ಸಾರಾಂಶ
ರಾಹುಲ್‌ಗಾಂಧಿ ಮಾಡಿರುವ ಆರೋಪದಲ್ಲಿ ಸತ್ಯವಿದೆ. ಅದಕ್ಕಾಗಿ ಎಐಸಿಸಿಯ ಕರೆಯ ಮೇರೆಗೆ ಆಗಸ್ಟ್ 5 ರಂದು ಕರೆದಿರುವ ಪ್ರತಿಭಟನೆಯಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ಅವರ ಕೈ ಬಲಪಡಿಸಬೇಕಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ತುಮಕೂರು : ಲೋಕಸಭೆ ವಿರೋಧ ಪಕ್ಷದ ನಾಯಕರಾಗಿರುವ ರಾಹುಲ್‌ಗಾಂಧಿ ಮಾಡಿರುವ ಆರೋಪದಲ್ಲಿ ಸತ್ಯವಿದೆ. ಅದಕ್ಕಾಗಿ ಎಐಸಿಸಿಯ ಕರೆಯ ಮೇರೆಗೆ ಆಗಸ್ಟ್ 5 ರಂದು ಕರೆದಿರುವ ಪ್ರತಿಭಟನೆಯಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ಅವರ ಕೈ ಬಲಪಡಿಸಬೇಕಿದೆ ಎಂದು ಗೃಹ ಹಾಗೂ ತುಮಕೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ 5 ರಂದು ಬೆಂಗಳೂರಿನಲ್ಲಿ ಚುನಾವಣಾ ಆಯೋಗದ ವಿರುದ್ದ ಕರೆ ನೀಡಿರುವ ಪ್ರತಿಭಟನೆಯ ಸಂಬಂಧ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು
ಮಹಾರಾಷ್ಟ್ರ ಚುನಾವಣೆಯಲ್ಲಿ 35 ಲಕ್ಷ ಮತಗಳನ್ನು ಡಿಲೀಟ್ ಮಾಡಲಾಗಿದೆ. ಬಿಹಾರದಲ್ಲಿ 65 ಲಕ್ಷ ಹೆಸರುಗಳನ್ನು ಡಿಲೀಟ್ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲುವಂತಹ ಕಾಂಗ್ರೆಸ್ ಅಭ್ಯರ್ಥಿಗಳು ಸೋಲು ಕಾಣಲು ಇದುವೇ ಕಾರಣವಾಗಿದೆ. ಹಾಗಾಗಿ ನಾವೆಲ್ಲರೂ ಎಚ್ಚೆತ್ತುಕೊಳ್ಳದಿದ್ದರೆ ಈ ಮತಗಳ್ಳತನ ಮುಂದುವರೆಯಲಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನಾವೆಲ್ಲರೂ ಪ್ರತಿಭಟನೆಗೆ ಇಳಿಯಬೇಕಾಗಿದೆ ಎಂದರು.
ಚುನಾವಣೆಗಳಲ್ಲಿ ಮತಗಳ್ಳತನ ಆಗಿದೆ ಎಂಬುದಕ್ಕೆ ಹಲವಾರು ಸಾಕ್ಷಗಳು ನಮ್ಮ ಬಳಿ ಇವೆ. ಇವಿಎಂ ಯಂತ್ರಗಳ ಟ್ಯಾಪರಿಂಗ್ ಮಾಡಲಾಗಿದೆ, ಮತಎಣಿಕೆಯಲ್ಲಿಯೂ ಮೋಸ ಮಾಡಲಾಗಿದೆ. 2014 ರ ಚುನಾವಣೆಯಿಂದಲೂ ಇದರ ವಿರುದ್ದ ಧ್ವನಿ ಎತ್ತುತ್ತಾ ಬಂದಿದ್ದರು. ಚುನಾವಣಾ ಆಯೋಗ ನಮ್ಮ ಮನವಿಗೆ ಕಿವಿಗೊಡುತ್ತಿಲ್ಲ. ಕಳೆದ ಬಿಬಿಎಂಪಿ ಚುನಾವಣೆಯ ವೇಳೆ ಬೆಂಗಳೂರು ನಗರದಲ್ಲಿ 16.5 ಲಕ್ಷ ಮತ ಡಿಲೀಟ್ ಮಾಡಿ, ಬೇಕಾಗಿದ್ದವರನ್ನು ಸೇರಿಸಿದ್ದಾರೆ.
