ಸರಳತೆಯೊಂದಿಗೆ ಜನಪ್ರಿಯತೆ ಗಳಿಸಿರುವ ಹೊರಟ್ಟಿ: ಸಚಿವ ಪ್ರಹ್ಲಾದ ಜೋಶಿ

| Published : Mar 11 2024, 01:18 AM IST

ಸರಳತೆಯೊಂದಿಗೆ ಜನಪ್ರಿಯತೆ ಗಳಿಸಿರುವ ಹೊರಟ್ಟಿ: ಸಚಿವ ಪ್ರಹ್ಲಾದ ಜೋಶಿ
Share this Article
  • FB
  • TW
  • Linkdin
  • Email

ಸಾರಾಂಶ

ಹೊರಟ್ಟಿ ಅವರು ಸತತವಾಗಿ 8 ಬಾರಿ ಗೆಲುವು ಕಾಣುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಬುಕ್‌ನಲ್ಲಿ ಹೆಸರು ದಾಖಲಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ

ವಿಪ ಸಭಾಪತಿ ಬಸವರಾಜ ಹೊರಟ್ಟಿ ಅವರು ವಿಧಾನ ಪರಿಷತ್ತಿಗೆ ಸತತ 8 ಬಾರಿ ಆಯ್ಕೆಯಾದರೂ ಯಾವುದೇ ಅಹಂಕಾರವಿಲ್ಲದೇ ಸರಳತೆಯೊಂದಿಗೆ ಜನಪ್ರಿಯತೆ ಗಳಿಸಿರುವುದು ಹೆಮ್ಮೆಯ ಸಂಗತಿ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಭಾನುವಾರ ಇಲ್ಲಿನ ಆರ್.ಎನ್. ಶೆಟ್ಟಿ ಕಲ್ಯಾಣಮಂಟಪದಲ್ಲಿ ರಾಜ್ಯ ಮಾಧ್ಯಮಿಕ ಶಾಲಾ ನೌಕರರ ಸಂಘ ಹಾಗೂ ವಿವಿಧ ಸಂಘಟನೆಗಳ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಬಸವರಾಜ ಹೊರಟ್ಟಿ ಅವರ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.

ಹೊರಟ್ಟಿ ಅವರು ಸತತವಾಗಿ 8 ಬಾರಿ ಗೆಲುವು ಕಾಣುವ ಮೂಲಕ ಲಿಮ್ಕಾ ಬುಕ್ ಆಫ್ ರೆಕಾರ್ಡ್ ಬುಕ್‌ನಲ್ಲಿ ಹೆಸರು ದಾಖಲಾಗಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ಸಂಗತಿ. ಸಾಮಾನ್ಯ ಚುನಾವಣೆಗಳು ಎಂದಿಗೂ ಮಾಡಿದ ಕೆಲಸ, ಜನಸಂಪರ್ಕ ಮತ್ತು ವಾತಾವರಣದ ಆಧಾರದ ಮೇಲೆ ನಡೆಯುತ್ತವೆ. ಶಿಕ್ಷಕರು, ಪದವವೀಧರರ ಕ್ಷೇತ್ರದ ಚುನಾವಣೆ ಎದುರಿಸುವುದು ಕಷ್ಟ. ಹೀಗಿದ್ದರೂ ಹೊರಟ್ಟಿ ಅವರು ಈ ಕ್ಷೇತ್ರದಲ್ಲಿ 8 ಬಾರಿ ಗೆಲುವಿನ ಮೆಟ್ಟಿಲೆರಿರುವುದು ದೊಡ್ಡ ಸಾಧನೆಯೇ ಸರಿ ಎಂದರು.

ರಾಜಕಾರಣ ಸುಲಭವಲ್ಲ:

ಕೆಲವರಲ್ಲಿ 4-5 ಬಾರಿ ಆಯ್ಕೆಯಾದರೆ ಅಹಂಕಾರ, ಸಂತೃಪ್ತಿ ಭಾವ ಬರುತ್ತದೆ. ಜನಹಿತಕ್ಕಾಗಿ ಕೆಲಸ ಮಾಡುವ ರಾಜಕಾರಣದಲ್ಲಿ ಸಂತೃಪ್ತ ಭಾವ ಬರಬಾರದು. ರಾಜಕೀಯದಲ್ಲಿ ರಾಜಕಾರಣ, ಜನರ ನಿರ್ವಹಣೆ ಮಾಡುವುದು ಸುಲಭವಲ್ಲ. ಇದನ್ನು ಕಲಿಸಲು ಜಗತ್ತಿನಲ್ಲಿಯೇ ವಿವಿ, ತರಬೇತಿ ಕೇಂದ್ರ ಇಲ್ಲ. ಜನರೇಷನ್ ಗ್ಯಾಪ್ ಹಾಗೂ ಹತ್ತಾರು ಸವಾಲುಗಳ ಮಧ್ಯೆಯೂ ಹೊರಟ್ಟಿಯವರು 48 ವರ್ಷಗಳಿಂದ ಸಮರ್ಥವಾಗಿ ನಿರ್ವಹಿಸುತ್ತಿದ್ದಾರೆ ಎಂದರು.

