ಸಾರಾಂಶ
ಕವಿತಾಳ ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠದಲ್ಲಿ ಜಾತ್ರೆಗಾಗಿ ಕೈಗೊಂಡ ಪೂರ್ವ ಸಿದ್ಧತೆಗಳನ್ನು ಶಾಸಕ ಜಿ.ಹಂಪಯ್ಯ ನಾಯಕ ಪರಿಶೀಲಿಸಿದರು.
ಕನ್ನಡಪ್ರಭ ವಾರ್ತೆ ಕವಿತಾಳ
ಉಟಕನೂರು ಅಡವಿ ಸಿದ್ದೇಶ್ವರ ಮಠದಲ್ಲಿ ಫೆ.3ರಂದು ನಡೆಯುವ ಜಾತ್ರೆಗೆ ಸುತ್ತಮುತ್ತಲಿನ ಹಳ್ಳಿಗಳಿಂದ ಸಾವಿರಾರು ಭಕ್ತರು ಆಗಮಿಸಲಿದ್ದು ಅವರಿಗೆ ಸೂಕ್ತ ಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಶಾಸಕ ಜಿ.ಹಂಪಯ್ಯ ನಾಯಕ ಹೇಳಿದರು.ಸಮೀಪದ ಉಟಕನೂರು ಅಡವಿ ಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಜಾತ್ರೆಗಾಗಿ ಕೈಗೊಂಡ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿ ಮಾತನಾಡಿದ ಅವರು, ಸುತ್ತಮುತ್ತ ಭತ್ತದ ಗದ್ದೆಗಳಿರುವುದರಿಂದ ಜಾಗದ ಕೊರತೆ ಇದೆ. ಸದ್ಯ ಬೇಸಿಗೆ, ಬೆಳೆ ಇಲ್ಲದ ಕಾರಣ ಭತ್ತದ ಗದ್ದೆಗಳನ್ನು ಸ್ವಚ್ಛಗೊಳಿಸಿ ಬಳಸಿಕೊಳ್ಳಬಹುದು. ಕುಡಿಯುವ ನೀರು, ವಿದ್ಯುತ್ ಸರಬರಾಜು ಮತ್ತು ಮಠದ ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡುವ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಜಾತ್ರೆಗೆ ಬರುವ ಭಕ್ತರಿಗೆ ತೊಂದರೆಯಾಗದಂತೆ ಅಗತ್ಯ ಸೌಲಭ್ಯ ಒದಗಿಸಲಾಗುವುದು ಎಂದರು.
ಮಠದ ಪೀಠಾಧಿಪತಿ ಮರಿಬಸವರಾಜ ದೇಶೀಕೇಂದ್ರ ಸ್ವಾಮೀಜಿ ಮಾತನಾಡಿ. ಜ.31ರಂದು ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಯುವಕರು ಸ್ವಯಂ ಪರೇರಣೆಯಿಂದ ರಕ್ತದಾನ ಮಾಡಬೇಕು ಎಂದರು.ಮುಖಂಡರಾದ ಬಸವರಾಜಪ್ಪಗೌಡ ಹರ್ವಾಪುರ, ಮೃತ್ಯುಂಜಯ ಸ್ವಾಮಿ ಗೂಗೆಬಾಳ, ದೇವೇಂದ್ರಪ್ಪ ಹಣಿಗಿ, ವೀರನಗೌಡ, ಶಿವರಾಜ ಉದ್ಭಾಳ, ಮಹಾಂತೇಶ ತೊಪ್ಪಲದೊಡ್ಡಿ, ಮಲ್ಲಯ್ಯ ಪೂಜಾರಿ ಶೇಖರಪ್ಪ ಪೂಜಾರಿ, ಸಿದ್ರಾಮೇಶ್ವರ, ರಾಮನಗೌಡ, ರೆಡ್ಡಿ ಸಾಹುಕಾರ ಇದ್ದರು.