ಸಾರಾಂಶ
ಬಂಗಾರದ ಚಿಕ್ಕಶೇಷವಾಹನಾರೂಢನಾದ ಚೆಲುವನಾರಾಯಣಸ್ವಾಮಿಗೆ ದೇವಾಲಯದ ಮಹಡಿಯ ಮೇಲೆ ರಾಜಗೋಪುರದ ಹಿಂಭಾಗ ವಿವಿಧ ಪಾರಾಯಣಗಳೊಂದಿಗೆ ಉತ್ಸವ ನೆರವೇರಿತು. ನಂತರ ಸರ್ಪ ನಡೆಯಲ್ಲಿ ಬಿರುಸಾಗಿ ಬಂದು ಸರ್ಪ ಮೆಟ್ಟಿಲೇರುವಂತೆ ಸ್ವಾಮಿಯನ್ನು ಮೆರವಣಿಗೆ ಮಾಡಿದ್ದು ಭಕ್ತರ ಮನಸೂರೆಗೊಂಡಿತು.
ಕನ್ನಡಪ್ರಭ ವಾರ್ತೆ ಮೇಲುಕೋಟೆ
ದೇವಾಲಯದಲ್ಲಿ ಕೊಡೈತಿರುನಾಳ್ ಸಮಾರೋಪದ ನಿಮಿತ್ತ ವೈಮಾಳಿಗೆ ಉತ್ಸವ ಹಾಗೂ 1008ನೇ ಜಯಂತ್ಯುತ್ಸವದ 5ನೇ ಉತ್ಸವದ ಅಂಗವಾಗಿ ರಾಮಾನುಜರಿಗೆ ಅಶ್ವವಾಹನೋತ್ಸವ ಪುಪ್ಪಾಲಂಕೃತ ಬಂಗಾರದ ಪಲ್ಲಕ್ಕಿ ಮಹೋತ್ಸವಗಳು ಭಾನುವಾರ ನೆರವೇರಿದವು.ಕಳೆದ 14 ದಿನಗಳಿಂದ ದೇವಾಲಯದಲ್ಲಿ ನಡೆಯುತ್ತಿದ್ದ ಕೊಡೈ ತಿರುನಾಳ್ ಸಮಾರೋಪದ ಅಂಗವಾಗಿ ಅಮಾವಾಸ್ಯೆಯಂದು ಚೆಲುವನಾರಾಯಣಸ್ವಾಮಿಗೆ ವೈಮಾಳಿಗೆ ಉತ್ಸವ ಅದ್ಧೂರಿಯಾಗಿ ನಡೆಯಿತು.
ಬಂಗಾರದ ಚಿಕ್ಕಶೇಷವಾಹನಾರೂಢನಾದ ಚೆಲುವನಾರಾಯಣಸ್ವಾಮಿಗೆ ದೇವಾಲಯದ ಮಹಡಿಯ ಮೇಲೆ ರಾಜಗೋಪುರದ ಹಿಂಭಾಗ ವಿವಿಧ ಪಾರಾಯಣಗಳೊಂದಿಗೆ ಉತ್ಸವ ನೆರವೇರಿತು. ನಂತರ ಸರ್ಪ ನಡೆಯಲ್ಲಿ ಬಿರುಸಾಗಿ ಬಂದು ಸರ್ಪ ಮೆಟ್ಟಿಲೇರುವಂತೆ ಸ್ವಾಮಿಯನ್ನು ಮೆರವಣಿಗೆ ಮಾಡಿದ್ದು ಭಕ್ತರ ಮನಸೂರೆಗೊಂಡಿತು.ಇದಕ್ಕೂ ಮುನ್ನ ರಾಮಾನುಜರಿಗೆ ಬೆಳಗ್ಗೆ ಅಶ್ವವಾಹನೋತ್ಸವ, ರಾತ್ರಿ ಪುಪ್ಪಾಲಂಕೃತ ಬಂಗಾರದ ಪಲ್ಲಕ್ಕಿ ಉತ್ಸವಗಳು ನೆರವೇರಿದವು. ರಾಜಾಲಂಕಾರದಲ್ಲಿ ಯತಿರಾಜನಾಗಿ ಕಂಗೊಳಿಸಿದ ರಾಮಾನುಜರ ಕುದುರೆವಾಹನೋತ್ಸವ ವೈಭವದಿಂದ ನೆರವೇರಿತು.
ರಾಮಾನುಜಾಚಾರ್ಯರು 12ನೇ ಶತಮಾನದಲ್ಲಿ 12 ವರ್ಷಗಳ ಕಾಲ ಯದುಗಿರಿಯ ಬೆಟ್ಟದಲ್ಲಿ ನೆಲೆನಿಂತು ಚೆಲುವನಾರಾಯಣ ಸ್ವಾಮಿಗೆ ಆರಾಧನೆ ಮಾಡಿದ ಪ್ರತೀಕವಾಗಿ ತಿರುನಕ್ಷತ್ರ ಮಹೋತ್ಸವ ಮೇಲುಕೋಟೆಯಲ್ಲಿ ಅದ್ಧೂರಿಯಾಗಿ ನಡೆಯುತ್ತಾ ಬಂದಿದೆ. ತಿರುನಕ್ಷತ್ರದ ಅಂಗವಾಗಿ ಮೇ 1 ರಂದು ಮಹಾರಥೋತ್ಸವ ಹಾಗೂ 2 ರಂದು 1008ನೇ ತಿರುನಕ್ಷತ್ರ ಮಹೋತ್ಸವ ನಡೆಯಲಿದೆ.