ಸಾರಾಂಶ
ವಿಶೇಷ ವರದಿ
ಕನ್ನಡಪ್ರಭ ವಾರ್ತೆ ವಿರಾಜಪೇಟೆರಾಜ್ಯದ ಗಡಿ ಭಾಗ ಮತ್ತು ಅರಣ್ಯ ಪ್ರದೇಶದಲ್ಲಿ ಅಸ್ತಿತ್ವ ಹೊಂದಿರುವ ದೇವಿ ದೇಗುಲಕ್ಕೆ ಕಾಯಕಲ್ಪ ನೀಡಲು ಮುಂದಾದ ಆಡಳಿತ ಮಂಡಳಿಯ ಮನವಿಗೆ ರಾಜ್ಯ ಸರ್ಕಾರ ಸ್ಪಂದಿಸಿದೆ. ಇದೀಗ ದೇವಸ್ಥಾನದ ಸರ್ವೇ ಕಾರ್ಯಕ್ಕೆ ರಾಜ್ಯ ಸರ್ಕಾರ ಮತ್ತು ಸ್ಥಳೀಯಾಡಳಿತ ಹಸಿರು ನಿಶಾನೆ ತೋರಿದೆ.
ವಿರಾಜಪೇಟೆ ತಾಲೂಕು ಗಡಿಭಾಗ, ಕರ್ನಾಟಕ ಮತ್ತು ಕೇರಳ ರಾಜ್ಯಗಳನ್ನು ಸಂಪರ್ಕಿಸುವ ಸ್ಥಳ, ರಾಜ್ಯ ಹೆದ್ದಾರಿ, ಬೇಟೋಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾಕೂಟ್ಟ ಅರಣ್ಯ ವಲಯವನ್ನು ವ್ಯಾಪಿಸಿರುವ ಕಾಕೇತೋಡು ವನ ಮಾರ್ಗ ದೇವಿ ಕ್ಷೇತ್ರ ಶತಮಾನದ ಇತಿಹಾಸ ಕಂಡಿದೆ. ದೇಗುಲವು ದಟ್ಟ ಕಾನನದ ಅಂಚಿನಲ್ಲಿದ್ದು ಸನಿಹದಲ್ಲೇ ನದಿ ಹರಿಯುತ್ತಿದೆ.ಪ್ರತಿ ಶುಕ್ರವಾರ ವಿಶೇಷ ಪೂಜೆ, ವಾರ್ಷಿಕ ದೇವಿ ಜಾತ್ರಾ ಮಹೋತ್ಸವ, ತಿಂಗಳ ಕೊನೆಯ ಶುಕ್ರವಾರ ವಿಶೇಷ ಪೂಜೆಗಳು ದೇವಿಗೆ ಸಲ್ಲಿಕೆಯಾಗುತ್ತವೆ. ಸುಮಾರು 50 ವರ್ಷಗಳ ಹಿಂದಿನಿಂದ ಹೆಗ್ಗಳ ಗ್ರಾಮದ ನಿವಾಸಿಗಳು ಕ್ಷೇತ್ರ ನವೀಕರಿಸಲು ಮುಂದಾಗಿದ್ದರು.ಸ್ವಾತಂತ್ರ್ಯ ಪೂರ್ವದಲ್ಲಿ ಕೇರಳ ರಾಜ್ಯದಿಂದ ಕರ್ನಾಟಕ ರಾಜ್ಯಕ್ಕೆ ಗಡಿಭಾಗದಿಂದ ಸಾರಿಗೆ ಸಂಪರ್ಕ ಸಾಧಿಸಲು ಕಡಿದಾದ ಮಾರ್ಗ ನಿರ್ಮಾಣ ಮಾಡಲಾಗಿತ್ತು ಎಂದು ಹೇಳಲಾಗುತ್ತಿದೆ. ಅಂದು ರಸ್ತೆಯ ಇಕ್ಕೆಲಗಳಲ್ಲಿ ದಟ್ಟ ಅರಣ್ಯವಾಗಿದ್ದರಿಂದ ಪ್ರಾಣಿಗಳ ಓಡಾಟ ಅಧಿಕವಾಗಿತ್ತು.
