ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಶ್ರೀರಾಮೋತ್ಸವದ ಮಾತೃ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ಮದುವೆಯ ಮೂಲ ಉದ್ದೇಶವೇ ಉತ್ತಮ ಸಂತಾನವನ್ನು ಪಡೆಯುವುದಾಗಿದ್ದು, ಒಂದೇ ಮಕ್ಕಳನ್ನು ಹೊಂದಿದರೆ ನಮ್ಮ ಜನಸಂಖ್ಯೆ ಅರ್ಧಕ್ಕೆ ಇಳಿದಂತೆ. ಇಬ್ಬರು ಮಕ್ಕಳನ್ನು ಪಡೆದರೆ ಅಲ್ಲಿಂದಲ್ಲಿಗೆ ಆದಂತಾಗುತ್ತದೆ. ಮೂರು ಮಕ್ಕಳನ್ನು ಪಡೆದಾಗ ಸಮಾಜ ಸಶಕ್ತವಾಗಲು ಸಾಧ್ಯ. ಮೂರು ಮಕ್ಕಳು ಎನ್ನುವಾಗ ತಲೆತಗ್ಗಿಸುವ ಅವಶ್ಯಕತೆ ಇಲ್ಲ. ಸಮಾಜ ಅಂತಹ ಮಾತೆಯರನ್ನು ಗೌರವಿಸಬೇಕಿದೆ ಎಂದರು.
ಹೊಸನಗರ: ಸಂತಾನವೇ ಸಂಪತ್ತಾಗಿದ್ದು, ಮಕ್ಕಳು ಬೇಡ ಎಂಬ ಆಧುನಿಕ ಚಿಂತನೆ ದೇಶದ ವಿನಾಶಕ್ಕೆ ಕಾರಣವಾಗಬಹುದಾಗಿದೆ. ಮಿತ ಸಂತಾನದಿಂದ ಸಮಾಜವೇ ಕ್ಷಯವಾಗುವ ಆಪತ್ತು ಎದುರಾಗಿದ್ದು, ಸಮಾಜ ತಕ್ಷಣ ಎಚ್ಚೆತ್ತುಕೊಳ್ಳಬೇಕಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿ ಹೇಳಿದರು.ಹೊಸನಗರದ ಶ್ರೀರಾಮಚಂದ್ರಾಪುರ ಮಠದಲ್ಲಿ ನಡೆಯುತ್ತಿರುವ ಶ್ರೀರಾಮೋತ್ಸವದ ಮಾತೃ ಸಮಾವೇಶದಲ್ಲಿ ಮಾತನಾಡಿದ ಶ್ರೀಗಳು, ಮದುವೆಯ ಮೂಲ ಉದ್ದೇಶವೇ ಉತ್ತಮ ಸಂತಾನವನ್ನು ಪಡೆಯುವುದಾಗಿದ್ದು, ಒಂದೇ ಮಕ್ಕಳನ್ನು ಹೊಂದಿದರೆ ನಮ್ಮ ಜನಸಂಖ್ಯೆ ಅರ್ಧಕ್ಕೆ ಇಳಿದಂತೆ. ಇಬ್ಬರು ಮಕ್ಕಳನ್ನು ಪಡೆದರೆ ಅಲ್ಲಿಂದಲ್ಲಿಗೆ ಆದಂತಾಗುತ್ತದೆ. ಮೂರು ಮಕ್ಕಳನ್ನು ಪಡೆದಾಗ ಸಮಾಜ ಸಶಕ್ತವಾಗಲು ಸಾಧ್ಯ. ಮೂರು ಮಕ್ಕಳು ಎನ್ನುವಾಗ ತಲೆತಗ್ಗಿಸುವ ಅವಶ್ಯಕತೆ ಇಲ್ಲ. ಸಮಾಜ ಅಂತಹ ಮಾತೆಯರನ್ನು ಗೌರವಿಸಬೇಕಿದೆ ಎಂದರು.
