ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇರುವ ನೂರಾರು ವರ್ಷಗಳ ಹಳೆಯ ದೇವಾಲಯ ನಿಧಿ ಎತ್ತುವ ಕಳ್ಳರ ಕೈಗಳಿಗೆ ಸಿಲುಕಿ ದೇವಾಲಯ ಕೆಲವೇ ದಿನಗಳಲ್ಲಿ ನೆಲಕ್ಕೆ ಉರುಳಿ ಬೀಳುವ ಸ್ಥಿತಿಗೆ ತಲುಪುತ್ತಿದೆ.
ಕನ್ನಡಪ್ರಭ ವಾರ್ತೆ ಮುಳಬಾಗಿಲುತಾಲೂಕಿನ ಬೈರಕೂರು ಹಾಗೂ ತೊಂಡಹಳ್ಳಿ ಮಾರ್ಗ ಮಧ್ಯದಲ್ಲಿ ಇರುವ ಹಾಗೂ ಇರಗಮುತ್ತನಹಳ್ಳಿ ಬಸ್ ಗೇಟ್‌ನ ಸಮೀಪದ ಹೊಸರಾಯ ಸ್ವಾಮಿ ದೇವಾಲಯ ನಿಧಿ ಕಳ್ಳರ ಕೈಗಳಿಗೆ ಸಿಲುಕಿ ನಾಶವಾಗುತ್ತಾ ಕೆಲವೇ ದಿನಗಳಲ್ಲಿ ದೇವಾಲಯ ಉರುಳಿ ಬೀಳುವ ಹಂತಕ್ಕೆ ತಲುಪುತ್ತಿದೆ.ತಾಲೂಕಿನ ಬೈರಕೂರು ಹಾಗೂ ತೊಂಡಹಳ್ಳಿ ಮುಖ್ಯ ರಸ್ತೆಯ ಹಾಗೂ ನೆರೆಯ ಆಂಧ್ರಪ್ರದೇಶದ ಪುಂಗನೂರು ಕಡೆಗೆ ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲೇ ಇರುವ ನೂರಾರು ವರ್ಷಗಳ ಹಳೆಯ ದೇವಾಲಯ ನಿಧಿ ಎತ್ತುವ ಕಳ್ಳರ ಕೈಗಳಿಗೆ ಸಿಲುಕಿ ದೇವಾಲಯ ಕೆಲವೇ ದಿನಗಳಲ್ಲಿ ನೆಲಕ್ಕೆ ಉರುಳಿ ಬೀಳುವ ಸ್ಥಿತಿಗೆ ತಲುಪುತ್ತಿದೆ.ಕುರುಬ ಜನಾಂಗದ ಸಂಪ್ರದಾಯದಂತೆ 9-10 ವರ್ಷಗಳಿಗೊಮ್ಮೆ ನಡೆಯುವ ಕುರುಬರ ದ್ಯಾವರ ನಡೆಯುವ ವಿಶೇಷತೆಯ ಹೊಸರಾಯ ಸ್ವಾಮಿ ದೇವಾಲಯವನ್ನು ಪೂರ್ವಿಕರು ನೂರಾರು ವರ್ಷಗಳ ಹಿಂದೆ ನಿರ್ಮಿಸಿ, ಸಂಪ್ರದಾಯದಂತೆ ಒಂದೊಂದು ಕುಟುಂಬ ವಿಶೇಷ ಪೂಜೆಗಾಗಿ ಚಪ್ಪಡಿ ಕಲ್ಲುಗಳಲ್ಲಿ ಸಣ್ಣ ಗುಡಿಗಳನ್ನೂ ಸಹ ನಿರ್ಮಿಸಲಾಗಿದೆ.