕಣ್ಣಿನ ಪರೀಕ್ಷೆ ಹಾಗೂ ಕಣ್ಣಿನ ಆರೋಗ್ಯ ಕುರಿತು ಜಾಗೃತಿ ಮೂಡಿಸುವ ಮಹತ್ತರ ಉದ್ದೇಶದಿಂದ ಮನೆ ಮನೆಗಳಿಗೆ ತೆರಳಿ ಆಶಾಕಿರಣ ಕಾರ್ಯಕ್ರಮ ಜಾರಿಗೊಳಿಸಲಾಗುತ್ತಿದೆ ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ವೀರೆಂದ್ರ ಪಾಟೀಲ್ ಹೇಳಿದರು.

ತಾಲೂಕಿನ ಕೊಂಡಾಪುರ ಗ್ರಾಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ಮತ್ತು ದೃಷ್ಟಿದೋಷ ನಿಯಂತ್ರಣಾಧಿಕಾರಿಗಳ ಕಚೇರಿ ಚಿತ್ರದುರ್ಗ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹೊಸದುರ್ಗ ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯಾದ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮ ಕೊಂಡಾಪುರ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ಆಶಾಕಿರಣ ಕಾರ್ಯಕ್ರಮದ ಬಗ್ಗೆ ಜನ ಸಮುದಾಯಕ್ಕೆ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಮೊದಲನೇ ಹಂತದಲ್ಲಿ ಜ.22ರಿಂದ ಜ.31ರವರೆಗೆ ಆಶಾ ಕಾರ್ಯಕರ್ತೆಯರು ಅಥವಾ ಆರೋಗ್ಯ ಇಲಾಖೆಯ ಸಿಬ್ಬಂದಿ ತಾಲೂಕಿನಲ್ಲಿರುವ ಎಲ್ಲಾ ಮನೆಗಳಿಗೂ ಭೇಟಿ ನೀಡಿ ಎಲ್ಲಾ ಸಾರ್ವಜನಿಕರ ಕಣ್ಣಿನ ಪರೀಕ್ಷೆ ಉಚಿತವಾಗಿ ನೆಡೆಸುವರು. ಕಣ್ಣಿನ ದೃಷ್ಟಿ ಸೇರಿದಂತೆ ವಿವಿಧ ನಿಯತಾಂಕಗಳ ಮೌಲ್ಯಮಾಪನ ನೆಡೆಸುವರು. ತಪಾಸಣೆ ವೇಳೆ ಸಮಸ್ಯೆಗಳು ಕಂಡುಬಂದಲ್ಲಿ ನೇತ್ರಾಧಿಕಾರಿಗಳಿಂದ ಫೆ.29ರಿಂದ ಮಾ.7ರವೆರೆಗೆ ತಾಲೂಕಿನ ಎಲ್ಲಾ 10 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಹಂತ ಹಂತವಾಗಿ ನಿಗದಿತ ದಿನಾಂಕಗಳಂದು ಕಣ್ಣಿನ ಪರೀಕ್ಷೆ ನೆಡೆಸಲಾಗುವುದು ಎಂದರು.

ನೇತ್ರಾಧಿಕಾರಿಗಳು ನೆಡೆಸುವ ಕಣ್ಣಿನ ಪರೀಕ್ಷೆಯಲ್ಲಿ ಸಮಸ್ಯೆ ಮತ್ತು ನ್ಯೂನ್ಯತೆ ಇರುವವರಿಗೆ ಉಚಿತ ಶಸ್ತ್ರ ಚಿಕಿತ್ಸೆ ಮತ್ತು ದೃಷ್ಟಿದೋಷವಿರುವ ಎಲ್ಲರಿಗೂ ಉಚಿತ ಕನ್ನಡಕಗಳನ್ನು ವಿತರಿಸಲಾಗುವುದು ಎಂದರು.

ಸಮುದಾಯ ಆರೋಗ್ಯ ಅಧಿಕಾರಿ ಅಶ್ವಿನಿ ಕಣ್ಣಿನ ಆರೋಗ್ಯದ ಬಗ್ಗೆ ಮಾತನಾಡಿದರು. ಸಂಘದ ಅಧ್ಯಕ್ಷೆ ಸುಧಾ ಗ್ರಾಮ ಪಂಚಾಯಿತಿ ಸದಸ್ಯರುವಹಿಸಿದ್ದರು. ಕಾರ್ಯಕ್ರಮವನ್ನು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಗಂಗಮ್ಮ ನೆಡೆಸಿಕೊಟ್ಟರು. ಆಶಾ ಕಾರ್ಯಕರ್ತೆ ಮಮತಾ, ಅಂಗನವಾಡಿ ಕೇಂದ್ರದ ಪ್ರೇಮ, ಕವಿತಾ, ಸಂಘದ ಸದಸ್ಯರು, ಸಾರ್ವಜನಿಕರು ಮತ್ತು ಮಕ್ಕಳು ಪಾಲ್ಗೊಂಡಿದ್ದರು.