ಸಂಘಟನೆ ಬೆಳೆಸುವಲ್ಲಿ ಶ್ರಮಿಸಿ:

ಅಭಿನಂದನೆ ಸ್ವೀಕರಿಸಿ ಮಾತನಾಡಿದ ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ, ಶಿಕ್ಷಕರ ಈ ಪ್ರೀತಿಗೆ ನಾನು ಚಿರಋಣಿ. ಅನುದಾನಿತ ಶಾಲಾ ಶಿಕ್ಷಕರಿಗೆ ಮುಂಬರುವ ದಿನಗಳಲ್ಲಿ ಸಾವಿರಾರು ಸಮಸ್ಯೆಗಳು ತಲೆದೋರುವ ಆತಂಕವಿದೆ. ಈ ಸಮಯದಲ್ಲಿ ಶಿಕ್ಷಕರು ಸಂಘಟನೆಯನ್ನು ಬೆಳೆಸದಿದ್ದರೆ ಕಣ್ಣೀರು ಹಾಗೂ ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರಲಿದೆ. ಹಾಗಾಗಿ ಸಂಘಟನೆಯ ಬೆಳವಣಿಗೆಗೆ ಆದ್ಯತೆ ನೀಡಿ.

ಈಗಾಗಲೇ ಸರ್ಕಾರ ಮಟ್ಟದಲ್ಲಿ ಅನುದಾನ ಹಿಂಪಡೆಯುವ ಚರ್ಚೆಗಳು ನಡೆಯುತ್ತಿವೆ. ಖಾಲಿ ಹುದ್ದೆಗಳ ಭರ್ತಿ ಮಾಡಿಕೊಳ್ಳದೇ, ಮುಂದಕ್ಕೆ ಹಾಕುತ್ತಾ ಹೋಗುತ್ತಿದೆ. ಅನುದಾನ ನೀಡಲು ಹಿಂದೆ-ಮುಂದೆ ಯೋಚಿಸುತ್ತಿದೆ. ಈ ಹಿಂದೆ ಅನುದಾನಿತ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಶಿಕ್ಷಕರು ಶೇ. 10ರಷ್ಟು ಸಂಬಳವನ್ನು ಆಡಳಿತ ಮಂಡಳಿಗೆ ನೀಡುವುದನ್ನು ತಡೆ ಹಿಡಿಯಲಾಗಿರುವುದು ಖಂಡನಾರ್ಹ ಎಂದರು.

ಶಾಸಕ ಪ್ರಸಾದ ಅಬ್ಬಯ್ಯ, ಶಾಸಕ ಎನ್‌.ಎಚ್‌. ಕೋನರಡ್ಡಿ, ನಿವೃತ್ತ ಪ್ರಾಚಾರ್ಯ ಅನಿಲ ವೈದ್ಯ, ನಿವೃತ್ತ ಪ್ರಾಚಾರ್ಯ ಕೆ.ವಿ. ರಾಯಚೂರ ಮಾತನಾಡಿದರು. ಇದೇ ಸಂದರ್ಭದಲ್ಲಿ ರಾಜ್ಯ ನೌಕರರ ಸಂಘದಿಂದ ಬಸವರಾಜ ಹೊರಟ್ಟಿ ಅವರನ್ನು ಅಭಿನಂದಿಸಲಾಯಿತು.

ವಿಧಾನಸಭೆಯ ಪ್ರತಿಪಕ್ಷದ ಉಪನಾಯಕ ಅರವಿಂದ ಬೆಲ್ಲದ, ಶಾಸಕ ಮಹೇಶ ಟೆಂಗಿನಕಾಯಿ, ಮಾಜಿ ಶಾಸಕ ಎಸ್.ಐ. ಚಿಕ್ಕನಗೌಡರ, ಪ್ರಭಾಕರ ಬಂಟ್, ಜಿ.ಆರ್. ಭಟ್, ಡಾ. ಸಂಗಮನಾಥ ಲೋಕಾಪುರ, ರಾಜಣ್ಣ ಕೊರವಿ, ಶ್ಯಾಮ ಮಲ್ಲನಗೌಡರ, ಸಿದ್ದನಗೌಡರ, ಸಿ.ಎಸ್ ಸೇರಿದಂತೆ ಹಲವರಿದ್ದರು.