ಇಡೀ ಧಾರವಾಡದ ಎಲ್ಲ ರೀತಿಯ ಕಸ ಬಂದು ಬೀಳುವ ಹೊಸಯಲ್ಲಾಪುರದ ಕಸದ ಗುಡ್ಡೆಯಿಂದ ಕಲುಷಿತ, ವಿಷಯುಕ್ತ ಹೊಗೆಯು ಸುತ್ತಲಿನ ಬಡಾವಣೆಗಳ ಉಸಿರು ಕಟ್ಟುತ್ತಿದೆ. ಧಾರವಾಡದಲ್ಲಿ ಇದು ಹೊಸದಾಗಿ ಸೃಷ್ಟಿಯಾದ ಸಮಸ್ಯೆಯಲ್ಲ. ಹತ್ತಾರು ವರ್ಷಗಳಿಂದ ಈ ಕಸದ ಗುಡ್ಡದಿಂದ ಹೊರಸೂಸಲ್ಪಡುವ ವಿಷಕಾರಿ ಅನಿಲ ಕುಡಿದು ಜನರು ರೋಸಿ ಹೋಗಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ:

ಪ್ರತಿ ಚಳಿಗಾಲದಲ್ಲಿ ದೆಹಲಿಯನ್ನು ಆವರಿಸುವ ದಟ್ಟವಾದ ಹೊಗೆಯು ರಾಷ್ಟ್ರದ ರಾಜಧಾನಿಯ ಜನರನ್ನು ಉಸಿರುಗಟ್ಟಿಸಿದ್ದರೆ, ಅದೇ ಮಾದರಿಯಲ್ಲಿ ಚಳಿಗಾಲ ಹಾಗೂ ಬೇಸಿಗೆಯಲ್ಲಿ ಧಾರವಾಡದ ಕೆಲವು ಬಡಾವಣೆಗಳ ಜನರು ಉಸಿರು ಬಿಗಿ ಹಿಡಿದು ಜೀವನ ಸಾಗಿಸುವಂತೆ ಮಾಡುತ್ತಿದೆ ಇಲ್ಲಿನ ಹೊಸಯಲ್ಲಾಪುರದ ಕಸದ ಗುಡ್ಡೆ.

ಇಡೀ ಧಾರವಾಡದ ಎಲ್ಲ ರೀತಿಯ ಕಸ ಬಂದು ಬೀಳುವ ಇದೇ ಹೊಸಯಲ್ಲಾಪುರದ ಕಸದ ಗುಡ್ಡೆಗೆ. ಇಲ್ಲಿನ ಕಲುಷಿತ, ವಿಷಯುಕ್ತ ಹೊಗೆಯು ಸುತ್ತಲಿನ ಬಡಾವಣೆಗಳ ಉಸಿರು ಕಟ್ಟುತ್ತಿದೆ. ಧಾರವಾಡದಲ್ಲಿ ಇದು ಹೊಸದಾಗಿ ಸೃಷ್ಟಿಯಾದ ಸಮಸ್ಯೆಯಲ್ಲ. ಹತ್ತಾರು ವರ್ಷಗಳಿಂದ ಈ ಕಸದ ಗುಡ್ಡದಿಂದ ಹೊರಸೂಸಲ್ಪಡುವ ವಿಷಕಾರಿ ಅನಿಲ ಕುಡಿದು ಜನರು ರೋಸಿ ಹೋಗಿದ್ದಾರೆ. ಇಷ್ಟಾಗಿಯೂ ಮಹಾನಗರ ಪಾಲಿಕೆಯಿಂದ ಇದಕ್ಕೆ ಪರಿಹಾರ ಒದಗಿಸಲು ಸಾಧ್ಯವಾಗುತ್ತಿಲ್ಲ.

ಚಳಿಗಾಲದ ಗಾಳಿಗೆ ಹಲವು ದಿನಗಳಿಗಿಂದ ಹೊಸಯಲ್ಲಾಪುರ ಹಾಗೂ ಸುತ್ತಲಿನ ಪ್ರದೇಶವು ದುರ್ವಾಸನೆ ಮತ್ತು ಡಂಪ್‌ ಯಾರ್ಡ್‌ನಿಂದ ಹೊರಸೂಸುವ ಹೊಗೆಯಿಂದ ಆವೃತವಾಗಿದೆ. ಜತೆಗೆ ಬೂದಿಯ ಕಣಗಳು ಮನೆಗೆ ಪ್ರವೇಶಿಸಿ ಬಟ್ಟೆ, ಸೋಫಾ ಮತ್ತು ಪಾತ್ರೆಗಳ ಮೇಲೆ ಲೇಪಿತವಾಗುತ್ತಿದೆ. ಬಾಗಿಲು ಮತ್ತು ಕಿಟಕಿಗಳನ್ನು ತೆರೆದಿಡುವುದು ಅಸಾಧ್ಯವಾಗಿದೆ ಎಂದು ಹೊಸಯಲ್ಲಾಪುರ ನಿವಾಸಿ ವಿದ್ಯಾ ಭಟ್ ಬೇಸರ ವ್ಯಕ್ತಪಡಿಸುತ್ತಾರೆ.

