ಸಾರಾಂಶ
ಮಾಧ್ಯಮದವರಿಗೂ ಮೇಲ್ಮನೆಯಲ್ಲಿ ಅವಕಾಶ ನೀಡುವಂತೆ ಮನವಿ ಮಾಡುವದಾಗಿ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ 38ನೇ ಸಮ್ಮೇಳನದ ಸಮಾರೋಪದಲ್ಲಿ ಬಸವರಾಜ್ ಹೊರಟ್ಟಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಪ್ರಜಾಪ್ರಭುತ್ವದ ನಾಲ್ಕನೇ ಆಧಾರ ಸ್ತಂಭಕ್ಕೂ ಮೇಲ್ಮನೆಯಲ್ಲಿ ಸ್ಥಾನವಿದೆ. ಖಾದ್ರಿ ಶಾಮಣ್ಣನವರು ಪತ್ರಿಕಾ ರಂಗದಲ್ಲಿದ್ದ ಕಾರಣಕ್ಕೇ ಅವರಿಗೆ ಪರಿಷತ್ ಸದಸ್ಯತ್ವ ನೀಡಲಾಗಿತ್ತು.
ಆಕಸ್ಮಿಕವಾಗಿ ಅಂಥ ಸಂದರ್ಭ ಒದಗಿ ಬಂದರೆ ಮಾಧ್ಯಮದವರ ಹೆಸರನ್ನು ನಾನೇ ಸೂಚಿಸುತ್ತೇನೆ. ಮಾಧ್ಯಮದವರು, ಸಂಗೀತಗಾರರು, ಶಿಕ್ಷಣ ತಜ್ಞರು ಪರಿಷತ್‌ನಲ್ಲಿರಬೇಕು.
ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಯವರಿಗೆ ಈ ಕುರಿತು ನಾನು ಮನವಿ ಸಲ್ಲಿಸುತ್ತೇನೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ್ ಹೊರಟ್ಟಿ ಹೇಳಿದರು.
ನಗರದ ಪಾರ್ವತಮ್ಮ ಶಾಮನೂರು ಶಿವಶಂಕರಪ್ಪ ಕಲ್ಯಾಣ ಮಂಟಪದಲ್ಲಿ ಭಾನುವಾರ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯಮಟ್ಟದ 38ನೇ ಸಮ್ಮೇಳನದ ಸಮಾರೋಪದಲ್ಲಿ ಮಾತನಾಡಿದರು. ಈಗ ಎಲ್ಲೆಡೆ ಸಂಘಟನೆಗಳಿವೆ.
ಶಾಸಕರ ವೇದಿಕೆಯಿಂದಲೂ ನಾವು ಸಂಘಟನೆ ಮಾಡಿಕೊಂಡಿದ್ದೇವೆ. ಸಂಘಟನೆ ಮೂಲಕ ನಾವು ಸಮಸ್ಯೆಗಳ ಪರಿಹಾರ ಮಾಡಿಕೊಳ್ಳಬಹುದು.
ಸಂಘಟನೆ ಇಲ್ಲದಿದ್ದರೆ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದರು.ಎಲ್ಲಾ ರಂಗಗಳು ಕೆಟ್ಟಿವೆ ಎಂದು ಪತ್ರಿಕಾ ರಂಗವೂ ಕೆಟ್ಟಿದೆ ಎನ್ನಲಾಗುವುದಿಲ್ಲ.
ಕೆಲವರು ಮಾಡಿದ ತಪ್ಪಿಗೆ ಎಲ್ಲಾ ಪತ್ರಕರ್ತರನ್ನು ದೂಷಿಸಲಾಗುವುದಿಲ್ಲ. ಮಾಧ್ಯಮಗಳು ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಬದಲಿಸಬಹುದು.
ರಾಷ್ಟ್ರಮಟ್ಟದಲ್ಲಿ ಮಾಧ್ಯಮಗಳಿಂದ ಸುಧಾರಣೆ ತರಲು ಸಾಧ್ಯವಿದೆ ಎಂದ ಅವರು, ಮಾಧ್ಯಮಗಳಿಗೆ ಸರ್ಕಾರ ರಕ್ಷಣೆ ನೀಡಬೇಕಿದೆ ಎಂದರು.
ಕನ್ನಡಪ್ರಭ, ಸುವರ್ಣ ನ್ಯೂಸ್‌ನ ಒಟ್ಟು ನಾಲ್ವರಿಗೆ ಪ್ರಶಸ್ತಿ
ಪತ್ರಕರ್ತರ ಸಮಾವೇಶದಲ್ಲಿ ಕನ್ನಡಪ್ರಭ, ಏಷ್ಯಾನೆಟ್ ಸುವರ್ಣನ್ಯೂಸ್‌ನ ಒಟ್ಟು ನಾಲ್ವರಿಗೆ ಪ್ರಶಸ್ತಿ ವಿತರಿಸಲಾಯಿತು. ಕನ್ನಡಪ್ರಭದ ಪುಟ ವಿನ್ಯಾಸಕಾರ ಜಿ.ಎಂ.ಕೊಟ್ರೇಶ್, ಮೈಸೂರಿನ ಛಾಯಾಗ್ರಾಹಕ ಅನುರಾಗ್ ಬಸವರಾಜ್, ಅರಸೀಕೆರೆ ವರದಿಗಾರ ಪಿ.ಶಾಂತಕುಮಾರ್ , ಸುವರ್ಣ ವಾಹಿನಿಯ ಕ್ಯಾಮೆರಾ ಮುಖ್ಯಸ್ಥ ಮೋಹನ್‌ರಾಜ್‌ಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.