ಜಿಲ್ಲೆಯ ಹೊಸನಗರ ತಾಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಮರುಸ್ಥಾಪಿಸಬೇಕೆಂಬ ಮಲೆನಾಡಿನ ಜನರ ಬೇಡಿಕೆಯನ್ನು ಈಡೇರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಜಿಲ್ಲೆಯ ಹೊಸನಗರ ತಾಲೂಕನ್ನು ಪ್ರತ್ಯೇಕ ವಿಧಾನಸಭಾ ಕ್ಷೇತ್ರವನ್ನಾಗಿ ಮರುಸ್ಥಾಪಿಸಬೇಕೆಂಬ ಮಲೆನಾಡಿನ ಜನರ ಬೇಡಿಕೆಯನ್ನು ಈಡೇರಿಸುವಂತೆ ಸಂಸದ ಬಿ.ವೈ.ರಾಘವೇಂದ್ರ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.ಲೋಕಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು, 1972ರಿಂದ 2004 ರವರೆಗೆ ಸ್ವತಂತ್ರ ಅಸ್ತಿತ್ವ ಹೊಂದಿದ್ದ ಹೊಸನಗರ ಕ್ಷೇತ್ರವನ್ನು 2008ರ ಮರುವಿಂಗಡಣೆಯ ಸಮಯದಲ್ಲಿ ಅಕ್ಕಪಕ್ಕದ ಕ್ಷೇತ್ರಗಳಿಗೆ ಹಂಚಿಕೆ ಮಾಡಲಾಗಿತ್ತು. ಈ ನಿರ್ಧಾರದಿಂದಾಗಿ ತಾಲೂಕಿನ ಸಮಗ್ರ ಅಭಿವೃದ್ಧಿಗೆ ದೊಡ್ಡ ಹಿನ್ನಡೆಯಾಗಿದೆ ಎಂದು ಸಂಸದರು ಸದನಕ್ಕೆ ವಿವರಿಸಿದರು.ಶರಾವತಿ ಮತ್ತು ವಾರಾಹಿ ನದಿಗಳ ಉಗಮ ಸ್ಥಾನವಾಗಿರುವ ಇಲ್ಲಿನ ಭೌಗೋಳಿಕ ಮತ್ತು ಆರ್ಥಿಕ ಸವಾಲುಗಳು ವಿಭಿನ್ನವಾಗಿದ್ದು, ಜನಸಂಖ್ಯೆಗಿಂತ ಹೆಚ್ಚಾಗಿ ಪ್ರದೇಶದ ವಿಸ್ತೀರ್ಣವನ್ನು ಪರಿಗಣಿಸುವುದು ಅವಶ್ಯಕ ಎಂದರು.
ಪಶ್ಚಿಮ ಘಟ್ಟದ ಕಠಿಣ ಭೂಪ್ರದೇಶಗಳನ್ನು ಕೇವಲ ಜನಸಂಖ್ಯೆಯ ಆಧಾರದ ಮೇಲೆ ನಗರ ಪ್ರದೇಶಗಳೊಂದಿಗೆ ಹೋಲಿಸುವುದು ಅವೈಜ್ಞಾನಿಕ ಎಂದು ರಾಘವೇಂದ್ರ ಪ್ರತಿಪಾದಿಸಿದರು. ಏಪ್ರಿಲ್ ಮೊದಲ ವಾರದಲ್ಲಿ ಹೊಸನಗರದಲ್ಲಿ ನಡೆದ ಪಾದಯಾತ್ರೆಯನ್ನು ಉಲ್ಲೇಖಿಸಿದ ಅವರು, ಪಕ್ಷಾತೀತವಾಗಿ ಮಠಾಧೀಶರು ಮತ್ತು ಸಾವಿರಾರು ನಾಗರಿಕರು ಈ ಬೇಡಿಕೆಗಾಗಿ ಬೀದಿಗಿಳಿದಿದ್ದಾರೆ. ಇದು ಕೇವಲ ರಾಜಕೀಯ ಬೇಡಿಕೆಯಲ್ಲ, ಮಲೆನಾಡಿನ ಜನರ ಘನತೆಯ ಪ್ರಶ್ನೆಯಾಗಿದೆ ಎಂದು ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟರು.ಮುಂದಿನ ಕ್ಷೇತ್ರ ಮರುವಿಂಗಡಣೆಯ ಸಂದರ್ಭದಲ್ಲಿ ಹೊಸನಗರಕ್ಕೆ ಪ್ರತ್ಯೇಕ ಅಸ್ತಿತ್ವ ನೀಡುವುದು ಆಡಳಿತಾತ್ಮಕವಾಗಿ ಅನಿವಾರ್ಯವಾಗಿದೆ. ಈ ಮೂಲಕ ಮಲೆನಾಡಿನ ಜನರಿಗೆ ನ್ಯಾಯಯುತ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.