10ರಿಂದ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ: ಡಾ.ಎನ್.ಕೆ. ಹೆಗಡೆ

| Published : Feb 03 2024, 01:46 AM IST

10ರಿಂದ ಮೂರು ದಿನಗಳ ಕಾಲ ತೋಟಗಾರಿಕೆ ಮೇಳ: ಡಾ.ಎನ್.ಕೆ. ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಬಾಗಲಕೋಟೆ: ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಸಕ್ತ ಸಾಲಿಗೆ ಬರ ಸಂಹಿಷ್ಣುತೆಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಫೆ.10, 11 ಹಾಗೂ 12ರಂದು ಮೂರು ದಿನಗಳ ಕಾಲ ತೋಟಗಾರಿಕೆ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ಎನ್.ಕೆ. ಹೆಗಡೆ ತಿಳಿಸಿದರು. ತೋವಿವಿಯ ವಿಸ್ತರಣಾ ನಿದೇರ್ಶನಾಲಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಪ್ರತಿ ತೋಟಗಾರಿಕೆ ಮೇಳ ರೈತರಲ್ಲಿ ಅಪೇಕ್ಷಿತ ಧನಾತ್ಮಕ ಬದಲಾವಣೆ ತರುವ ಅವಕಾಶ ಒದಗಿಸುತ್ತಿದ್ದು, ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯಗಳೊಂದಿಗೆ ತೋಟಗಾರಿಕೆ ಮೇಳ ಆಚರಿಸುತ್ತ ಬರಲಾಗಿದೆ. ಈ ವರ್ಷ ಬರ ಸಂಹಿಷ್ಣುತೆಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಜರುಗಿಸುತ್ತಿರುವುದು ವಿಶೇಷವಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಪ್ರಸಕ್ತ ಸಾಲಿಗೆ ಬರ ಸಂಹಿಷ್ಣುತೆಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಫೆ.10, 11 ಹಾಗೂ 12ರಂದು ಮೂರು ದಿನಗಳ ಕಾಲ ತೋಟಗಾರಿಕೆ ಮೇಳ ಹಮ್ಮಿಕೊಳ್ಳಲಾಗಿದೆ ಎಂದು ತೋವಿವಿಯ ಕುಲಪತಿ ಡಾ.ಎನ್.ಕೆ. ಹೆಗಡೆ ತಿಳಿಸಿದರು.

ತೋವಿವಿಯ ವಿಸ್ತರಣಾ ನಿದೇರ್ಶನಾಲಯದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿ, ಪ್ರತಿ ತೋಟಗಾರಿಕೆ ಮೇಳ ರೈತರಲ್ಲಿ ಅಪೇಕ್ಷಿತ ಧನಾತ್ಮಕ ಬದಲಾವಣೆ ತರುವ ಅವಕಾಶ ಒದಗಿಸುತ್ತಿದ್ದು, ಪ್ರತಿ ವರ್ಷ ಒಂದೊಂದು ಧ್ಯೇಯ ವಾಕ್ಯಗಳೊಂದಿಗೆ ತೋಟಗಾರಿಕೆ ಮೇಳ ಆಚರಿಸುತ್ತ ಬರಲಾಗಿದೆ. ಈ ವರ್ಷ ಬರ ಸಂಹಿಷ್ಣುತೆಗಾಗಿ ತೋಟಗಾರಿಕೆ ಎಂಬ ಧ್ಯೇಯ ವಾಕ್ಯದೊಂದಿಗೆ ಜರುಗಿಸುತ್ತಿರುವುದು ವಿಶೇಷವಾಗಿದೆ ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೋಟಗಾರಿಕೆ ಮೇಳಕ್ಕೆ ಚಾಲನೆ ನೀಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಈ ಮೇಳದಲ್ಲಿ ವಿಶ್ವವಿದ್ಯಾಲಯದ ವ್ಯಾಪ್ತಿಯ 24 ಜಿಲ್ಲೆಗಳಿಂದ ಗುರುತಿಸಲ್ಪಟ್ಟ ಫಲಶ್ರೇಷ್ಠ ಪ್ರಶಸ್ತಿ ನೀಡಿ ಸನ್ಮಾನಿಸಲಾಗುತ್ತಿದೆ. ಮೇಳದಲ್ಲಿ ಪರಸ್ಪರ, ಗುಂಪು ಮತ್ತು ಸಮೂಹ ಎಂಬ ಸಂವಹನದ ಮೂರು ಪ್ರಕಾರ ಉಪಯೋಗಿಸಲಾಗುತ್ತಿದೆ. ಇದರಿಂದ ತಂತ್ರಜ್ಞಾನ ಅಳವಡಿಕೆಗೆ ಪ್ರೋತ್ಸಾಹಿಸಿದಂತಾಗುತ್ತದೆ. ಆದ್ದರಿಂದ ತೋಟಗಾರಿಕೆ ಮೇಳ ತಂತ್ರಜ್ಞಾನ ಪ್ರಸಾರದ ಅತ್ಯಂತ ಪರಿಣಾಮಕಾರಿ ವಿಧಾನವಾಗಿದೆ ಎಂದರು.

