ಸಾರಾಂಶ
ಚಿತ್ರದುರ್ಗ: ರಾಜ್ಯ ಸರ್ಕಾರದ ರೈತ ವಿರೋಧಿ ಕೃಷಿ ಕಾಯಿದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ನಗರದಲ್ಲಿ ಬೈಕ್ ರ್‍ಯಾಲಿ ನಡೆಸಿ ಆಕ್ರೋಶ ಹೊರಹಾಕಿದರು.
ಭಾರತೀಯ ಕಿಸಾನ್ ಯೂನಿಯನ್ ಕರೆಯ ಮೇರೆಗೆ ಕನಕ ವೃತ್ತದಿಂದ ಬೈಕ್ ರ್‍ಯಾಲಿ ಹೊರಟ ರೈತರು ಮಾರ್ಗದುದ್ದಕ್ಕೂ ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ದೆಹಲಿಯಲ್ಲಿ 2 ಲಕ್ಷ ಟ್ರಾಕ್ಟರ್‌ಗಳು ಪೆರೇಡ್ ಮಾಡಿದ್ದಕ್ಕೆ ಮಣಿದು ಕೇಂದ್ರ ಸರ್ಕಾರ 3 ಕೃಷಿ ವಿರೋಧಿ ಕಾಯಿದೆಗಳನ್ನು ಹಿಂದಕ್ಕೆ ಪಡೆಯಿತು. ಚಳುವಳಿಯಲ್ಲಿ ಪ್ರಾಣತೆತ್ತ 501 ರೈತರ ಸ್ಮಾರಕಗಳನ್ನು ನಿರ್ಮಿಸಿ ಕುಟುಂಬದವರಿಗೆ ಪರಿಹಾರ ನೀಡಬೇಕು. ವಿದ್ಯುತ್ ವಲಯ ಖಾಸಗಿಕರಣಗೊಳಿಸಿ ಮೀಟರ್ ಅಳವಡಿಸುವ ಕ್ರಮವನ್ನು ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು.
ಚಿತ್ರದುರ್ಗ ಜಿಲ್ಲೆಗೆ ಭದ್ರಾ ಮೇಲ್ದಂಡೆ ಯೋಜನೆಗಾಗಿ 5300 ಕೋಟಿ ರು.ಗಳನ್ನು ಘೋಷಿಸಿರುವ ಕೇಂದ್ರ ಸರ್ಕಾರ ಇದುವರೆಗೂ ಹಣ ಬಿಡುಗಡೆಗೊಳಿಸಿಲ್ಲ. ಕೂಡಲೇ ಹಣ ನೀಡಿ ತ್ವರಿತ ಗತಿಯಲ್ಲಿ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯ ರೈತರ ಜಮೀನುಗಳಿಗೆ ನೀರು ಹರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸುವುದಕ್ಕಾಗಿ ಫೆ.5ರಿಂದ ಜಿಲ್ಲಾ ಪಂಚಾಯಿತಿಯಲ್ಲಿರುವ ಕೇಂದ್ರ ಮಂತ್ರಿ ಎ.ನಾರಾಯಣಸ್ವಾಮಿ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದೆಂದು ಈಚಘಟ್ಟದ ಸಿದ್ದವೀರಪ್ಪ ಎಚ್ಚರಿಸಿದರು.13 ತಿಂಗಳುಗಳ ಕಾಲ ದೆಹಲಿಯಲ್ಲಿ ಚಳುವಳಿ ನಡೆಸಿದ ರೈತರ ಮೇಲೆ ದಾಖಲಿಸಿರುವ ಕೇಸ್‌ಗಳನ್ನು ವಾಪಸ್ ಪಡೆಯುವುದು ಒಳಗೊಂಡಂತೆ ಇನ್ನು ಮುಂತಾದ ವಿಚಾರಗಳ ಕುರಿತು ಭರವಸೆ ನೀಡಿದ್ದ ಕೇಂದ್ರ ಸರ್ಕಾರ ಕೊಟ್ಟ ಮಾತನ್ನು ಉಳಿಸಿಕೊಳ್ಳುತ್ತಿಲ್ಲ. ಬರಗಾಲದಿಂದ ರೈತರು ತತ್ತರಿಸಿ ಕೆಲಸ ಅರಸಿ ಗುಳೆ ಹೋಗುತ್ತಿದ್ದಾರೆ. ಫಸಲ್ ಭೀಮ ಯೋಜನೆ ರೈತರಿಗೆ ಉಪಯೋಗವಾಗದೆ ಬಂಡವಾಳಶಾಹಿ ಕಂಪನಿಗಳಿಗೆ ಲಾಭವಾಗುತ್ತಿದೆ. ರಸಗೊಬ್ಬರ ಸಬ್ಸಿಡಿ ಕಡಿತಗೊಳಿಸಿ ಬೆಲೆಯನ್ನು ಏರಿಸಿದೆ. ಸರ್ಕಾರದ ಇಂತಹ ಧೋರಣೆಯಿಂದ ಸಾಲದ ಬಾಧೆಗೆ ಸಿಲುಕಿರುವ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆಂದು ಈಚಘಟ್ಟದ ಸಿದ್ದವೀರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾಧ್ಯಕ್ಷ ಡಿ.ಎಸ್.ಮಲ್ಲಿಕಾರ್ಜುನ, ಪ್ರಧಾನ ಕಾರ್ಯದರ್ಶಿ ಆರ್.ಬಿ.ನಿಲಿಂಗಪ್ಪ, ಕಾರ್ಯದರ್ಶಿ ಅಪ್ಪರಸನಹಳ್ಳಿ ಬಸವರಾಜಪ್ಪ, ರಾಮರೆಡ್ಡಿ, ರೈತ ಮುಖಂಡರುಗಳಾದ ಸತೀಶ್, ಬೋರೇಶ್, ಮಂಜುನಾಥ್, ಕೆ.ಟಿ.ತಿಪ್ಪೇಸ್ವಾಮಿ ಬೈಕ್‍ರ್ಯಾಲಿಯಲ್ಲಿ ಭಾಗವಹಿಸಿದ್ದರು.