ಗ್ಯಾಸ್‌ ಚೇಂಬರ್‌:

ಹೊಸಯಲ್ಲಾಪುರ ಮಾತ್ರವಲ್ಲದೇ, ಹಳೆ ಧಾರವಾಡ, ಯಾಲಕ್ಕಿ ಶೆಟ್ಟರ್‌ ಕಾಲನಿ, ದಾನೇಶ್ವರಿ ನಗರ, ವಿದ್ಯಾಗಿರಿ, ರಜತಗಿರಿ ಹಾಗೂ ಹೆಚ್ಚಿನ ಗಾಳಿ ಇದ್ದರೆ ಹೊಗೆಯು ಮಾಳಮಡ್ಡಿ ಗುಡ್ಡ ಸಹ ಏರಿ ಬರುತ್ತದೆ. ಸುಮಾರು 80,000ಕ್ಕೂ ಹೆಚ್ಚು ಜನರು ಉಸಿರಾಟದ ತೊಂದರೆ ಅನುಭವಿಸುವ ಭೀತಿಯಲ್ಲಿದ್ದು, ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಎಲ್ಲ ಬಾಗಿಲು ಮತ್ತು ಕಿಟಕಿ ಮುಚ್ಚುವ ಪರಿಸ್ಥಿತಿ ಇದೆ. ಅಕ್ಷರಶಃ ಹೊಸಯಲ್ಲಾಪುರ ತ್ಯಾಜ್ಯ ವಿಲೇವಾರಿ ಅಂಗಳವು ಗ್ಯಾಸ್ ಚೇಂಬರ್ ಆಗಿ ಮಾರ್ಪಟ್ಟಿದ್ದು, ಮಹಾನಗರ ಪಾಲಿಕೆ ಮತ್ತು ವಾಯು ಮಾಲಿನ್ಯ ನಿಯಂತ್ರಣ ಮಂಡಳಿಯು ಕ್ರಮ ತೆಗೆದುಕೊಳ್ಳಬೇಕಿದೆ ಎಂಬುದು ಸ್ಥಳೀಯರ ಆಗ್ರಹ.

ಬಡಾವಣೆ ಬಿಟ್ಟು ಹೋಗಿದ್ದಾರೆ:

ನಿತ್ಯದ ಮನೆ ಕಸ ಮಾತ್ರವಲ್ಲದೇ ವಿವಿಧ ಆಸ್ಪತ್ರೆಗಳಿಂದ ಸಂಗ್ರಹಿಸಲಾದ ವೈದ್ಯಕೀಯ ತ್ಯಾಜ್ಯ, ಸತ್ತ ಪ್ರಾಣಿಗಳು ಸಹ ಇಲ್ಲಿಯೇ ಬಂದು ಬೀಳುತ್ತವೆ. ಯಾರೂ ಈ ತ್ಯಾಜ್ಯಕ್ಕೆ ಬೆಂಕಿ ಹಚ್ಚದೇ ಇದ್ದರೂ ರಾಸಾಯನಿಕ ಕ್ರಿಯೆಯಿಂದ ತಾನಾಗಿಯೇ ಬೆಂಕಿ ಹೊತ್ತಿಕೊಳ್ಳುತ್ತಿದೆ. ಅದರಲ್ಲೂ ಚಳಿಗಾಲದಲ್ಲಿ ಜೋರಾದ ಗಾಳಿ ಬೀಸುತ್ತಿರುವುದರಿಂದ, ಕಸ ವಿಲೇವಾರಿ ಸ್ಥಳದಿಂದ ಬೂದಿ ಹಾರಿ ಪಾತ್ರೆ ಮತ್ತು ಬಟ್ಟೆಗಳ ಮೇಲೆ ಬೀಳುತ್ತಿದೆ. ಮಾರಕ ಕಾಯಿಲೆಗಳು ತಗುಲಬಹುದೆಂಬ ಭಯವಿದೆ. ಇಲ್ಲಿಯ ಕೆಲ ಜನರು ಬಡಾವಣೆಯನ್ನೇ ಬಿಟ್ಟು ಹೋಗಿದ್ದಾರೆ. ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಹಲವು ಸಲ ದೂರು ನೀಡಿದರೂ ಶಾಶ್ವತ ಪರಿಹಾರ ಸಿಗುತ್ತಿಲ್ಲ ಎಂದು ದಾನೇಶ್ವರಿ ನಗರದ ಕುರಿ ಎಂಬುವರು ಅಳಲು ತೋಡಿಕೊಂಡರು.