ಪ್ರತಿ ವರ್ಷ ಒಂದೇ ಸೂರಿನಡಿ ರೈತ ಸಮುದಾಯಕ್ಕೆ ನವೀನ, ಸಮಯೋಜಿಕ ತಂತ್ರಜ್ಞಾನ ವರ್ಗಾವಣೆ ಮಾಡಲು ತೋಟಗಾರಿಕೆ ಮೇಳ ಆಯೋಜಿಸುತ್ತಿದ್ದು, ಮೇಳದ ಯೋಜನೆ ಮೂಲಕ ವಿಶ್ವವಿದ್ಯಾಲಯದ ಮುಖ್ಯ ಉದ್ದೇಶಗಳಲ್ಲೊಂದಾದ ತಂತ್ರಜ್ಞಾನದ ವರ್ಗಾವಣೆ ಯಶಸ್ವಿಯಾಗುತ್ತಿದೆ. ತೋಟಗಾರಿಕೆಯ ತರಕಾರಿ ಬೆಳೆಗಳ, ಹೂವಿನ, ಹಣ್ಣಿನ ವಿವಿಧ ತಳಿಗಳ, ಕೊಯ್ಲೋತ್ತರ ತೋಟಗಾರಿಕಾ ಉತ್ಪನ್ನಗಳ ಪ್ರದರ್ಶನ, ಕ್ಷೇತ್ರ ಭೇಟಿ, ಪ್ರಾತ್ಯಕ್ಷಿಕೆ, ವಿಡಿಯೋ ಮುಂತಾದವುಗಳ ಮೂಲಕ ತಂತ್ರಜ್ಞಾನ ಮಾಹಿತಿ ನೀಡಲಾಗುತ್ತಿದೆ. ಮೇಳದಲ್ಲಿ 200ಕ್ಕೂ ಹೆಚ್ಚು ಮಳಿಗೆ ಹಾಕಲಾಗುತ್ತಿದೆ ಎಂದರು.

ಸಮಗ್ರ ಕೃಷಿ ಪದ್ಧತಿಯಲ್ಲಿ ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳ ಸಮಗ್ರ ಮಾಹಿತಿ ದೊರೆಯುತ್ತದೆ. ವಿಜ್ಞಾನಿಗಳು, ಪ್ರಗತಿಪರ ರೈತ, ಉದ್ಯಮಿಗಳು ಮುಂತಾದವರನ್ನು ನೇರವಾಗಿ ಭೇಟಿಯಾಗಿ ಅವರ ಯಶೋಗಾಥೆಗಳಿಂದ ಪ್ರೇರಣೆ ಪಡೆಯುವುದಲ್ಲದೆ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬಹುದಾಗಿದೆ. ಪ್ರತಿದಿನವೂ ಸಾಧಕ ರೈತರು ತಮ್ಮ ಅನುಭವವನ್ನು ಇತರೆ ರೈತರಿಗೆ ಹಂಚಿಕೊಳ್ಳಲಿದ್ದಾರೆ. ಜೊತೆಗೆ ವಿಜ್ಞಾನಿಗಳು, ಪ್ರಗತಿಪರ ರೈತರು ಮತ್ತು ಇತರೆ ರೈತರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು.