ವಾಹನ ಚಾಲಕರು ಮತ್ತು ಪಾದಚಾರಿಗಳು ಇಲ್ಲಿಗೆ ಭಯದಿಂದಲೇ ತೆರಳಬೇಕಾಗಿತ್ತು. ಕಿರಿದಾದ ಮಾರ್ಗವಾಗಿರುವುದರಿಂದ ವಾಹನ ಅಪಘಾತಗಳು ಹೆಚ್ಚಾಗಿ ಪ್ರಾಣ ಹಾನಿಗಳು ನಡೆಯುತಿದ್ದವು. ಇದರಿಂದ ಕಂಗಾಲಾಗಿದ್ದ ವಾಹನ ಚಾಲಕರು ದೇವಿಗೆ ಕಾಣಿಕೆ ಅರ್ಪಿಸಿ, ಪೂಜೆ ಸಲ್ಲಿಸಿ ಪ್ರಾರ್ಥನೆಯೊಂದಿಗೆ ವಾಹನ ಚಾಲನೆಗೆ ಮುಂದಾಗುತ್ತಿದ್ದರು.ಪುಟ್ಟ ಗುಡಿ ನಿರ್ಮಾಣ:
ಬಳಿಕ, ಚಿಕ್ಕ ಗುಡಿಯಲ್ಲಿದ್ದ ದೇವಿಯ ಕ್ಷೇತ್ರವನ್ನು ಭಕ್ತರ ಅನುಕೂಲಕ್ಕೆ ತಕ್ಕಂತೆ ದೇವಾಲಯ ನಿರ್ಮಿಸಿರುತ್ತಾರೆ. ದೇಗುಲ ಅಭಿವೃದ್ದಿಪಡಿಸಲು ದಾಖಲೆಗಳು ಇಲ್ಲದಿರುವ ಕಾರಣ ದೇಗುಲದ ಆಡಳಿತ ಮಂಡಳಿಯು ೨೦೦೧ ರಲ್ಲಿ ದಾಖಲೆಪತ್ರಗಳನ್ನು ಪಡೆಯಲು ಸರ್ಕಾರಕ್ಕೆ ಆರ್ಜಿ ಸಲ್ಲಿಸಿದರು.ಜಿಲ್ಲಾಧಿಕಾ ಕಚೇರಿ ದಾಖಲೆ ಅನ್ವಯ ಹೆಗ್ಗಳ ಗ್ರಾಮದ ಸರ್ವೆ ಸಂಖ್ಯೆ ೨೧೧/೫ ರಲ್ಲಿ ೧೮.೩೦ ಎಕ್ರೆ ಪ್ರದೇಶವು 1770 ರಿಂದ 2002 ರ ವರೇಗೆ ರೇಡಿಮ್ ಸ್ಥಳ ಎಂದು, ಕಚೇರಿ ಜಮಾಬಂದಿ 1930-1933 ರ ವರೇಗೆ ಮಿಸಲು ಅರಣ್ಯ ಪ್ರದೇಶ ಎಂದು ನಮೂದಾಗಿತ್ತು. 1919 ರಲ್ಲಿ ಪೋರ್ಟ ಲ್ಯಾಂಡ್ ರಬ್ಬರ್ ಎಸ್ಟೇಟ್ ಕಂಪೆನಿಯ ಹೆಸರಿನಲ್ಲಿ ಮಿಸಲು ಅರಣ್ಯ ಪ್ರದೇಶವನ್ನು ಕೃಷಿಗೆ ಸಂಬಂಧಿಸಿದಂತೆ 99 ವರ್ಷಗಳ ಅವಧಿಗೆ ಭೋಗ್ಯಕ್ಕೆ ನೀಡಲಾಗಿತು.
