ಉಡುಪಿ ಶೀರೂರು ಪರ್ಯಾಯ ಸಮಾರಂಭಕ್ಕೆ ಹೊರೆ ಕಾಣಿಕೆ ಸಂಗ್ರಹಿಸುವ ಉದ್ದೇಶದಿಂದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆರಂಭಿಸಲಾದ ಹೊರೆ ಕಾಣಿಕೆ ಸಂಗ್ರಹಣಾ ಕೇಂದ್ರ
ಮಂಗಳೂರು: ಉಡುಪಿ ಶೀರೂರು ಪರ್ಯಾಯ ಸಮಾರಂಭಕ್ಕೆ ಹೊರೆ ಕಾಣಿಕೆ ಸಂಗ್ರಹಿಸುವ ಉದ್ದೇಶದಿಂದ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಆರಂಭಿಸಲಾದ ಹೊರೆ ಕಾಣಿಕೆ ಸಂಗ್ರಹಣಾ ಕೇಂದ್ರವನ್ನು ಸೋಮವಾರ ಉದ್ಘಾಟಿಸಲಾಯಿತು.ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ ಮಾತನಾಡಿ, ಉಡುಪಿಯ ಪರ್ಯಾಯಕ್ಕೆ ಏನಾದರೂ ಕಾಣಿಕೆ ನೀಡಬೇಕು ಎನ್ನುವ ಉದ್ದೇಶ ಹೊಂದಿರುವವರಿಗೆ, ಅಲ್ಲಿಗೆ ತೆರಳಲು ಸಾಧ್ಯವಾಗದವರಿಗೆ ಹೊರೆಕಾಣಿಕೆಯನ್ನು ಸಮರ್ಪಿಸಲು ಈ ಕೇಂದ್ರವನ್ನು ತೆರೆಯಲಾಗಿದೆ. ಆ ಮೂಲಕ ಜನ ಸಾಮಾನ್ಯರಿಗೂ ಪರ್ಯಾಯಕ್ಕೆ ಕೊಡುಗೆ ನೀಡಲು ಈ ಕೇಂದ್ರ ಸಹಕಾರಿಯಾಗಲಿದೆ. ಕೃಷ್ಣನ ಸೇವೆಯನ್ನು ಮಾಡುವ ಭಾಗ್ಯವನ್ನು ನಾವು ಸದುಪಯೋಗಪಡಿಸಿಕೊಳ್ಳೋಣ ಎಂದರು.ಪ್ರಮುಖರಾದ ಶರವು ರಾಘವೇಂದ್ರ ಶಾಸ್ತ್ರಿ, ಸಮಿತಿಯ ಕಾರ್ಯಾಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ, ಪ್ರೊ. ಎಂ.ಬಿ.ಪುರಾಣಿಕ್, ಸುಧೀರ್ ಶೆಟ್ಟಿ ಕಣ್ಣೂರು, ಗಣೇಶ್ ಭಟ್, ಎಂ.ಗುರುರಾಜ್, ಭುವನಾಭಿರಾಮ ಉಡುಪ, ದಯಾನಂದ ಕಟೀಲ್, ಸುಧಾಕರ ರಾವ್ ಪೇಜಾವರ, ವಿನಯಾನಂದ, ಸುಬ್ರಹ್ಮಣ್ಯ ಭಟ್, ಗುರುಪ್ರಸಾದ್, ಸನತ್ ಕುಮಾರ್ ಜೈನ್ ಮತ್ತಿತರರು ಇದ್ದರು.
ಹೊರೆ ಕಾಣಿಕೆ ನೀಡಿ ಬಯಸುವವರು ಅಕ್ಕಿ, ದವಸಧಾನ್ಯ, ತೆಂಗಿನಕಾಯಿ, ತಾಮ್ರ ಹಾಗೂ ಸ್ಟೀಲ್ ಪಾತ್ರೆಗಳು ಮತ್ತಿತರ ವಸ್ತುಗಳನ್ನು ತಂದೊಪ್ಪಿಸಬಹುದು ಎಂದು ಸಮಿತಿಯ ಪ್ರಮುಖರು ತಿಳಿಸಿದ್ದಾರೆ.