ಸಾರಾಂಶ
ಅಲ್ಲಮಪ್ರಭು ವಚನಗಳಲ್ಲಿ ಅರಿವಿನ ಅನುಸಂಧಾನ ಕುರಿತು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಶರಣರ ವಿಚಾರಧಾರೆಗಳ ಅನುಕರಣೆ ಮುಖ್ಯವಾದದ್ದು. ನಮ್ಮ ಮನಸ್ಸು ಪಾವನವಾಗಬೇಕಾದರೆ ಚಿಂತನೆಗಳು ಪವಿತ್ರಪೂರ್ಣವಾಗಿರಬೇಕು. ಈ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ
ಕನ್ನಡಪ್ರಭ ವಾರ್ತೆ ಮೈಸೂರು
ಶರಣರ ಚಿಂತನೆಗಳು ಸದಾ ಕಾಲಕ್ಕೂ ಸಾರ್ವಕಾಲಿಕವಾದದ್ದು ಎಂದು ಮಾದಳ್ಳಿ ಉಕ್ಕಿನಕಂತೆ ಮಠದ ಶ್ರೀ ಸದಾಶಿವ ಸ್ವಾಮೀಜಿ ತಿಳಿಸಿದರು.ನಗರದ ಶ್ರೀ ಹೊಸಮಠದಲ್ಲಿ ಸೋಮವಾರ ನಡೆದ ವ್ಯೋಮಮೂರುತಿ ಅಲ್ಲಮಪ್ರಭು ಜಯಂತಿ ಮತ್ತು ವಿದ್ವಾನ್ ಶ್ರೀ ಬಸವಲಿಂಗ ಮಹಾಸ್ವಾಮಿಗಳವರ 73ನೇ ವರ್ಷದ ಪುಣ್ಯಾರಾಧನಾ ಮಹೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶರಣರ ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಬದುಕು ಸತ್ವಪೂರ್ಣವಾಗಿರುತ್ತದೆ ಎಂದರು.
ಅಲ್ಲಮಪ್ರಭು ವಚನಗಳಲ್ಲಿ ಅರಿವಿನ ಅನುಸಂಧಾನ ಕುರಿತು ಸಂಸ್ಕೃತಿ ಚಿಂತಕ ಶಂಕರ್ ದೇವನೂರು ಮಾತನಾಡಿ, ಪ್ರತಿಯೊಬ್ಬರ ಬದುಕಿನಲ್ಲಿ ಶರಣರ ವಿಚಾರಧಾರೆಗಳ ಅನುಕರಣೆ ಮುಖ್ಯವಾದದ್ದು. ನಮ್ಮ ಮನಸ್ಸು ಪಾವನವಾಗಬೇಕಾದರೆ ಚಿಂತನೆಗಳು ಪವಿತ್ರಪೂರ್ಣವಾಗಿರಬೇಕು. ಈ ನೆಲ, ಜಲ, ಭಾಷೆ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಹೇಳಿದರು.ಬದುಕು ಹೂವಿನಂತೆ ಮೃದುತ್ವವನ್ನು ಹೊಂದಬೇಕಾದರೆ ನಮ್ಮ ವಿಚಾರಧಾರೆಗಳು ಸರಳ ಹಾಗೂ ವೈಶಿಷ್ಟ್ಯ ಪೂರ್ಣವಾಗಿ ಇರಬೇಕು. ಅಲ್ಲಮಪ್ರಭುವಿನ ವಿಚಾರಧಾರೆಗಳು ಬದುಕಿಗೆ ಮಾದರಿಪೂರ್ಣವಾದದ್ದು. ಭಾರತದ ಧಾರ್ಮಿಕ ಇತಿಹಾಸದಲ್ಲಿ 12ನೇ ಶತಮಾನದ ವಚನ ಸಾಹಿತ್ಯದ ಕಾಲಘಟ್ಟವು ಅತ್ಯಂತ ಮಹತ್ವದ ಕಾಲಘಟ್ಟ. ಈ ಕಾಲಘಟ್ಟದಲ್ಲಿ ಅರಿವಿನ ನೆಲೆಗೆ ಹೆಚ್ಚಿನ ಆದ್ಯತೆ ಇತ್ತು. ಈಗ ಎಲ್ಲೆಡೆ ಜಡತ್ವವೇ ಕಂಡು ಬರುತ್ತಿದೆ ಎಂದು ಅವರು ತಿಳಿಸಿದರು.
ಯುದ್ಧಗಳು ಕೇವಲ ಮನುಷ್ಯನ ದೇಹವನ್ನು ನಾಶ ಮಾಡುವುದಿಲ್ಲ. ಬದಲಿಗೆ ಮನಸ್ಸನ್ನು ನಾಶ ಮಾಡುತ್ತದೆ. ಕೇವಲ ಕಣ್ಣುಗಳನ್ನು ತೆರೆದರೆ ಸಾಲದು, ಅರಿವಿನ ಕಣ್ಣುಗಳನ್ನು ತೆರೆಯಬೇಕು. ಅನುಭವ ಮಂಟಪದ ಶೂನ್ಯ ಸಿಂಹಾಸನದ ಅಧಿಪತಿ ಅಲ್ಲಮಪ್ರಭುಗಳು. ಎಲ್ಲಾ ವರ್ಗಗಳನ್ನೂ ಸಮಾನ ದೃಷ್ಟಿಯಿಂದ ನೋಡಬೇಕೆಂದು ಆಗಿನ ಕಾಲಘಟ್ಟದಲ್ಲೇ ಶರಣ ಪರಂಪರೆ ತಿಳಿಸಿತ್ತು. ಅನುಭಾವದ ಬೆಳಕನ್ನು ಸಮಾಜಕ್ಕೆ ಪಸರಿಸಿದವರು ಶಿವ- ಶರಣರು, ಅಕ್ಷರ ಅಹಂಕಾರವಾಗಬಾರದು, ಅಂತಃಕರಣವಾಗಬೇಕು ಎಂದರು.ಹೊಸಮಠದ ಶ್ರೀ ಚಿದಾನಂದ ಸ್ವಾಮೀಜಿ, ಕನಕಪುರ ದೇಗುಲಮಠದ ಕಿರಿಯ ಶ್ರೀಗಳಾದ ಶ್ರೀ ಚನ್ನಬಸವ ಸ್ವಾಮೀಜಿ,
ಎಂ.ಎಲ್. ಹುಂಡಿ ವಿರಕ್ತಮಠದ ಶ್ರೀ ಗೌರಿಶಂಕರ ಸ್ವಾಮೀಜಿ, ಕುದುರು ಮಠದ ಶ್ರೀ ಗುರುಶಾಂತ ಸ್ವಾಮೀಜಿ, ನಮಃ ಶಿವಾಯ ಮಠದ ಶ್ರೀ ಮಹಾದೇವ ದೇಶಿಕೇಂದ್ರ ಸ್ವಾಮೀಜಿ ಇದ್ದರು. ವಿ.ಡಿ. ಸುನಿತಾರಾಣಿ ನಿರೂಪಿಸಿದರು. ಎಂ.ಎಸ್. ಸಂಧ್ಯಾರಾಣಿ ಸ್ವಾಗತಿಸಿದರು. ಚೂಡಾಮಣಿ ಪ್ರಾರ್ಥಿಸಿದರು. ಎಚ್.ಬಿ. ಬಸಪ್ಪ ವಂದಿಸಿದರು.