ಡಿಸೆಂಬರ್ 2024 ರಲ್ಲಿ ನಡೆದ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ನಾವು ಈ ವಿಷಯವನ್ನು ಪ್ರಸ್ತಾಪಿಸಿದ್ದೆವು. ಅದು ಸಮಾಜದಲ್ಲಿ ಜಾಗೃತಿ ಮೂಡಿಸುತ್ತಿದ್ದು, ಹಿರಿಯ ವಯಸ್ಸಿನ ಅನೇಕರು ಯುವ ದಂಪತಿಗಳಿಗೆ ಮಕ್ಕಳೆಂಬ ಸಂಪತ್ತನ್ನು ಪಡೆಯುವಂತೆ ಪ್ರೇರಣೆ ನೀಡುತ್ತಿರುವುದು ಕಂಡುಬರುತ್ತಿದೆ. ತಾಯಿ ಎಂಬ ಪದವಿಯು ಜಗತ್ತಿನ ಎಲ್ಲಾ ಪದವಿಗಿಂತ ಬಹುದೊಡ್ಡ ಪದವಿಯಾಗಿದ್ದು, ಪ್ರಜಾ ಸಂಪತ್ತನ್ನು ಸಂವರ್ಧಿಸುವ ತಾಯಿಯನ್ನು ಸಮಾಜ ಗೌರವಿಸಬೇಕು. ಇಂದಿನ ಯುವ ಪೀಳಿಗೆ ದುಡಿಮೆಯಲ್ಲಿ ಮೈಮರೆತು ಪ್ರಜಾ ಸಂವರ್ಧನೆಯ ಕರ್ತವ್ಯದಿಂದ ದೂರವಾಗುತ್ತಿರುವುದು ಆತಂಕಕಾರಿ ಎಂದು ಕಳವಳ ವ್ಯಕ್ತಪಡಿಸಿದರು.ಕಂಚಿಯ ಪರಮಾಚಾರ್ಯರು ಕೆಲವು ದಶಕಗಳ ಮೊದಲು 10 ಮಕ್ಕಳನ್ನು ಹೆತ್ತ ತಾಯಿಗೆ ವೀರಮಾತಾ ಪ್ರಶಸ್ತಿ ನೀಡಿ ಆಶೀರ್ವಾದ ಮಾಡುತ್ತಿದ್ದರು. ಅಭಿನವ ಶಂಕರರಾದ ಅವರು ಪ್ರಜಾ ಸಂಪತ್ತಿನ ಮಹತ್ವವನ್ನು ಅಂದೇ ಗುರುತಿಸಿದ್ದರು ಎಂದು ಅಭಿಪ್ರಾಯಪಟ್ಟರು.ಇದೇ ಸಂದರ್ಭದಲ್ಲಿ 3 ಅಥವಾ ಮೂರಕ್ಕಿಂತ ಹೆಚ್ಚು ಮಕ್ಕಳನ್ನು ಪಡೆದ 87 ಮಾತೆಯರನ್ನು "ಧನ್ಯಜನನೀ " ಎಂಬ ಪ್ರಶಸ್ತಿಯನ್ನು ನೀಡಿ ಆಶೀರ್ವಾದಿಸಿದರು.
ರಾಮೋತ್ಸವದ ಪ್ರಯುಕ್ತ ಪುಷ್ಪ ರಥೋತ್ಸವ, ಪೂಗ ಪೂಜೆ, ಮಾತೆಯರಿಂದ ಕುಂಕುಮಾರ್ಚನೆ, ಅಖಂಡ ಭಜನೆಗೆ ಚಾಲನೆ ದೊರೆಯಿತು. ನಾಳೆ ಹಾಗೂ ನಾಡಿದ್ದು ರಾಮೋತ್ಸವದ ಅಂಗವಾಗಿ ರಾಮಜನ್ಮೋತ್ಸವ, ರಥೋತ್ಸವ, ಸೀತಾರಾಮ ಪಟ್ಟಾಭಿಷೇಕ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ.