ಉತ್ತರ ಕರ್ನಾಟಕ ಗಟ್ಟಿ ಧ್ವನಿಯಾಗಿದ್ದ ಹೊರಟ್ಟಿ ಅವರು 46 ವರ್ಷಗಳಿಂದ (1980) ಪರಿಷತ್ ಸದಸ್ಯರಾಗಿದ್ದರು. ಸತತವಾಗಿ 8 ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ವಿಶ್ವದಾಖಲೆ ಬರೆದಿರುವ ಅವರು, ಪ್ರಥಮ ಬಾರಿಗೆ ಪಕ್ಷೇತರರಾಗಿ ಆಯ್ಕೆಯಾಗಿ, ಬಳಿಕ ಜನತಾದಳ ಸೇರಿದರು.
ಶಿವಾನಂದ ಗೊಂಬಿ
ಹುಬ್ಬಳ್ಳಿ:ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ಬಸವರಾಜ ಹೊರಟ್ಟಿ ಗೌರವಯುತವಾಗಿ ಆ ಸ್ಥಾನದಿಂದ ನಿರ್ಗಮಿಸಿದ್ದಾರೆ. ಅವರ ವಿರುದ್ಧ ನಡೆಯಬೇಕಿದ್ದ ಅವಿಶ್ವಾಸ ಮಂಡನೆಯ ಮುಜುಗರದಿಂದ ತಪ್ಪಿಸಿಕೊಂಡಿದ್ದಾರೆ.
ಉತ್ತರ ಕರ್ನಾಟಕ ಗಟ್ಟಿ ಧ್ವನಿಯಾಗಿದ್ದ ಹೊರಟ್ಟಿ ಅವರು 46 ವರ್ಷಗಳಿಂದ (1980) ಪರಿಷತ್ ಸದಸ್ಯರಾಗಿದ್ದರು. ಸತತವಾಗಿ 8 ಬಾರಿ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ವಿಶ್ವದಾಖಲೆ ಬರೆದಿರುವ ಅವರು, ಪ್ರಥಮ ಬಾರಿಗೆ ಪಕ್ಷೇತರರಾಗಿ ಆಯ್ಕೆಯಾಗಿ, ಬಳಿಕ ಜನತಾದಳ ಸೇರಿದರು. ಜನತಾದಳ ಇಬ್ಭಾಗವಾದಾಗ ಒಂದು ಮಾಡಲು ಸಾಕಷ್ಟು ಪ್ರಯತ್ನಿಸಿದರೂ ಫಲ ಸಿಗಲಿಲ್ಲ. ಅದು ಸಾಧ್ಯವಾಗದೆ ಇದ್ದಾಗ ಎಚ್.ಡಿ. ದೇವೇಗೌಡರೊಂದಿಗೆ ಗುರುತಿಸಿಕೊಂಡರು. 2022ರ ವರೆಗೆ ಜೆಡಿಎಸ್‌ನಲ್ಲಿದ್ದ ಹೊರಟ್ಟಿ, ಬಳಿಕ ಬಿಜೆಪಿ ತೆಕ್ಕೆಗೆ ಬಂದರು. ಬಿಜೆಪಿಯಿಂದ ಚುನಾವಣೆ ಸ್ಪರ್ಧಿಸಿ ಪರಿಷತ್‌ಗೆ 8ನೇ ಬಾರಿ ಆಯ್ಕೆಯಾದರು.3 ಬಾರಿ ಸಭಾಪತಿ:
2004ರಲ್ಲಿ ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರ ಹಾಗೂ 2006ರ ಬಿಜೆಪಿ- ಜೆಡಿಎಸ್ ಸರ್ಕಾರದಲ್ಲಿ ಸಚಿವರಾಗಿಯೂ ಅತ್ಯುತ್ತಮ ಕಾರ್ಯನಿರ್ವಹಿಸಿದವರು. ಶಿಕ್ಷಕರ ವರ್ಗಾವಣೆಯಲ್ಲಿ ಪಾರದರ್ಶಕತೆ ಬಂದಿದೆ ಎಂದರೆ ಅದು ಹೊರಟ್ಟಿ ಅವರ ಕೊಡುಗೆ ಎಂದರೆ ತಪ್ಪಾಗದು. 8 ಬಾರಿ ಪರಿಷತ್ ಸದಸ್ಯರಾದ ಹೊರಟ್ಟಿ ಅವರು 3 ಬಾರಿ ಸಭಾಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.ನಿಷ್ಪಕ್ಷಪಾತ;