ಸರ್ವೆ ಸಂಖ್ಯೆ 211/5 ರ ಪ್ರದೇಶದಲ್ಲಿದ್ದ 18.30 ಎಕ್ರೆ ಪ್ರದೇಶದಿಂದ 2 ಎಕ್ರೆ. 60 ಸೆಂಟು ಸ್ಥಳವನ್ನು ವಿಂಗಡಣೆಗೊಳಿಸಿ ದೇವಿ ದೇಗುಲ ಹೆಸರಿನಲ್ಲಿ ದಾಖಲೆ ಮಾಡಿಕೊಡುವಂತೆ ದೇಗುಲದ ಆಡಳಿತ ಮಂಡಳಿಯು ಬೇಟೋಳಿ ಗ್ರಾಮ ಪಂಚಾಯಿತಿ, ತಹಸೀಲ್ದಾರ್ ಮತ್ತು ಜಿಲ್ಲಾಧಿಕಾರಿ, ಶಾಸಕರಿಗೆ ಅರ್ಜಿ ಸಲ್ಲಿಸಿದರು. ಮೀಸಲು ಅರಣ್ಯ ಪ್ರದೇಶವಾಗಿರುವುದರಿಂದ ಅರಣ್ಯ ಇಲಾಖೆಯ ಆಕ್ಷೇಪಣೆ ಸಲ್ಲಿಸಿತ್ತು.ದೇಗುಲದ ಆಡಳಿತ ಮಂಡಳಿಯ ಸದಸ್ಯರ ಸತತ ಹೋರಾಟದ ಫಲವಾಗಿ ಈ ಹಿಂದೆ ಇದ್ದ ಸರ್ಕಾರದ ಜಿಲ್ಲೆಯ ಉಸ್ತುವಾರಿ ಸಚಿವರು ಮತ್ತು ಪ್ರಸ್ತುತ ಶಾಸಕ ಎ.ಎಸ್. ಪೊನ್ನಣ್ಣ ಪ್ರಯತ್ನದಿಂದ ದೇಗುಲದ ವ್ಯಾಪ್ತಿಗೆ ಬರುವ ಸ್ಥಳವನ್ನು ಸರ್ವೆ ಮಾಡಲು ಅದೇಶ ಬಂದಿದೆ. ಇದೀಗ ಸರ್ವೇ ಕಾರ್ಯ ಪೂರ್ಣವಾಗಿದ್ದು, ಶೀಘ್ರದಲ್ಲಿ ದೇಗುಲಕ್ಕೆ ದಾಖಲೆ ಪತ್ರಗಳು ಒದಗಲಿದೆ ಎಂದು ಭಕ್ತರ ನಂಬಿಕೆ.
.......................ದೇಗುಲಕ್ಕೆ ದಾಖಲೆ ಪತ್ರಗಳು ಇಲ್ಲಾದಗಿರುವ ಹಿನ್ನಲೆಯಲ್ಲಿ 2020ರ ನ.16ರಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಲಾಗಿತು. ಹಲವು ಪ್ರಯತ್ನಗಳ ಬಳಿಕ ಇದೀಗ ಜಿಲ್ಲಾಧಿಕಾರಿ ಸರ್ವೇಗೆ ಆದೇಶ ಮಾಡಿದ್ದಾರೆ. ಕಳೆದ ಸೆ.19ರಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಆದೇಶದಂತೆ ಇದೇ ನ.13ರಂದು ಭೂದಾಖಲೆಗಳ ಅಧಿಕಾರಿ ಸೂರ್ಯಪ್ರಕಾಶ್ ಸಮ್ಮುಖದಲ್ಲಿ ಸರ್ವೇ ಕಾರ್ಯ ಮುಗಿದಿದೆ. ದೇಗುಲ ಅಭಿವೃದ್ದಿ ಪಡಿಸಲು ಇದು ಪ್ರಥಮ ಹೆಜ್ಜೆಯಾಗಿದೆ.
-ಎನ್.ಸಿ ವಿಜಯ ಕುಮಾರ್, ದೇಗುಲ ಸಮಿತಿ ಸದಸ್ಯ, ಹೆಗ್ಗಳ ಗ್ರಾಮ...................
ದೇಗುಲ ಆಡಳಿತ ಮಂಡಳಿಯು ರಚನೆಯಾಗಿ ಸುಮಾರು ೫೦ ವರ್ಷಗಳು ಸಂದಿವೆ. ದಾನಿಗಳು, ಭಕ್ತರ ನೆರವಿನಿಂದ ದೇವಾಲಯ ಅಭಿವೃದ್ಧಿಪಡಿಸಲಾಗಿದೆ. ಆಡಳಿತ ಮಂಡಳಿಯ ವಿಶೇಷ ಪ್ರಯತ್ನ ಮತ್ತು ದೇವಿಯ ಅನುಗ್ರಹದಿಂದ ಸರ್ವೇ ಕಾರ್ಯ ಮುಗಿದಿದೆ.-ರಾಧಾಕೃಷ್ಣ, ಕಾಕೇತೋಡು ವನ ಮಾರ್ಗ ದೇವಿ ಕ್ಷೇತ್ರದ ಅಧ್ಯಕ್ಷ.