ಸಾರಾಂಶ
ಗದಗ: ಗದಗ-ಕೊಪ್ಪಳ ಮಧ್ಯೆದ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಮಧ್ಯಾಹ್ನ ಲಾರಿ ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿ, 15 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡ ಘಟನೆ ಜರುಗಿದೆ.
ಕೊಪ್ಪಳದಿಂದ ಗದಗ ನಗರಕ್ಕೆ ಬರುತ್ತಿದ್ದ ಸಾರಿಗೆ ಸಂಸ್ಥೆಯ ಬಸ್ ಹಾಗೂ ಗೋವಾದಿಂದ ಔಷಧಿ ಸಾಮಗ್ರಿ ತೆಗೆದುಕೊಂಡು ಹೋಗುತ್ತಿದ್ದ ಲಾರಿ ನಡುವೆ ಹಳ್ಳಿಗುಡಿ ಮತ್ತು ಬನ್ನಿಕೊಪ್ಪ ಅಪಘಾತ ಸಂಭವಿಸಿದೆ.ಮೃತರನ್ನು ತಮಿಳುನಾಡಿನ ಸೇಲಂ ಜಿಲ್ಲೆಯ ಲಾರಿ ಚಾಲಕ ರಾಮಕೃಷ್ಣ (40) ಹಾಗೂ ಬಸ್ಸನಲ್ಲಿದ್ದ ಕೊಪ್ಪಳದ ಭಾಗ್ಯನಗರ ನಿವಾಸಿ ಗೀತಾ ಕಲಾಲ ಎಂದು ಗುರುತಿಸಲಾಗಿದೆ. ಅಪಘಾತದಲ್ಲಿ ಗಾಯಗೊಂಡವರ, ಬಹಳಷ್ಟು ಜನರ ಸಂಬಂಧಿಗಳು ಆಸ್ಪತ್ರೆಗಳ ಮುಂದೆ ಜಮಾಯಿಸಿದ್ದು ಎಲ್ಲರೂ ಕ್ಷಣ ಕ್ಷಣಕ್ಕೂ ಆತಂಕದಲ್ಲಿಯೇ ಕಾಲ ಕಳೆಯುತ್ತಿದ್ದಾರೆ .
ಚತುಷ್ಪಥ ರಸ್ತೆಯ ಒಂದು ಭಾಗದಲ್ಲಿ ರಿಪೇರಿ ಕಾರ್ಯ ಪ್ರಗತಿಯಲ್ಲಿರುವ ಹಿನ್ನೆಲೆಯಲ್ಲಿ ಎರಡೂ ಬದಿಯ ವಾಹನಗಳ ಸಂಚಾರವನ್ನು ಒಂದೇ ರಸ್ತೆಯಲ್ಲಿ ಕಲ್ಪಿಸಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಅಪಘಾತ ಸ್ಥಳ ಎರಡೂ ಗ್ರಾಮಗಳ ಮಧ್ಯೆ ನಡೆದ ಹಿನ್ನೆಲೆಯಲ್ಲಿ ಚಿಕಿತ್ಸೆ ಸಿಗದೇ ಗಾಯಾಳುಗಳು ಪರದಾಡಿದ ಘಟನೆಯೂ ಜರುಗಿದೆ.ಅಪಘಾತ ಸ್ಥಳದಲ್ಲಿಯೇ ಓರ್ವ ಮಹಿಳೆ ಹಾಗೂ ಲಾರಿ ಚಾಲಕ ಸಾವನ್ನಪ್ಪಿದ್ದು, 15 ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದು, ಗಾಯಗೊಂಡಿರುವವರಲ್ಲಿ 6 ಜನರನ್ನು ಗದಗ ಜಿಲ್ಲಾಸ್ಪತ್ರೆಗೆ ಹಾಗು ಇನ್ನುಳಿದ 10 ಜನರನ್ನು ಕೊಪ್ಪಳದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಎರಡೂ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರಲ್ಲಿ ಹಲವರಿಗೆ ಗಂಭೀರ ಗಾಯಗಳಾಗಿದ್ದು, ಸಾವಿನ ಸಂಖ್ಯೆ ಹೆಚ್ಚಾಗಬಹುದು ಎನ್ನುವುದು ಘಟನಾ ಸ್ಥಳದಲ್ಲಿ ಗಾಯಾಳುಗಳನ್ನು ಸಾಗಾಟ ಮಾಡಲು ಸಹಕರಿಸಿದ ಸಾರ್ವಜನಿಕರ ಅಭಿಪ್ರಾಯವಾಗಿದೆ. ಘಟನಾ ಸ್ಥಳಕ್ಕೆ ಮುಂಡರಗಿ ಪೊಲೀಸರು ಭೇಟಿ ನೀಡಿದ್ದು ತುರ್ತು ಚಿಕಿತ್ಸೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದ್ದು ಮುಂಡರಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.