200 ಮೆಟ್ರಿಕ್ ಟನ್ ಸಾಮರ್ಥ್ಯದ ಘನತ್ಯಾಜ್ಯ ನಿರ್ವಹಣಾ (ಎಸ್‌ಡಬ್ಲ್ಯೂಎಂ) ಸ್ಥಾವರವನ್ನು ಇಲ್ಲಿ ಸ್ಥಾಪಿಸಲಾಗಿದೆ. ಆದರೆ, ಪ್ರತಿದಿನ ಸಂಗ್ರಹಿಸಿ ಇಲ್ಲಿ ಸುರಿಯುವ ತ್ಯಾಜ್ಯವು 450 ಮೆಟ್ರಿಕ್ ಟನ್‌ಗಿಂತ ಹೆಚ್ಚು. ಅಂದರೆ ತ್ಯಾಜ್ಯದ ಶೇ. 50ರಷ್ಟು ಸಹ ನಿರ್ವಹಿಸಲಾಗುತ್ತಿಲ್ಲ. ಮಹಾನಗರ ಪಾಲಿಕೆಯು ಈ ತ್ಯಾಜ್ಯವನ್ನು ಬೇರ್ಪಡಿಸಿ ಗೊಬ್ಬರ ಮಾಡಲಾಗುತ್ತಿದೆ ಎಂದು ಹೇಳುತ್ತಿದ್ದು, ವಾಸ್ತವದಲ್ಲಿ ಇದು ನಡೆಯುತ್ತಿಲ್ಲ. ಹೆಚ್ಚಿನ ಇಂಗಾಲದೊಂದಿಗೆ ಮಿಶ್ರಿತ ಹೊಗೆಯು ಗಾಳಿಯ ಗುಣಮಟ್ಟ ಕಡಿಮೆ ಮಾಡುತ್ತಿದೆ. ಇದು ಆರೋಗ್ಯಕ್ಕೆ ಅಪಾಯ ಎಂದು ಸಾಮಾಜಿಕ ಕಾರ್ಯಕರ್ತ ಶ್ರೀಶೈಲಗೌಡ ಎಚ್ಚರಿಸುತ್ತಾರೆ.

ಗಾಳಿಯ ಗುಣಮಟ್ಟವನ್ನು ಪರಿಶೀಲಿಸಲು ಮೇಲಿನ ಯಾವುದೇ ಪ್ರದೇಶಗಳಲ್ಲಿ ಗಾಳಿಯ ಗುಣಮಟ್ಟದ ಮೇಲ್ವಿಚಾರಣಾ ಸಾಧನವನ್ನು ಸ್ಥಾಪಿಸಿದ್ದಕ್ಕಾಗಿ ನಿವಾಸಿಗಳು ವಾಯು ಮಾಲಿನ್ಯ ನಿಯಂತ್ರಣ ಅಧಿಕಾರಿಗಳ ವಿರುದ್ಧವೂ ಆಕ್ರೋಶ ವ್ಯಕ್ತವಾಗಿದೆ. ಜತೆಗೆ ಮಹಾನಗರ ಪಾಲಿಕೆಯು ಈ ಅಪಾಯ ತಡೆಯಲು ನಿರ್ದಿಷ್ಟ, ಶಾಶ್ವತ ಯೋಜನೆಯನ್ನು ರೂಪಿಸಬೇಕು ಎಂಬ ಆಗ್ರಹವಿದೆ. ಶಾಶ್ವತ ಪರಿಹಾರಕ್ಕೆ ಕ್ರಮ..

ಇಂದೋರ್‌ ಮಾದರಿಯಲ್ಲಿ ವೈಜ್ಞಾನಿಕವಾಗಿ ಕಸ ಸಂಗ್ರಹಣೆ ಹಾಗೂ ಅದರ ನಿರ್ವಹಣೆ ಮಾಡಲು ತೀರ್ಮಾನಿಸಲಾಗಿದೆ. ಅದರಲ್ಲೂ ಹೊಸಯಲ್ಲಾಪೂರ ಸಮಸ್ಯೆ ಗಮನಕ್ಕೆ ಬಂದಿದ್ದು, ಶಾಶ್ವತ ಪರಿಹಾರಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು.

ಜ್ಯೋತಿ ಪಾಟೀಲ, ಮಹಾನಗರ ಪಾಲಿಕೆ ಮೇಯರ್‌