ಸಾರಾಂಶ
ಈ ಹಿಂದೆ ಕೂಡ ಮಂಜುನಾಥ ಆತ್ಮಹತ್ಯೆಗೆ ಯತ್ನಿಸಿದ್ದ.
ಹೊಸಪೇಟೆ: ಇಲ್ಲಿನ ನಗರಸಭೆ ದ್ವಿತೀಯ ದರ್ಜೆ ಸಹಾಯಕ ಹಾಗೂ ಬಿಲ್ ಕಲೆಕ್ಟರ್ ಮಂಜುನಾಥ (28) ಹಂಪಿ ಸಮೀಪದ ಕಡ್ಡಿರಾಂಪುರದ ಹೋಂ ಸ್ಟೇನಲ್ಲಿ ಬುಧವಾರ ರಾತ್ರಿ ನೇಣಿಗೆ ಶರಣಾಗಿದ್ದಾನೆ.
ಈ ಹಿಂದೆ ಜನವರಿ ಒಂದರಂದು ಕೂಡ ವಾಟ್ಸ್‌ಆ್ಯಪ್‌ನಲ್ಲಿ ತನ್ನ ಸಾವಿಗೆ ನಗರಸಭೆ ಪೌರಾಯುಕ್ತ ಚಂದ್ರಪ್ಪ ಹಾಗೂ ಕಂದಾಯ ನಿರೀಕ್ಷಕ ನಾಗರಾಜ ಕಾರಣ ಎಂದು ಆತ್ಮಹತ್ಯೆಗೆ ಶರಣಾಗುತ್ತಿರುವೆ ಎಂದು ಬರೆದು, ವಿಷ ಸೇವಿಸಿದ್ದ. ಕೂಡಲೇ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಈಗ ಮತ್ತೆ ಜ.8ರಂದು ಕಡ್ಡಿರಾಂಪುರದ ಹೋಂ ಸ್ಟೇನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರಿಗೆ ಯಾವುದೇ ಡೆತ್‌ನೋಟ್ ದೊರೆತಿಲ್ಲ ಎಂದು ಪೊಲೀಸ್ ಮೂಲಗಳಿಂದ ತಿಳಿದು ಬಂದಿದೆ.ಈ ಹಿಂದೆ ಕೂಡ ಮಂಜುನಾಥ ಆತ್ಮಹತ್ಯೆಗೆ ಯತ್ನಿಸಿದ್ದು, ಪೌರಾಯುಕ್ತ ಚಂದ್ರಪ್ಪ ಹಾಗೂ ಕಂದಾಯ ನಿರೀಕ್ಷಕ ನಾಗರಾಜ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆ. ಈ ಹಿಂದೆ ನಾಲ್ಕು ವಾರ್ಡ್‌ಗಳನ್ನು ನೀಡಲಾಗಿತ್ತು. ಮತ್ತೆ ನಾಲ್ಕು ವಾರ್ಡ್‌ಗಳ ಜವಾಬ್ದಾರಿ ನೀಡಲಾಗಿದೆ. ಇದರಿಂದ ಒತ್ತಡಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಆತನಿಗೆ ಪೌರಾಯುಕ್ತ, ಕಂದಾಯ ನಿರೀಕ್ಷಕ ಒತ್ತಡ ಹೇರುತ್ತಿದ್ದ ಬಗ್ಗೆ ನನ್ನ ಬಳಿ ಹೇಳಿಕೊಂಡಿದ್ದಾನೆ ಎಂದು ಹಂಪಿ ಪೊಲೀಸ್ ಠಾಣೆಗೆ ಮಂಜುನಾಥನ ತಾಯಿ ಗೌರಮ್ಮ ದೂರು ಸಲ್ಲಿಸಿದ್ದಾರೆ.
ಈ ಕುರಿತು ಹಂಪಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.