ಸಾರಾಂಶ
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರಾ ಮಹೋತ್ಸವ ಸಮಿತಿ ಮತ್ತು ಮಂಟೇಸ್ವಾಮಿ ಹೋರಾಟ ಸಮಿತಿಯ ವತಿಯಿಂದ ಭೈರನತ್ತ ಮಂಟೇಸ್ವಾಮಿ ಕಾವ್ಯಗಳನ್ನು ಕುರಿತು ಸಂಶೋಧನೆ ಮಾಡಿ ಪಿಎಚ್‌ಡಿ ಪಡೆದ ಡಾ.ನಿಂಗಪ್ಪಂ ಮಂಟೇದರ ಹಾಗೂ ಹುತ್ತೂರು ತಂಬೂರಿ ಕಲಾವಿದ ಬಿಸಲಪ್ಪ ನಾಯಕ ಅವರನ್ನು ಸನ್ಮಾನಿಸಿ ಅಭಿನಂದಿಸಲಾಯಿತು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹದೇವ ಶಂಕನಪುರ ಮಾತನಾಡಿ, ಮಂಟೇಸ್ವಾಮಿ ಪರಂಪರೆಯ ಚಿಕ್ಕಲ್ಲೂರು ಜಾತ್ರೆ ಇತ್ತೀಚೆಗೆ ಹಲವಾರು ಸಮಸ್ಯೆಗಳನ್ನು ಎದುರುಸಿತ್ತಿದೆ. ಅದಕ್ಕೆ ಉದಾಹರಣೆ ಪಂಕ್ತಿ ಸೇವೆ ವಿಚಾರವಾಗಿ ನ್ಯಾಯಾಲಯಕ್ಕೆ ಹೋಗಿರುವುದು. ಇದಕ್ಕೆ ಪ್ರತಿವಾದಿಯಾಗಿ ನಮ್ಮ ಹೋರಾಟ ಸಮಿತಿ ಪದಾಧಿಕಾರಿಗಳು ನ್ಯಾಯಾಲಯದ ಮೊರೆ ಹೋಗಿ ಪಂಕ್ತಿ ಸೇವೆ ಪರವಾಗಿ ಮಧ್ಯಂತರ ಆದೇಶ ಪಡೆಯುವಲ್ಲಿ ಯಶಸ್ವಿಯಾಗಿದ್ದೀವಿ. ಈ ಬಾರಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಇಲಾಖೆ ನ್ಯಾಯಾಲಯದ ಆದೇಶವನ್ನು ಅನುಷ್ಠಾನಗೊಳಿಸುವುದರಲ್ಲಿ ಸಮಿತಿಯ ಕೋರಿಕೆಯನ್ನು ಆದಷ್ಟು ಮಟ್ಟಿಗೆ ಮಾನ್ಯ ಮಾಡಿದೆ. ಮುಂದಿನ ದಿನಗಳಲ್ಲಿ ಕೋರ್ಟ್ ನಲ್ಲಿ ಸಂಪೂರ್ಣವಾಗಿ ಪಂಕ್ತಿ ಸೇವೆ ಮಾಡುವುದಕ್ಕೆ ನ್ಯಾಯಾಲಯದಿಂದ ನ್ಯಾಯ ಸಿಗುವ ಭರವಸೆ ಹೊಂದಿದ್ದೇವೆ ಎಂದರು.ಉಗ್ರನರಸಿಂಹಗೌಡ್ರು ಮಾತನಾಡಿ, ಜಾತ್ರೆ ಮೊದಲು ಯಾವ ರೀತಿ ಪಾರಂಪರಿಕವಾಗಿ ನಡೆಯುತ್ತಿತ್ತು. ಅದೇ ರೀತಿ ಜಾತ್ರೆ ಆಚರಣೆ ಮಾಡುವುದಕ್ಕೆ ಮುಂದಿನ ದಿನಗಳಲ್ಲಿ ನಾವು ಹೋರಾಟ ಮಾಡುತ್ತೇವೆ. ಚಾಮರಾಜನಗರ, ಮಂಡ್ಯ , ಮೈಸೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಎಲ್ಲಾ ಕಡೆ ಇರುವಂತಹ ಮಂಟೇಸ್ವಾಮಿ ಒಕ್ಕಲಿನ ಜನರನ್ನು ಸಂಘಟಿಸಿ ನಮ್ಮ ಹೋರಾಟವನ್ನು ತೀವ್ರಗೊಳಿಸುತ್ತೇವೆ. ಈ ನಿಟ್ಟಿನಲ್ಲಿ ಎಲ್ಲಾ ತಾಲೂಕಿನಲ್ಲಿ ಸಭೆಗಳನ್ನು ನಡೆಸುತ್ತೇವೆ. ನಮ್ಮ ಸಂಘಟನೆಯನ್ನು ಇನ್ನೂ ಬಲಡಿಸುತ್ತೇವೆ. ಈವಿಷಯದಲ್ಲಿ ನಮ್ಮ ಜಿಲ್ಲೆಯ ಶಾಸಕರು, ಸಂಸದರು, ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳಿಗೂ ಮನವಿ ಮಾಡಿದ್ದು ಅವರು ಸಕಾರಾತ್ಮಕವಾಗಿ ಸ್ಪಂದಿಸಿದರೂ ಅದಕ್ಕಾಗಿ ಅವರಿಗೂ ಮತ್ತು ಜಿಲ್ಲಾಡಳಿತಕ್ಕೂ ಸಮಿತಿ ವತಿಯಿಂದ ಧನ್ಯವಾದಗಳನ್ನು ತಿಳಿಸುತ್ತೇವೆ ಎಂದರು. ಕಾರ್ಯಕ್ರಮದಲ್ಲಿ ಸಮಿತಿಯ ಕಾರ್ಯದರ್ಶಿ ಶಂಭುಲಿಂಗಸ್ವಾಮಿ, ಉಪಾಧ್ಯಕ್ಷ ಮಹದೇವ ಪ್ರಸಾದ್, ಸದಸ್ಯರು ಶಿವಲಿಂಗೇಗೌಡ್ರು ಮತ್ತು ರಾಮೇಗೌಡ ಇದ್ದರು.