ಮತದಾರರನ್ನು ಒಂದು ವಾರ್ಡ್ ನಿಂದ ಇನ್ನೊಂದು ವಾರ್ಡ್ ಗೆ ವರ್ಗಾಯಿಸಿ, ಮತದಾನ ಮಾಡದಂತೆ ತಡೆಯುವ ಸಂಚು ರೂಪಿಸಲಾಗುತ್ತಿದೆ ಎಂದರು. ಗ್ಯಾರೆಂಟಿ ಯೋಜನೆಗಳಿಂದ ಜನರು ನಂಬಿಕೆ ಉಳಿಸಿಕೊಳ್ಳಬೇಕಿದೆ. ಗ್ಯಾರೆಂಟಿ ಯೋಜನೆ ಜನರು ನಂಬಿರಲಿಲ್ಲ, ಅಧಿಕಾರಕ್ಕೆ ಬಂದ ನಂತರ ಜನರು ಪಕ್ಷದ ಭರವಸೆ ನಂಬಿದ್ದಾರೆ. ಗ್ಯಾರಂಟಿಗಳಿಂದ ಜನರ ಆರ್ಥಿಕ ಮಟ್ಟ ಹೆಚ್ಚಾಗಿದೆ, ದೇಶದಲ್ಲಿಯೇ ರಾಜ್ಯತಲಾ ಆದಾಯದಲ್ಲಿ ಮೊದಲ ಸ್ಥಾನ ತಲುಪಿದೆ. ಮುಂದಿನ ಬಜೆಟ್ ನಂತರ ಆರ್ಥಿಕ ತೊಂದರೆಗಳು ದೂರವಾಗಲಿದೆ, ಗ್ಯಾರೆಂಟಿ ಜೊತೆ ಅಭಿವೃದ್ಧಿ ಕಾಮಗಾರಿಗಳು ನಿರಂತರವಾಗಿ ನಡೆಯಲಿದೆ ಎಂದು ತಿಳಿಸಿದರು.
ಪಕ್ಷದ ಸಂಘಟನೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯಕರ್ತರ ಸಭೆಗಳನ್ನು ನಿರಂತರವಾಗಿ ನಡೆಸಬೇಕು, ಬ್ಲಾಕ್ ಕಾಂಗ್ರೆಸ್, ಜಿಲ್ಲಾ ಕಾಂಗ್ರೆಸ್ ಸಕ್ರಿಯವಾಗಬೇಕು, ಪಕ್ಷದ ಸಾಧನೆಗಳನ್ನು ಜನರಿಗೆ ತಲುಪಿಸಬೇಕು, ಕಾಂಗ್ರೆಸ್ ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡಬೇಕು. ತುಮಕೂರಿನ ಅಭಿವೃದ್ಧಿಗೆ ಅನುದಾನ ನೀಡಬೇಕು ಎಂದು ಮುಖ್ಯಮಂತ್ರಿಗಳಿಗೆ ಪದೆ ಪದೇ ಒತ್ತಾಯ ಮಾಡಲಾಗಿದೆ.
2025-26ನೇ ಸಾಲಿನ ಬಜೆಟ್‌ನಲ್ಲಿಯೇ ಗ್ಯಾರಂಟಿ ಯೋಜನೆಗಳ ಅನುದಾನವನ್ನು ಸೇರಿಸಿ 4 ಲಕ್ಷ ಕೋಟಿಗೂ ಅಧಿಕ ಬಜೆಟ್ ಸಿದ್ದಪಡಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಸಮಸ್ಯೆ ಉಂಟಾಗದು ಎಂಬ ಭರವಸೆಯನ್ನು ಕಾರ್ಯಕರ್ತರಿಗೆ ನೀಡಿದರು. ಮುಂದಿನ ಡಿಸೆಂಬರ್ ವೇಳೆಗೆ ಗ್ರೇಟರ್ ಬೆಂಗಳೂರಿನ ಐದು ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ.