ದ್ಯಾವರ(ಪೂಜೆ), ವಿಜಯ ದಶಮಿ ಪೂಜೆಗಳಲ್ಲಿ ಮಾತ್ರ ತೆರೆಯುವ ದೇವಾಲಯ ನಂತರ ಇತರೆ ದಿನಗಳಲ್ಲಿ ತೆರೆಯುವುದಿಲ್ಲ. ಹೀಗಾಗಿ ಹಳೆಯ ದೇವಾಲಯದಲ್ಲಿ ನಿಧಿ(ಬಂಗಾರ ಅಥವಾ ಮೌಲ್ಯಯುತ ವಸ್ತುಗಳು) ಸಿಗಬಹುದು ಎಂದು ನಿಧಿ ಎತ್ತುವ ದಂದೆಕೋರರು ದೇವಾಲಯದ ಪಾಯ, ಗೋಡೆಗಳು, ದೇವರ ಗೋಪುರ, ಸಣ್ಣ ಪುಟ್ಟ ಚಪ್ಪಡಿ ಕಲ್ಲುಗಳ ದೇವಾಲಯಗಳನ್ನು ಗಡಾರಿ ಅಥವಾ ಇತರೆ ಆಯುಧಗಳಿಂದ ಅಗೆದು ದೇವಾಲಯವನ್ನು ಧ್ವಂಸ ಮಾಡಿದ್ದಾರೆ. ಇದರಿಂದ ಸಾಂಪ್ರದಾಯಿಕವಾಗಿ ಪೂಜೆ ನಡೆಯುವ ದೇವಾಲಯ ಅವನತಿಯತ್ತ ಸಾಗುತ್ತಿದೆ.ನಿಧಿ ಕಳ್ಳರು ದೇವಾಲಯದ ಗಟ್ಟಿಮುಟ್ಟಾದ ಪಾಯವನ್ನು ಸುರಂಗದಂತೆ ಸುಮಾರು ಹತ್ತಾರು ಅಡಿಗಳಷ್ಟು ಆಳ ಅಗೆದು ನಿಧಿ ಇರಬಹುದೆ ಎಂದು ನೋಡಿದ್ದಾರೆ.ಇನ್ನು ಸಣ್ಣ ಪುಟ್ಟ ಚಪ್ಪಡಿ ಕಲ್ಲುಗಳ ಗುಡಿಗಳ ಚಪ್ಪಡಿಗಳನ್ನು ಎತ್ತಿ ಬಿಸಾಡಿ ಕಲ್ಲುಗಳನ್ನು ಧ್ವಂಸ ಮಾಡಿರುವುದು ಕಂಡುಬರುತ್ತದೆ.ದೇವಾಲಯದ ಸುಂದರವಾದ ಗೋಪುರವನ್ನೂ ಬಿಡದ ಕಳ್ಳರು ಗೋಪುರಕ್ಕೆ ದೊಡ್ಡ ರೀತಿಯಲ್ಲಿ ಹೊಡೆದು ನಾಶಪಡಿಸಿದ್ದಾರೆ. ಹೀಗಾಗಿ ನಿಧಿ ಕಳ್ಳರ ದಂದೆ ಹೆಚ್ಚಾಗುತ್ತಿದೆ. ಹೀಗಾಗಿ ಸಂಪ್ರದಾಯದ ಪೂಜೆಗಳನ್ನು ನಡೆಸಿಕೊಂಡು ಬರುತ್ತಿರುವ ದೇವಾಲಯಕ್ಕೆ ರಕ್ಷಣೆ ಬೇಕಾಗಿದೆ ಎಂದು ಅರಿವು ಪ್ರಭಾಕರ್ ತಿಳಿಸಿದ್ದಾರೆ.ಸಾಮಾನ್ಯವಾಗಿ ಪೂರ್ವಿಕರು ಜನಾಂಗಕ್ಕೆ ಅನುಗುಣವಾಗಿ ನಡೆಸಿಕೊಂಡು ಬರಲು ನಿರ್ಮಾಣ ಮಾಡಿರುವ ದೇವಾಲಯ ಕಳ್ಳಕಾಕರರ ಹಾಗೂ ನಿಧಿ ಕಳ್ಳರ ಕೈಗಳಿಗೆ ಸಿಲುಕಿ ನಾಶವಾಗುತ್ತಿರುವುದು ನೋವಿನ ವಿಚಾರ. ಹೀಗಾಗಿ ನಿಧಿ ಕಳ್ಳರಿಗೆ ನಿಯಂತ್ರಣ ಹಾಕಿ ದೇವಾಲಯ ಮುಂದಿನ ಜನಾಂಗಕ್ಕೂ ಉಳಿಯಬೇಕಾಗಿದೆ ಎಂದು ಸ್ಥಳೀಯ ಸೂರ್ಯಪ್ರಕಾಶ್ ತಿಳಿಸಿದರು.