ತೋಟಗಾರಿಕೆ ವಿವಿ ವಿಸ್ತರಣಾ ನಿರ್ದೇಶಕ ಹಾಗೂ ತೋಟಗಾರಿಕೆ ಮೇಳದ ಅಧ್ಯಕ್ಷ ಡಾ.ಲಕ್ಷ್ಮೀನಾರಾಯಣ ಹೆಗಡೆ ಮಾತನಾಡಿ, ಈ ಬಾರಿ ಮೇಳದಲ್ಲಿ ನೀರು ಸಂರಕ್ಷಣೆ, ಹನಿ ನೀರಾವರಿ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. 26 ತಳಿಯ ದ್ರಾಕ್ಷಿ ಬೆಳೆಯ ಪ್ರದರ್ಶನ ಮತ್ತು ಮಾರಾಟ ಸಹ ಏರ್ಪಡಿಸಲಾಗುತ್ತಿದೆ. ರೈತರಿಗೆ ಸುಲಭವಾಗಿ ತೋಟಗಾರಿಕೆ ಬೆಳೆಗಳ ಉತ್ಪಾದನೆ ಬಗ್ಗೆ ಮಾಹಿತಿ ಸಿಗುವ ಸಲುವಾಗಿ ಹಾರ್ಟ್‌ ಆ್ಯಪ್ ಎಂಬ ತಂತ್ರಜ್ಞಾನ ಅಭಿವೃದ್ಧಿಪಡಿಸಿ ಬಿಡುಗಡೆಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

ತೋವಿವಿಯ ಸಂಶೋಧನಾ ನಿರ್ದೇಶಕ ಡಾ.ಎಚ್.ಪಿ. ಮಹೇಶ್ವರಪ್ಪ ಮಾತನಾಡಿ, ಕೊಯ್ಲೋತ್ತರ ತಂತ್ರಜ್ಞಾನದಡಿ ಬೇಲದ ಹಣ್ಣಿನ ಬಾರ್ ತಯಾರಿಕೆ ಮತ್ತು ಸಂರಕ್ಷಣೆ, ರಸ ಮತ್ತು ಪಾನೀಯಗಳಾಗಿ ಸಂಸ್ಕರಿಸಲು ವೈನ್ ದ್ರಾಕ್ಷಿ ತಳಿಗಳ ಸೂಕ್ತತೆ, ವೆಸ್ಟ್ ಇಂಡಿಯನ್ ಚೆರ್ರಿಯ ರಸ ಮತ್ತು ಸ್ಕ್ವಾಷ್ ಸಂರಕ್ಷಣೆಗಾಗಿ ಪ್ರೋಟೋಕಾಲ್ ಅಭಿವೃದ್ಧಿ, ಜರ್ವರಾ ಮತ್ತು ಕಾರ್ನಶನಲ್ಲಿ ಮೌಲ್ಯವರ್ಧನೆಗೆ ಟಿಂಟಿಂಗ್ ತಂತ್ರಗಳ ಪ್ರಮಾಣೀಕರಣ, ಆರೋಗ್ಯಕರ ನೋನಿ ಕೋಕಮ್ ಮಿಶ್ರಿತ ಸಿದ್ಧ ಪಾನಿಯ ಅಭಿವೃದ್ಧಿ, ಅಂಬಲಿ ಹಲಸು ತಿರುಳಿನ ಸಂರಕ್ಷಣೆ ಬಗ್ಗೆ ಮಾಹಿತಿ ನೀಡಲಾಗುತ್ತದೆ ಎಂದರು.ಪತ್ರಿಕಾಗೋಷ್ಠಿಯಲ್ಲಿ ತೋಟಗಾರಿಕೆ ವಿವಿಯ ಕುಲಸಚಿವ ಡಾ.ಟಿ.ಬಿ. ಅಳ್ಳೊಳ್ಳಿ, ತೋಟಗಾರಿಕೆ ವಿವಿಯ ಡೀನ್ ಸ್ನಾತಕೋತ್ತರ ರವೀಂದ್ರ ಮುಲಗೆ, ವಿಶ್ವವಿದ್ಯಾಲಯದ ಡೀನ್ ಬಾಲಾಜಿ ಕುಲಕರ್ಣಿ ಸೇರಿದಂತೆ ಇತರರು ಇದ್ದರು.