ಗ್ರೇಟರ್ ಬೆಂಗಳೂರಿನ ರೀತಿ ತುಮಕೂರು ಮಹಾನಗರ ಪಾಲಿಕೆಯನ್ನು ವಿಸ್ತರಿಸಲು 14 ಪಂಚಾಯತಿ ಸೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಗ್ರೇಟರ್ ಬೆಂಗಳೂರು ರೀತಿ ಗ್ರೇಟರ್ ತುಮಕೂರು ಆಗಲಿದೆ.ತುಮಕೂರು ಸಹ ಬೆಂಗಳೂರಿನಂತಾಗಬೇಕು ಎಂಬುದು ನಮ್ಮಆಶಯವಾಗಿದೆ ಎಂದರು.
ಶಾಸಕ ಹಾಗೂ ಕೆ.ಎಸ್.ಆರ್.ಟಿ.ಸಿ.ಅಧ್ಯಕ್ಷ ಎಸ್.ಆರ್.ಶ್ರೀನಿವಾಸ್ ಹಾಗೂ ತುಮುಲ್ ಅಧ್ಯಕ್ಷ ಹೆಚ್.ವಿ.ವೆಂಕಟೇಶ್ ಅವರು ಗೃಹ ಸಚಿವರು ಆ.5 ರಂದು ನಡೆಯುವ ಪ್ರತಿಭಟನೆಗೆ ಜನ ಸೇರಿಸುವ ನಿಟ್ಟಿನಲ್ಲಿ ಯಾವ ರೀತಿಯ ಸೂಚನೆ ನೀಡುತ್ತಾರೆ. ಅದರಂತೆ ಕೆಲಸ ನಡೆದುಕೊಳ್ಳುವುದಾಗಿ ತಿಳಿಸಿದರು.
ಮುಖಂಡರಾದ ಆಸ್ಲಂ ಪಾಷ ಮಾಜಿ ಶಾಸಕ ಡಾ.ರಫೀಕ್‌ಅಹಮದ್, ಗಂಗಹನುಮಯ್ಯ, ಮುಖಂಡರಾದ ಇಕ್ಬಾಲ್ ಅಹಮದ್, ಕೆಪಿಸಿಸಿ ಉಪಾಧ್ಯಕ್ಷ ಮುರುಳೀಧರ ಹಾಲಪ್ಪ,ಎನ್.ಗೋವಿಂದರಾಜು ಅವರು ಸಭೆಯನ್ನುಕುರಿತು ಮಾತನಾಡಿದರು. ಅಧ್ಯಕ್ಷತೆಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಿ.ಚಂದ್ರಶೇಖರಗೌಡ ವಹಿಸಿದ್ದರು. ವೇದಿಕೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಹಾಗೂ ತುಮಕೂರು ಉಸ್ತುವಾರಿ ಅನ್ವರ್‌ಸಾಬ್, ಖಲಿಂವುಲ್ಲಾ, ಮುಂಚೂಣಿ ಘಟಕಗಳ ಅಧ್ಯಕ್ಷರಾದ ಬಿ.ಜಿ.ಲಿಂಗರಾಜು,ಸಿದ್ದಾಪುರ ರಂಗಸ್ವಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹೇಶ್, ಫೈಯಾಜ್, ಕೆಂಚಮಾರಯ್ಯ,ಪಾಲಿಕೆ ಸದಸ್ಯರಾದ ನಯಾಜ್, ಸುಜಾತ, ಭಾಗ್ಯಮ್ಮ,ಆರ್.ರಾಮಕೃಷ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.