ತೋಟಗಾರಿಕೆ ಬೆಳೆಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ: ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ. ನಾಗರಾಜ್

| Published : May 06 2025, 12:20 AM IST

ತೋಟಗಾರಿಕೆ ಬೆಳೆಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿ: ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಎಚ್.ಎಂ. ನಾಗರಾಜ್
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಯ ಮೂಲ ಬೀಜ. ಆಯಾಯ ಭೌಗೋಳಿಕ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಬಿತ್ತನೆ ಬೀಜಗಳನ್ನು ಬಳಕೆ ಮಾಡಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ದೇಶಿಯ ಬೀಜಗಳಿಗೆ ಹೆಚ್ಚು ಬೇಡಿಕೆ ಇದೆ. ಇಳುವರಿಯು ಬಿತ್ತನೆ ಬೀಜಗಳಿಂದ ಅಷ್ಟೇ ಅಲ್ಲದೆ ಅನುಸರಿಸುವ ಕೃಷಿ ಪದ್ಧತಿಯನ್ನು ಅವಲಂಬಿಸಿರುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರುತೋಟಗಾರಿಕೆ ಬೆಳೆಗಳು ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಿವೆ ಎಂದು ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕ ಎಚ್.ಎಂ. ನಾಗರಾಜ್‌ ಹೇಳಿದರು.ಸುತ್ತೂರು ಶ್ರೀಕ್ಷೇತ್ರದಲ್ಲಿ ರೈತರ ಶಿಬಿರದ ಸಮಾರೋಪದಲ್ಲಿ ಅವರು ಮಾತನಾಡಿ, ರೈತರು ಸಾವಯವ ಕೃಷಿಗೆ ಒತ್ತುಕೊಡಬೇಕು, ಭೂಮಿಗೆ ನೈಸರ್ಗಿಕ ಗೊಬ್ಬರಗಳನ್ನು ನೀಡುವುದರಿಂದ ಉತ್ತಮ ಪೋಷಕಾಂಶಗಳು ಬೆಳೆಗೆ ದೊರೆಯುತ್ತವೆ. ರೈತರು ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಂಡು ಮಣ್ಣು, ನೀರು ಪರೀಕ್ಷೆಗಳನ್ನು ಆಗಾಗ್ಗೆ ಮಾಡಿಸಬೇಕು. ಅಡಿಕೆ, ತೆಂಗು, ಮಾವು, ಬಾಳೆಯ ಜೊತೆಗೆ ಅಲಂಕಾರಿಕ ಹೂವುಗಳನ್ನು ಬೆಳೆಯಲು ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ಸಿಗುತ್ತದೆ ಎಂದು ತಿಳಿಸಿದರು. ಎಸ್‌ಬಿಐ ಲೀಡ್ ಬ್ಯಾಂಕ್‌ನ ಮುಖ್ಯ ವ್ಯವಸ್ಥಾಪಕ ಬಿ.ಎನ್. ನಾಗೇಶ್‌ ಮಾತನಾಡಿ, ಕೃಷಿ ಚಟುವಟಿಕೆಗೆ ಸಂಬಂಧಿಸಿದ ಉತ್ತಮ ಮಾಹಿತಿಗಳು ಶಿಬಿರದಿಂದ ದೊರಕಿವೆ. ಬ್ಯಾಂಕುಗಳು ಕೃಷಿಗೆ ವಿಶೇಷ ಮಹತ್ವವನ್ನು ಕೊಟ್ಟು ಸಾಲ ಸೌಲಭ್ಯಗಳನ್ನು ಒದಗಿಸಿವೆ. ಕೃಷಿಗೆ ಯೋಗ್ಯವಾದ ಭೂಮಿಯನ್ನು ಪಾಳು ಬೀಳಿಸದೆ ವ್ಯವಸಾಯ ಮಾಡಬೇಕು ಎಂದರು.ಸಹಜ ಸಮೃದ್ಧ ಸಂಸ್ಥೆಯ ಜಿ. ಕೃಷ್ಣಪ್ರಸಾದ್‌ ಮಾತನಾಡಿ, ಕೃಷಿಯ ಮೂಲ ಬೀಜ. ಆಯಾಯ ಭೌಗೋಳಿಕ ಸನ್ನಿವೇಶಕ್ಕೆ ಹೊಂದಿಕೊಳ್ಳುವ ಬಿತ್ತನೆ ಬೀಜಗಳನ್ನು ಬಳಕೆ ಮಾಡಬೇಕು. ಪ್ರಸ್ತುತ ಮಾರುಕಟ್ಟೆಯಲ್ಲಿ ದೇಶಿಯ ಬೀಜಗಳಿಗೆ ಹೆಚ್ಚು ಬೇಡಿಕೆ ಇದೆ. ಇಳುವರಿಯು ಬಿತ್ತನೆ ಬೀಜಗಳಿಂದ ಅಷ್ಟೇ ಅಲ್ಲದೆ ಅನುಸರಿಸುವ ಕೃಷಿ ಪದ್ಧತಿಯನ್ನು ಅವಲಂಬಿಸಿರುತ್ತದೆ ಎಂದು ತಿಳಿಸಿದರು.ಪ್ರಗತಿಪರ ರೈತ ಪಿ. ಶಿವಕುಮಾರಸ್ವಾಮಿ, ಮೈಸೂರಿನ ಆಕಾಶವಾಣಿಯ ಕಾರ್ಯನಿರ್ವಾಹಕರಾದ ಎನ್. ಕೇಶವಮೂರ್ತಿ ಮಾತನಾಡಿದರು.ಶಿಬಿರಾರ್ಥಿಗಳಾದ ಸ್ವಾಮಿಲವಣ, ಎಚ್.ಆರ್. ಶಿವಮಾದು, ಎಂ.ಪಿ. ರಾಮಶೆಟ್ಟಿ, ಎಸ್.ಬಿ. ಶೀತಲ, ಕೆ.ಎಸ್. ಪ್ರದೀಪ್ ಅವರು ಅನಿಸಿಕೆಗಳನ್ನು ಹಂಚಿಕೊಂಡರು.ವೈ.ಎಸ್. ಮಂಜು ಪಟೇಲ್ ಶಿಬಿರದ ವರದಿ ಮಂಡಿಸಿದರು. ಧಾನ್ಯಾ ಪ್ರಾರ್ಥಿಸಿದರು. ಡಾ. ಯು.ಎಂ. ರಕ್ಷಿತ್‌ ರಾಜ್ ಸ್ವಾಗತಿಸಿದರು. ಡಾ. ಬಿ.ಎನ್ ಜ್ಞಾನೇಶ್ ವಂದಿಸಿದರು. ಡಾ. ಜಿ.ಎಂ. ವಿನಯ್ ಕಾರ್ಯಕ್ರಮ ನಿರೂಪಿಸಿದರು.