ಸಭಾಪತಿ ಹುದ್ದೆ ಸಂವಿಧಾನಿಕ ಹುದ್ದೆ. ಒಂದು ಪಕ್ಷದಿಂದ ಗೆಲುವು ಸಾಧಿಸಿ ಬಳಿಕ ಹೊರಟ್ಟಿ ಸಭಾಪತಿಯಾದರೂ ಪೀಠದಲ್ಲಿ ಅತ್ಯಂತ ನಿಷ್ಪಕ್ಷಪಾತವಾಗಿಯೇ ಕಾರ್ಯನಿರ್ವಹಿಸಿದವರು. ಅತ್ತ ಸರ್ಕಾರಕ್ಕೂ ಮುಜುಗರವಾಗದಂತೆ, ಇತ್ತ ವಿಪಕ್ಷಕ್ಕೂ ಕಿರಿಕಿರಿಯಾಗದಂತೆ ಆಡಳಿತ ನಡೆಸಿ ಸೈ ಎನಿಸಿಕೊಂಡರು. ಪರಿಷತ್‌ನಲ್ಲಿ ಎಷ್ಟೇ ದೊಡ್ಡವರಿರಲಿ, ಸ್ವತಃ ಮುಖ್ಯಮಂತ್ರಿಗಳೇ ಇರಲಿ, ತಪ್ಪು ಮಾಡಿದಾಗ ಕಿವಿ ಹಿಂಡುವುದನ್ನೂ ಬಿಟ್ಟಿಲ್ಲ. ವಿನಾಕಾರಣ ಚರ್ಚೆ ನಡೆಸಲು ಬಯಸುವ ಸದಸ್ಯರನ್ನು ತರಾಟೆ ತೆಗೆದುಕೊಳ್ಳುವುದನ್ನೂ ಮರೆತಿಲ್ಲ.ರಾಜೀನಾಮೆ ಅನಿವಾರ್ಯ:
ಬಿಜೆಪಿ ಸರ್ಕಾರ ಇದ್ದಾಗಲೇ ಸಭಾಪತಿ ಸ್ಥಾನಕ್ಕೆ ಏರಿದ್ದ ಹೊರಟ್ಟಿ, 2023ರಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದರೂ ಪರಿಷತ್‌ನಲ್ಲಿ ಕಾಂಗ್ರೆಸ್‌ಗೆ ಬಹುಮತ ಇರದ ಕಾರಣ ಈ ವರೆಗೂ ಆ ಪೀಠ ಅಲಂಕರಿಸಿದ್ದರು. ಇದೀಗ ಕಾಂಗ್ರೆಸ್‌ಗೆ ಪರಿಷತ್‌ನಲ್ಲಿ ಬಹುಮತ ಇರುವ ಕಾರಣ ಸಚಿವ ಸ್ಥಾನ ಸಿಗದ ಸಲೀಂಅಹ್ಮದ್ ಅವರನ್ನು ಆ ಸ್ಥಾನದಲ್ಲಿ ಕೂಡ್ರಿಸಲು ಅಖೈರು ಮಾಡಲಾಗಿದೆ. ಹೀಗಾಗಿ ಹೊರಟ್ಟಿ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಿಎಂ ಡಿ.ಕೆ.ಶಿವಕುಮಾರ ಸೂಚಿಸಿದ್ದರು. ಒಂದು ವೇಳೆ ಇದಕ್ಕೆ ಒಪ್ಪದಿದ್ದರೆ ಹೊರಟ್ಟಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕಾಂಗ್ರೆಸ್ ಚಿಂತಿಸಿತ್ತು. ಇದಕ್ಕೆ ಹೊರಟ್ಟಿ ಸೆಡ್ಡು ಹೊಡೆದು ನಾನು ಯಾವುದೇ ಕಾರಣಕ್ಕೂ ರಾಜಿನಾಮೆ ನೀಡುವುದಿಲ್ಲ. ಬೇಕಾದರೆ ಅವಿಶ್ವಾಸ ನಿರ್ಣಯ ಮಂಡಿಸಲಿ ಎಂದಿದ್ದರು. ಬಳಿಕ ತಮಗೂ ಹಾಗೂ ಪೀಠಕ್ಕೆ ಧಕ್ಕೆ ಆಗದಿರಲೆಂದು ಶುಕ್ರವಾರ ತಮ್ಮ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.ಚಿಂತಕರ ಚಾವಡಿಯ ಹಿರಿಯ ಸದಸ್ಯರಾದ ಹೊರಟ್ಟಿ ಅವರು ರಾಜೀನಾಮೆ ನೀಡುವ ಮೂಲಕ ತಮ್ಮ ದೊಡ್ಡತನ ಪ್ರದರ್ಶಿಸಿದ್ದು ಇತರರಿಗೆ ಮಾದರಿಯಾಗಿದೆ.